
ಸಿನಿಮಾ ರಂಗಕ್ಕೂ ಕ್ರಿಕೆಟ್ ಕ್ಷೇತ್ರಕ್ಕೂ ಈ ಹಿಂದಿನಿಂದಲೂ ಅವಿನಾಭಾವ ನಂಟಿದೆ. ಸಿನಿಮಾ ಕ್ಷೇತ್ರದಲ್ಲಿ ಟಾಪ್ ನಟಿಯಾಗಿ ಮಿಂಚಿದವರು ಸ್ಟಾರ್ ಕ್ರಿಕೆಟಿಗರ ಜತೆ ಡೇಟಿಂಗ್ ಮಾಡಿದ ಉದಾಹರಣೆ ದೊಡ್ಡ ಸಂಖ್ಯೆಯಲ್ಲಿಯೇ ಇದೆ. ಇನ್ನು ಯುವರಾಜ್ ಸಿಂಗ್ ಹಾಗೂ ಎಂಎಸ್ ಧೋನಿಯಂತಹ ಬಿಗ್ಗೆಸ್ಟ್ ಸ್ಟಾರ್ ಕ್ರಿಕೆಟಿಗರ ಹೆಸರೂ ಸಹ ಇಂತಹ ವಿವಾದಗಳ ತಗುಲಿ ಹಾಕಿಕೊಂಡಿತ್ತು ಎಂಬುದು ಹಳೆ ವಿಷಯ.
ಇನ್ನು ಡೇಟಿಂಗ್ ಹೊರತುಪಡಿಸಿ ಕೆಲ ಕ್ರಿಕೆಟಿಗರು ಸಿನಿಮಾ ನಟಿಯರ ಜತೆ ವೈವಾಹಿಕ ಜೀವನಕ್ಕೂ ಸಹ ಕಾಲಿಟ್ಟಿದ್ದಾರೆ. ಅನುಷ್ಕಾ ಶರ್ಮಾ ಜತೆ ವಿರಾಟ್ ಕೊಹ್ಲಿ ಹಾಗೂ ಇತ್ತೀಚೆಗೆ ಆಥಿಯಾ ಶೆಟ್ಟಿ ವಿವಾಹವಾದ ಕೆಎಲ್ ರಾಹುಲ್ ಇದಕ್ಕೆ ತಾಜಾ ಉದಾಹರಣೆಗಳು.
ಇನ್ನು ಯುವ ಕ್ರಿಕೆಟಿಗರ ಹೆಸರುಗಳೂ ಸಹ ನಟಿಯರ ಜತೆ ತಳುಕಿಹಾಕಿಕೊಳ್ಳುತ್ತಿವೆ. ಅದರಲ್ಲಿಯೂ ಈ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾದ ಮೇಲಂತೂ ಇಂತಹ ಸುದ್ದಿಗಳ ಸಂಖ್ಯೆ ಹೆಚ್ಚಾಗಿಯೇಬಿಟ್ಟಿದೆ. ಕೇವಲ ಸ್ಟಾರ್ ಕ್ರಿಕೆಟಿಗರ ಹೆಸರುಗಳು ಮಾತ್ರವಲ್ಲದೇ ಇನ್ನೂ ಟೀಮ್ ಇಂಡಿಯಾ ಜೆರ್ಸಿ ತೊಡದ ಹಾಗೂ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿಯದ ಆಟಗಾರರ ಹೆಸರುಗಳೂ ಸಹ ಸೇರಿಕೊಂಡಿದೆ.
ಕಳೆದ ಐಪಿಎಲ್ ಆವೃತ್ತಿಯಲ್ಲಿ ಅಬ್ಬರಿಸಿದ್ದ ವೆಂಕಟೇಶ್ ಐಯ್ಯರ್ ಹೆಸರು ತೆಲುಗಿನ ಹಾಟ್ ನಟಿ ಪ್ರಿಯಾಂಕಾ ಜವಾಲ್ಕರ್ ಜತೆ ತಗುಲಿಹಾಕಿಕೊಂಡಿತ್ತು. ಇಬ್ಬರೂ ಸಹ ಪರಸ್ಪರ ಇನ್ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿದ್ದರು ಹಾಗೂ ಕ್ಯೂಟ್, ಹ್ಯಾಂಡ್‌ಸಮ್, ಬ್ಯೂಟಿಫುಲ್ ಎಂಬ ಕಾಮೆಂಟ್‌ಗಳನ್ನೂ ಸಹ ಮಾಡಿಕೊಂಡಿದ್ದರು. ಇದನ್ನೆಲ್ಲಾ ಕಂಡಿದ್ದ ನೆಟ್ಟಿಗರು ಇಬ್ಬರ ನಡುವೆ ಸಂಥಿಂಗ್ ಈಸ್ ಹ್ಯಾಪನಿಂಗ್ ಎಂದಿದ್ದರು.
ಇದೀಗ ಇಂತಹದ್ದೇ ಮತ್ತೊಂದು ಯುವ ಕ್ರಿಕೆಟರ್ ಹಾಗೂ ತೆಲುಗು ನಟಿಯ ನಡುವಿನ ಲವ್ ಸ್ಟೋರಿಯ ಸುದ್ದಿ ಹರಿದಾಡಿದೆ. ಹೌದು, ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ತೆಲುಗಿನ ತನಗಿಂತ ಆರು ವರ್ಷ ಹಿರಿಯ ನಟಿಯ ಜತೆ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ತೆಲುಗು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ತೆಲುಗಿನ ಪ್ರಸಿದ್ಧ ಟಿವಿ ಕಾಮಿಡಿ ಶೋ ಜಬರ್ದಸ್ತ್‌ನಲ್ಲಿ ಭಾಗವಹಿಸಿದ್ದ ನಟಿ ಹಾಗೂ ನಿರೂಪಕಿ ವರ್ಷಿಣಿ ಸೌಂದರ್‌ರಾಜನ್ ಜತೆ ವಾಷಿಂಗ್ಟನ್ ಸುಂದರ್ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿಗಳು ಹರಿದಾಡಿವೆ. ಇನ್ನು ತೆಲುಗಿನ ಐದಾರು ಚಿತ್ರಗಳಲ್ಲಿಯೂ ಸಹ ನಾಯಕಿಯಾಗಿ ನಟಿಸಿರುವ ವರ್ಷಿಣಿ ಸೌಂದರ್‌ರಾಜನ್ ಹೇಳಿಕೊಳ್ಳುವಂತಹ ಯಶಸ್ಸನ್ನು ಸಾಧಿಸಿಲ್ಲ. ಆಕೆ ನಟಿಸಿರುವ ಎಲ್ಲಾ ಚಿತ್ರಗಳೂ ಸಹ ಫ್ಲಾಪ್ ಆಗಿವೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈಕೆ ಸಕ್ರಿಯಳಾಗಿದ್ದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿನ ಸನ್ ರೈಸರ್ಸ್ ಹೈದರಾಬಾದ್ ಅನೇಕ ಪಂದ್ಯಗಳನ್ನು ಮೈದಾನಕ್ಕೆ ತೆರಳಿ ವೀಕ್ಷಿಸಿದ್ದಾರೆ.
ಈ ಕಾರಣದಿಂದಾಗಿಯೇ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಾಷಿಂಗ್ಟನ್ ಸುಂದರ್‌ಗೆ ಹೆಚ್ಚು ಪಂದ್ಯಗಳಲ್ಲಿ ಕಣಕ್ಕಿಳಿಯುವ ಅವಕಾಶವನ್ನು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸ್ ನೀಡಲಿಲ್ಲ ಎಂದೂ ಸಹ ತೆಲುಗು ಮೀಡಿಯಾಗಳು ಬರೆದುಕೊಂಡಿವೆ. ಇನ್ನು ವಾಷಿಂಗ್ಟನ್ ಸುಂದರ್ 23 ವರ್ಷ ವಯಸ್ಸಿನವರಾಗಿದ್ದು, ವರ್ಷಿಣಿ 29 ವರ್ಷ ವಯಸ್ಸಿನವಳಾಗಿದ್ದಾರೆ. ಹೀಗೆ ತನಗಿಂತ ಹಿರಿಯ ವಯಸ್ಸಿನ ಹಾಗೂ ಫ್ಲಾಪ್ ನಟಿಯ ಜತೆ ವಾಷಿಂಗ್ಟನ್ ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ತಿಳಿದ ಅನೇಕರು ವಿರುದ್ಧವಾಗಿಯೇ ಕಾಮೆಂಟ್ ಮಾಡಿದ್ದಾರೆ.