ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಸ್ಪೋಟಕ ಪ್ರದರ್ಶನ ನೀಡಿದ್ದು ದಾಖಲೆಯ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಕೇವಲ 13 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್ ಐಪಿಎಲ್ ಇತಿಹಾಸದ ಅತ್ಯಂತ ವೇಗದ ಅರ್ಧ ಶತಕದ ದಾಖಲೆ ಬರೆದಿದ್ದಾರೆ.
ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಕೇವಲ ಎರಡು ರನ್‌ಗಳ ಅಂತರದಿಂದ ಶತಕ ಗಳಿಸುವ ಅವಕಾಶ ಕಳೆದುಕೊಂಡಿದ್ದಾರೆ. ಆದರೆ ಈ ಇನ್ನಿಂಗ್ಸ್ ಐಪಿಎಲ್ ಇತಿಹಾಸದಲ್ಲಿ ಸುದೀರ್ಘ ಕಾಲದ ಅಭಿಮಾನಿಗಳು ಸ್ಮರಿಸುವಂತಾ ಇನ್ನಿಂಗ್ಸ್ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಇನ್ನು ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಒಂದಲ್ಲ ಎರಡಲ್ಲ ಪ್ರಮುಖ ಐದು ಐಪಿಎಲ್ ದಾಖಲೆಗಳನ್ನು ಮುರಿದ ಸಾಧನೆ ಮಾಡಿದ್ದಾರೆ. ಆ ಐದು ದಾಖಲೆಗಳ ಮಾಹಿತಿ ಇಲ್ಲಿದೆ. ಮುಂದೆ ಓದಿ..

ವೇಗದ ಅರ್ಧ ಶತಕ
ಯಶಸ್ವಿ ಜೈಸ್ವಾಲ್ ಈ ಪಂದ್ಯದಲ್ಲಿ ಅತ್ಯಂತ ವೇಗದ ಅರ್ಧ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಅರ್ಧ ಶತಕಕ್ಕಾಗಿ ಜೈಸ್ವಾಲ್ ಕೇವಲ 13 ಎಸೆತಗಳನ್ನು ಮಾತ್ರವೇ ಬಳಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಈ ಹಿಂದಿನ ದಾಖಲೆ 14 ಎಸೆತಗಳಲ್ಲಿ ಕೆಎಲ್ ರಾಹುಲ್ ಹಾಗೂ ಪ್ಯಾಟ್ ಕಮ್ಮಿನ್ಸ್ ಅರ್ಧ ಶತಕ ಸಿಡಿಸಿ ಸಾಧನೆ ಮಾಡಿದ್ದರು. ಈ ದಾಖಲೆಯನ್ನು ಜೈಸ್ವಾ ಮುರಿದಿದ್ದಾರೆ.
2.5 ಓವರ್‌ಗಳಲ್ಲಿ ಅರ್ಧ ಶತಕ
ಇನ್ನು ತಂಡದ ಓವರ್‌ನ ಲೆಕ್ಕಾಚಾರದಲ್ಲಿಯೂ ಇದು ಅತ್ಯಂತ ವೇಗದ ದಾಖಲೆಯಾಗಿದೆ. ಯಶಸ್ವಿ ಜೈಸ್ವಾಲ್ ರಾಜಸ್ಥಾನ್ ರಾಯಲ್ಸ್ ತಂಡ 2.5 ಓವರ್‌ಗಳನ್ನು ಎದುರಸಿಇದ ಸಂದರ್ಭದಲ್ಲಿ ಅರ್ಧ ಶತಕದ ಸಾಧನೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಜೈಸ್ವಾಲ್ ಮೊದಲ ಓವರ್‌ನಲ್ಲಿಯೇ 26 ರನ್ ಗಳಿಸಿದ್ದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ನಿತೀಶ್ ರಾಣಾ ಓವರ್‌ನಲ್ಲಿ ಸಿಕ್ಸರ್ ಹಾಗೂ ಬೌಂಡರಿಗಳ ಸುರಿಮಳೆಗೈದರು.
ಬ್ಯಾಟರ್ ಆಗಿ ಮೊದಲ ಓವರ್‌ನಲ್ಲಿ ಅತಿ ಹೆಚ್ಚಿನ ರನ್
ಇನ್ನು ಮೊದಲ ಓವರ್‌ನಲ್ಲಿ ಓರ್ವ ಆಟಗಾರಗಳಿಸಿದ ಅತ್ಯಂತ ಹೆಚ್ಚಿನ ರನ್ ಎಂಬ ದಾಖಲೆ ಕೂಡ ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 2021 ಐಪಿಎಲ್‌ನಲ್ಲಿ ಪೃಥ್ವಿ ಶಾ ಮೊದಲ ಓವರ್‌ನಲ್ಲಿ 24 ರನ್‌ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು.
ತಂಡವಾಗಿ 2ನೇ ಅತಿ ಹೆಚ್ಚಿನ ರನ್
ಇನ್ನು ಮೊದಲ ಓವರ್‌ನಲ್ಲಿ ತಂಡವಾಗಿ ಎರಡನೇ ಅತಿ ಹೆಚ್ಚಿನ ರನ್‌ಗಳಿಸಿದ ದಾಖಲೆಯೂ ಕೆಕೆಆರ್ ಹಾಗೂ ಆರ್‌ಆರ್ ವಿರುದ್ಧದ ಪಂದ್ಯದಲ್ಲಿ ದಾಖಲಾಗಿದೆ. ಮೊದಲ ಓವರ್‌ನಲ್ಲಿ ಆರ್‌ಆರ್ ತಂಡ 26 ರನ್‌ಗಳನ್ನು ಕಲೆಹಾಕುವ ಮೂಲಕ ಈ ಸಾಧನೆ ಮಾಡಿದೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಆರ್‌ಸಿಬಿ ತಂಡ ಇದ್ದು 2011ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲ ಓವರ್‌ನಲ್ಲಿ ಆರ್‌ಸಿಬಿ 27 ರನ್ ಕಲೆಹಾಕಿರುವುದು ಈಗಲೂ ದಾಖಲೆಯಾಗಿ ಉಳಿದುಕೊಂಡಿದೆ.
ಅನ್‌ಕ್ಯಾಪ್‌ಡ್ ಆಟಗಾರನಾಗಿ ದಾಖಲೆಯ ರನ್
ಇನ್ನು ಐಪಿಎಲ್‌ನಲ್ಲಿ ಅನ್‌ಕ್ಯಾಪ್‌ಡ್ ಆಟಗಾರನಾಗಿ ಅತ್ಯಂತ ಹೆಚ್ಚಿನ ರನ್‌ಗಳಿಸಿದ ದಾಖಲೆಯನ್ನು ಕೂಡ ಯಶಸ್ವಿ ಜೈಸ್ವಾಲ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಇಶಾನ್ ಕಿಶನ್ 2020ರಲ್ಲಿ 516 ರನ್‌ಗಳಿಸಿದ್ದು ಅನ್‌ಕ್ಯಾಪ್‌ಡ್ ಆಟಗಾರನ ಅತ್ಯಂತ ಹೆಚ್ಚಿನ ಸ್ಕೋರ್ ಆಗಿತ್ತು. ಆದರೆ ಯಶಸ್ವಿ ಜೈಸ್ವಾಲ್ ಈಗಾಗಲೇ 575 ರನ್‌ಗಳನ್ನು ಗಳಿಸಿದ್ದಾರೆ. ಇನ್ನು ಒಟ್ಟಾರೆಯಾಗಿ ಈ ದಾಖಲೆಯನ್ನು ಶಾನ್ ಮಾರ್ಶ್ ಹೊಂದಿದ್ದು 2008ರ ಐಪಿಎಲ್‌ನಲ್ಲಿ ಮಾರ್ಶ್ 616 ರನ್‌ಗಳಿಸಿದ್ದರು.