
ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 43ನೇ ಪಂದ್ಯ ವಿವಾದಗಳ ಕಾರಣಗಳಿಂದಾಗಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಹೌದು, ನಿನ್ನೆ ( ಮೇ 1 ) ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯ ವಿವಾದಗಳ ಗೂಡಾಗಿದೆ.
ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 18 ರನ್‌ಗಳ ಅಂತರದಿಂದ ತವರು ನೆಲದಲ್ಲಿಯೇ ಸೋಲಿಸಿ ಮುಖಭಂಗವಾಗುವಂತೆ ಮಾಡಿತು. ಇನ್ನು ಪಂದ್ಯದದಲ್ಲಿ ಎರಡೂ ತಂಡಗಳು ಅಲ್ಪಮೊತ್ತ ಗಳಿಸಿದರೂ ಸಹ ಪಂದ್ಯದ ವೇಳೆ ಹಾಗೂ ಪಂದ್ಯದ ಬಳಿಕ ನಡೆದ ಜಗಳಗಳು ವೀಕ್ಷಕರನ್ನು ದೊಡ್ಡ ಮಟ್ಟದಲ್ಲಿ ಸೆಳೆದವು ಎಂದೇ ಹೇಳಬಹುದು.
ಹೌದು, ಸಾಮಾಜಿಕ ಜಾಲತಾಣದ ತುಂಬಾ ಈ ಪಂದ್ಯದ ಕುರಿತಾಗಿ ನಡೆದ ಜಗಳಗಳ ಬಗ್ಗೆಯೇ ಪೋಸ್ಟ್‌ಗಳು ಹರಿದಾಡುತ್ತಿದ್ದು, ದೊಡ್ಡ ವಿವಾದಕ್ಕೆ ಎಡೆ ಮಾಡಿಕೊಟ್ಟಿವೆ. ಇನ್ನು ಇತ್ತಂಡಗಳು ಕಳೆದ ಬಾರಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿ ಲಕ್ನೋ ಸೂಪರ್ ಜೈಂಟ್ಸ್ ಗೆದ್ದ ಬಳಿಕ ಗೌತಮ್ ಗಂಭೀರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಸದ್ದು ಮಾಡದಂತೆ ಶ್ ಎಂದು ಸನ್ನೆ ಮೂಲಕ ಕೇವಲವಾಗಿ ಹೇಳಿದ್ದರು.
ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ವಿರಾಟ್ ಕೊಹ್ಲಿ ನಿನ್ನೆಯ ಪಂದ್ಯದಲ್ಲಿ ಗೆದ್ದ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ಆಟಗಾರರ ರೀತಿಯೇ ಪ್ರತ್ಯುತ್ತರವನ್ನು ನೀಡಿದ್ದಾರೆ. ಗಂಭೀರ್ ರೀತಿ ಮೈದಾನದಲ್ಲಿ ನೆರೆದಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಶ್ ಎಂದಿದ್ದ ವಿರಾಟ್ ಕೊಹ್ಲಿ ನಾವು ನಿಮ್ಮನ್ನು ದ್ವೇಷಿಸುವುದಿಲ್ಲ, ಪ್ರೀತಿಸುತ್ತೇವೆ ಎಂದು ಸನ್ನೆ ಮೂಲಕವೇ ಹೇಳಿದ್ದರು.
ಕೇವಲ ಗಂಭೀರ್ ಮಾತ್ರವಲ್ಲದೇ ಪಂದ್ಯದ ವೇಳೆ ನವೀನ್ ಉಲ್ ಹಕ್ ಸಹ ಕೊಹ್ಲಿ ಜಗಳಕ್ಕೆ ಮುಂದಾಗಿದ್ದರು. ಮೂಲತಃ ಅಫ್ಘಾನಿಸ್ತಾನದ ಆಟಗಾರನಾಗಿರುವ ನವೀನ್ ಉಲ್ ಹಕ್ ಬ್ಯಾಟಿಂಗ್ ವೇಳೆ ಕೊಹ್ಲಿ ಸ್ಲೆಡ್ಜ್ ಮಾಡಲು ಮುಂದಾಗಿದ್ದರು. ಇದರಿಂದ ಕುಪಿತಗೊಂಡ ನವೀನ್ ಉಲ್ ಹಕ್ ಕೊಹ್ಲಿ ಜತೆ ಮೈದಾನದಲ್ಲಿಯೇ ವಾಕ್ಸಮರ ನಡೆಸಿದ್ದರು.
ಇಬ್ಬರ ನಡುವಿನ ಜಗಳ ಮಿತಿ ಮೀರುತ್ತಿದೆ ಎನ್ನುವಷ್ಟರಲ್ಲಿ ಅಂಪೈರ್ ಹಾಗೂ ಆಟಗಾರರು ಇಬ್ಬರನ್ನೂ ಸಹ ಬೇರ್ಪಡಿಸಿ ಸಮಾಧಾನಪಡಿಸಲು ಯತ್ನಿಸಿದರು. ಈ ಸಂದರ್ಭದಲ್ಲಿ ಕೊಹ್ಲಿ ತಮ್ಮ ಶೂಗೆ ಅಂಟಿಕೊಂಡಿದ್ದ ಮಣ್ಣನ್ನು ಕಿತ್ತು ತೋರಿಸಿ ನಿನ್ನ ಕೋಪ ನನ್ನ ಕಾಲ ಕೆಳಗೆ ಎಂಬರ್ಥದಲ್ಲಿ ಕೌಂಟರ್ ನೀಡಿದ್ದರು. ಪಂದ್ಯದ ಬಳಿಕ ಕೈಕುಲುಕಲು ಬಂದಾಗಲೂ ಸಹ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ಬೈದುಕೊಂಡೇ ಸಾಗಿದ್ದರು.
ಹೀಗೆ ತೀವ್ರವಾಗಿಯೇ ಇಬ್ಬರ ನಡುವೆ ವಾಕ್ಸಮರ ನಡೆದಿತ್ತು. ಇದೆಲ್ಲ ಮುಗಿದ ಬಳಿಕ ಸರಿ ತಪ್ಪುಗಳ ಚರ್ಚೆ ಆರಂಭಗೊಂಡಿದ್ದವು. ಹಲವು ಹಿರಿಯ ಕ್ರಿಕೆಟಿಗರು ಇದರ ಬಗ್ಗೆ ಪ್ರತಿಕ್ರಿಯೆ ನೀಡಲು ಆರಂಭಿಸಿದ್ದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಾರ್ಕಸ್ ಔರೆಲಿಯಸ್ ಅವರ ಹೇಳಿಕೆಯೊಂದನ್ನು ಪೋಸ್ಟ್ ಮಾಡಿ ಹರಿದಾಡುತ್ತಿದ್ದ ಸುದ್ದಿಗಳ ಬಗ್ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದರು.
"ನೀವು ಕೇಳುವ ಪ್ರತಿ ವಿಷಯವೂ ಸಹ ಒಂದು ಅಭಿಪ್ರಾಯವಾಗಿರುತ್ತದೆಯೇ ಹೊರತು ಸತ್ಯವಾಗಿರುವುದಿಲ್ಲ. ನೀವು ನೋಡುವ ಪ್ರತಿ ಅಂಶವೂ ಸಹ ಒಂದು ದೃಷ್ಟಿಕೋನವಾಗಿರುತ್ತದೆಯೇ ಹೊರತು ಸತ್ಯವಾಗಿರುವುದಿಲ್ಲ" ಎಂದು ಕೊಹ್ಲಿ ಬರೆದುಕೊಂಡಿದ್ದರು.

ಹೀಗೆ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ ಸ್ಟೋರಿ ಹಂಚಿಕೊಂಡ ಬೆನ್ನಲ್ಲೇ ನವೀನ್ ಉಲ್ ಹಕ್ ಸಹ ಇನ್ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಂಚಿಕೊಂಡಿದ್ದು, "ನೀನು ಯಾವುದಕ್ಕೆ ಅರ್ಹನೋ ನಿನಗೆ ಅದೇ ಸಿಗುತ್ತೆ. ಅದುವೇ ನಿಯಮ, ಅದೇ ನಡೆಯಲಿದೆ" ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ನವೀನ್ ಉಲ್ ಹಕ್ ಪರೋಕ್ಷವಾಗಿ ಕೊಹ್ಲಿ ಜತೆ ತಾನು ನಡೆದುಕೊಂಡಿದ್ದ ರೀತಿಗೆ ಆತ ಅರ್ಹ ಎಂಬುದನ್ನು ತಿಳಿಸಿದ್ದಾರೆ.