ಶನಿವಾರ ಸಂಜೆ ಕೋಲ್ಕತ್ತಾದಲ್ಲಿ ಸುನಾಮಿಯ ದರ್ಶನವಾಗಿದೆ. ಈ ಸುನಾಮಿ ಜನರನ್ನು ಭಯ ಭೀತರನ್ನಾಗಿಸಿದೆ. ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಈಡನ್ ಗಾರ್ಡನ್ ಅಂಗಳದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸುನಾಮಿ ಆಟ ಅಭಿಮಾನಿಗಳನ್ನು ರಂಜಿಸಿದೆ ಅಲ್ಲದೆ ದಾಖಲೆ ನಿರ್ಮಿಸಿದೆ.
17ನೇ ಆವೃತ್ತಿಯ ಐಪಿಎಲ್‌ನಲ್ಲಿ ಕೆಕೆಆರ್ ಹಾಗೂ ಎಸ್‌ಆರ್‌ಎಚ್ ತಂಡಗಳು ಮುಖಾಮುಖಿ ಆದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 13.5 ಓವರ್‌ಗಳಲ್ಲಿ 119 ರನ್‌ಗಳಿಸಿ ಆರು ವಿಕೆಟ್ ಕಳೆದುಕೊಂಡಿತ್ತು. ಆಗ ಎಲ್ಲರೂ ಕೆಕೆಆರ್ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಬಹುದು ಎಂಬ ಅಂದಾಜನ್ನೇ ಹಾಕಿಕೊಂಡಿದ್ದರು. ಆದರೆ ಸಾಲ್ಟ್ ಔಟ್ ಆಗುತ್ತಿದ್ದಂತೆ ಅಂಗಳಕ್ಕೆ ಆಂಡ್ರಿ ರಸೆಲ್ ಎಂಬ ಸುನಾಮಿ ಎಂಟ್ರಿ ನೀಡಿತು.

ರಸೆಲ್ ತಾನು ಎದುರಿಸಿದ ಆರನೇ ಎಸೆತದಲ್ಲೇ ಸಿಕ್ಸರ್ ಬಾರಿಸಿ ತಮ್ಮಲ್ಲಿ ಇನ್ನು ಶಕ್ತಿ ಕುಂದಿಲ್ಲ ಎಂಬುದನ್ನು ಸಾಬೀತು ಪಡಿಸಿದರು. ಇಲ್ಲಿಂದ ಶುರುವಾಯಿತು ಕೆಕೆಆರ್ ಅಭಿಮಾನಿಗಳ ನರ್ತನ. ಎಸ್‌ಆರ್‌ಎಚ್ ಸ್ಪಿನ್ ಬೌಲರ್ ಮಯಾಂಕ್ ಮಾರ್ಕಂಡೆ ಎಸೆದ ಪಂದ್ಯದ 16ನೇ ಓವರ್‌ನಲ್ಲಿ ರಸೆಲ್ ಮೂರು ಸಿಕ್ಸರ್ ಸಿಡಿಸಿದರು.
ಹೀಗಂದ ಮಾತ್ರಕ್ಕೆ ಸ್ಪಿನ್ ಬೌಲರ್‌ಗಳ ವಿರುದ್ಧ ಆರ್ಭಟಿಸಿದರು. ನಂತರ ಬೌಲಿಂಗ್ ಮಾಡಲು ಭುವನೇಶ್ವರ್ ಕುಮಾರ್ ಹಾಗೂ ನಟರಾಜನ್ ಅವರಿಗೂ ಕಾಟ ನೀಡಿದ ರಸೆಲ್ ಸಿಕ್ಸರ್ ಬಾರಿಸಿ ಅಬ್ಬರಿಸಿದರು. ಅಲ್ಲದೆ ವಿಶೇಷ ದಾಖಲೆಗೆ ತಮ್ಮ ಹೆಸರನ್ನು ನಮೂದಿಸಿದರು. ಇವರ ಅಬ್ಬರದ ಇನ್ನಿಂಗ್ಸ್ ಪರಿಣಾಮವೇ ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 208 ರನ್ ಗಳಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಎಸ್‌ಆರ್‌ಎಚ್ ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ಗೆ 204 ರನ್ ಗಳಿಸಿ ಸೋಲು ಕಂಡಿತು.
ಹೈದರಾಬಾದ್ ವಿರುದ್ಧ ಆಂಡ್ರೆ ರಸೆಲ್ ಅವರ ಅಬ್ಬರ ಕಂಡು ಬಂದಿತು. ಅವರು 256 ಸ್ಟ್ರೈಕ್ ರೇಟ್‌ನಲ್ಲಿ 25 ಎಸೆತಗಳಲ್ಲಿ 64 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಇವರ ಮನಮೋಹಕ ಇನ್ನಿಂಗ್ಸ್‌ನಲ್ಲಿ 3 ಬೌಂಡರಿಗಳ ಜೊತೆಗೆ 7 ಸಿಕ್ಸರ್ ಸೇರಿವೆ. ಇದರೊಂದಿಗೆ ರಸೆಲ್ ಹಲವು ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಮಾಡಿಕೊಂಡಿದ್ದಾರೆ.

ರಸೆಲ್ ಐಪಿಎಲ್‌ನಲ್ಲಿ 19 ಬಾರಿ 5 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ವಿಚಾರದಲ್ಲಿ ಕ್ರಿಸ್ ಗೇಲ್ ಮುಂದಿದ್ದಾರೆ. ಗೇಲ್ ಐಪಿಎಲ್‌ನಲ್ಲಿ 29 ಬಾರಿ 5 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಅತಿ ಕಡಿಮೆ ಎಸೆತದಲ್ಲಿ 200 ಸಿಕ್ಸರ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ರಸೆಲ್‌ಗೆ ಈಗ ಅಗ್ರ ಸ್ಥಾನ. ವೆಸ್ಟ್ ಇಂಡೀಸ್ ಬ್ಯಾಟರ್ ರಸೆಲ್ 1322 ಎಸೆತಗಳಲ್ಲಿ 200 ಸಿಕ್ಸರ್‌ಗಳನ್ನು ಬಾರಿಸಿದರು. ಇವರು ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ದಾಖಲೆ ಅಳಿಸಿದರು. ಕ್ರಿಸ್ ಗೇಲ್ 1811 ಎಸೆತದಲ್ಲಿ ಈ ಸಾಧನೆ ಮಾಡಿದ್ದರು. ಇನ್ನು ಕೀರಾನ್ ಪೊಲಾರ್ಡ್ 2055 ಎಸೆತಗಳಲ್ಲಿ, ಎಬಿ ಡಿವಿಲಿಯರ್ಸ್ 2790 ಎಸೆತಗಳಲ್ಲಿ, ಮಹೇಂದ್ರ ಸಿಂಗ್ ಧೋನಿ 3126 ಎಸೆತಗಳಲ್ಲಿ, ರೋಹಿತ್ ಶರ್ಮಾ 3798 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ.