ಗುರುವಾರ, ಏಪ್ರಿಲ್ 11ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024ರ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಆರ್‌ಸಿಬಿ ತಂಡ 7 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತು.
ಈ ಮೂಲಕ ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಐಪಿಎಲ್ 2024ರಲ್ಲಿ ಒಟ್ಟು ಸೋಲುಗಳನ್ನು ಕಂಡಿದ್ದು, ಕೇವಲ ಒಂದು ಪಂದ್ಯದಲ್ಲಿ ಮಾತ್ರ ಜಯ ಗಳಿಸಿದೆ. ಹೀಗಾಗಿ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದು ಮುಂದುವರೆದಿದ್ದು, ಪ್ಲೇ ಆಫ್‌ಗೆ ಅರ್ಹತೆಯ ಪಡೆಯುವ ಹಾದಿ ಕಠಿಣವಾಗಿದೆ.

ಇದೀಗ ಆರ್‌ಸಿಬಿ ತಂಡದ ಸತತ ಸೋಲಿಗೆ ನಾಯಕ ಫಾಫ್ ಡು ಪ್ಲೆಸಿಸ್ ಪ್ರತಿಕ್ರಿಯಿಸಿದ್ದು, ಎದುರಾಳಿ ತಂಡಗಳಿಗೆ ಸವಾಲು ಹಾಕುವ ಬೌಲಿಂಗ್ ದಾಳಿಯನ್ನು ಹೊಂದಿಲ್ಲ ಎಂದು ಒಪ್ಪಿಕೊಂಡಿದ್ದಾರೆ.
196 ರನ್ ಗಳಿಸಿದ ಹೊರತಾಗಿಯೂ, ಆರ್‌ಸಿಬಿ ತಂಡ ಬೃಹತ್ ಮೊತ್ತವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದಕ್ಕೆ ನಾಯಕ ಫಾಫ್ ಡು ಪ್ಲೆಸಿಸ್ ಅವರು ಪಂದ್ಯಗಳನ್ನು ಗೆಲ್ಲುವ ಮತ್ತು ಆವೃತ್ತಿಯ ಉಳಿದ ದಿನಗಳಲ್ಲಿ ಪುನರಾಗಮನ ಮಾಡುವ ಭರವಸೆ ಹೊಂದಲು ಆರ್‌ಸಿಬಿ ಬ್ಯಾಟರ್‌ಗಳು ಸತತವಾಗಿ 200ಕ್ಕಿಂತ ಹೆಚ್ಚಿನ ಮೊತ್ತವನ್ನು ಹುಡುಕಬೇಕಾಗಿದೆ ಎಂದು ಹೇಳಿದರು.
ಐಪಿಎಲ್ 2024ರಲ್ಲಿ ಆಡಿದ 6 ಪಂದ್ಯಗಳಲ್ಲಿ ಆರ್‌ಸಿಬಿ ತನ್ನ 5ನೇ ಸೋಲನ್ನು ಎದುರಿಸಿತು ಮತ್ತು ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಹೀನಾಯ ಸೋಲು ಆರ್‌ಸಿಬಿ ಅಭಿಮಾನಿಗಳಿಗೆ ದೊಡ್ಡದಾಗಿ ನಿರಾಶೆಗೊಳಿಸಿದೆ. ಆಟಗಾರರು ಮತ್ತು ತಂಡದ ಮ್ಯಾನೇಜ್‌ಮೆಂಟ್ ಮೇಲೆ ಕೋಪವನ್ನು ಹೊರಹಾಕುತ್ತಿದ್ದಾರೆ.

ನಾಯಕ ಫಾಫ್ ಡು ಪ್ಲೆಸಿಸ್, ರಜತ್ ಪಾಟಿದಾರ್ ಮತ್ತು ದಿನೇಶ್ ಕಾರ್ತಿಕ್ ಅಮೋಘ ಅರ್ಧಶತಕಗಳ ನೆರವಿನಿಂದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವಿರಾಟ್ ಕೊಹ್ಲಿಯ ವೈಫಲ್ಯದ ಹೊರತಾಗಿಯೂ ಸ್ಕೋರ್ ಬೋರ್ಡ್‌ನಲ್ಲಿ 196ರ ಮೊತ್ತವನ್ನು ಕಲೆಹಾಕಲು ತಂಡಕ್ಕೆ ನೆರವಾಯಿತು.
ಆದರೆ, ತವರಿನ ವಾಂಖೆಡೆ ಸ್ಟೇಡಿಯಂನಲ್ಲಿ ಚೇಸಿಂಗ್ ಅನ್ನು ಅಣಕಿಸುವಂತೆ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಬ್ಯಾಟರ್‌ಗಳು ಕೇವಲ 15.3 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಿತು. ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅಬ್ಬರಿಸಿದರು ಮತ್ತು ಆರ್‌ಸಿಬಿ ಬೌಲರ್‌ಗಳನ್ನು ದಂಡಿಸಿದರು.
ಆರ್‌ಸಿಬಿ ತಂಡ ಬಳಸಿದ ಎಲ್ಲಾ 6 ಬೌಲರ್‌ಗಳು ಪ್ರತಿ ಓವರ್‌ಗೆ 10 ರನ್‌ಗಳನ್ನು ಬಿಟ್ಟುಕೊಟ್ಟಿದ್ದರಿಂದ ಆರ್‌ಸಿಬಿ ಬೌಲರ್‌ಗಳಲ್ಲಿ ಒಬ್ಬರೂ ಸಹ ದಂಡನೆಯಿಂದ ಪಾರಾಗಲು ಸಾಧ್ಯವಾಗಲಿಲ್ಲ.
ಗುರುವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡದ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್ 3 ಓವರ್‌ಗಳಲ್ಲಿ 37 ರನ್‌ಗಳನ್ನು ಬಿಟ್ಟುಕೊಟ್ಟು ಮತ್ತೊಮ್ಮೆ ನಿರಾಸೆ ಮೂಡಿಸಿದರು.
"ಬ್ಯಾಟಿಂಗ್ ದೃಷ್ಟಿಕೋನದಿಂದ ನನಗೆ ಅನಿಸುತ್ತದೆ, ನಾವು ಆ 200ಕ್ಕಿಂತ ಹೆಚ್ಚಿನ ಮೊತ್ತ ಕಲೆಹಾಕಬೇಕು. ನಮ್ಮ ಬೌಲಿಂಗ್ ದಾಳಿಯಲ್ಲಿ ದೊಡ್ಡ ಅಸ್ತ್ರಗಳಿಲ್ಲ. ಆದ್ದರಿಂದ ಬ್ಯಾಟಿಂಗ್ ಮೇಲೆ ಹೆಚ್ಚಿನ ಜವಾಬ್ದಾರಿ ಬರುತ್ತದೆ," ಎಂದು ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಹೇಳಿದರು.
"ಬೌಲಿಂಗ್ ದೃಷ್ಟಿಕೋನದಿಂದ, ನಾವು ದೊಡ್ಡ ಅಸ್ತ್ರದ ಕೊರತೆಯನ್ನು ಹೊಂದಿದ್ದೇವೆ. ನಾವು ಪವರ್‌ಪ್ಲೇನಲ್ಲಿ ಎರಡು ಅಥವಾ ಮೂರು ವಿಕೆಟ್‌ಗಳನ್ನು ಪಡೆಯಬೇಕಿತ್ತು. ಮೊದಲ ನಾಲ್ಕು ಓವರ್‌ಗಳ ನಂತರ ನಾವು ಹಿಂದೆ ಬೀಳುತ್ತೇವೆ ಎಂದು ಯಾವಾಗಲೂ ಭಾಸವಾಗುತ್ತದೆ," ಎಂದು ಫಾಫ್ ಡು ಪ್ಲೆಸಿಸ್ ತಿಳಿಸಿದರು.
ಐಪಿಎಲ್ ಹರಾಜಿನಲ್ಲಿ ಉತ್ತಮ ಬೌಲ್‌ರಗಳನ್ನು ಆಯ್ಕೆ ಮಾಡಲು ವಿಫಲವಾದ ನಂತರ, ಆರ್‌ಸಿಬಿ ತಂಡ ಈ ಋತುವಿನಲ್ಲಿ ಮೊತ್ತವನ್ನು ರಕ್ಷಿಸಿಕೊಳ್ಳಲು ಹೆಣಗಾಡಿದೆ. ಕರ್ಣ್ ಶರ್ಮಾ ಮತ್ತು ಮಯಾಂಕ್ ಡಾಗರ್ ಅವರಂತಹ ಸ್ಪಿನ್ನರ್‌ಗಳನ್ನು ಆರ್‌ಸಿಬಿ ಆಯ್ಕೆ ಮಾಡಿದ್ದರಿಂದ ಪ್ರಮುಖ ಸ್ಪಿನ್ನರ್ ಇರಲಿಲ್ಲ.
ಮುಂಬೈ ಇಂಡಿಯನ್ಸ್ ವಿರುದ್ಧ ವಾಂಖೆಡೆಯಲ್ಲಿ ಆರ್‌ಸಿಬಿ ತಂಡಕ್ಕೆ ಇದು ಕಠಿಣವಾದ ರಿಯಾಲಿಟಿ ಚೆಕ್ ಆಗಿತ್ತು. ಏಕೆಂದರೆ ಈ ಬೌಲಿಂಗ್ ದಾಳಿ ನೋಡಿದರೆ 250 ರನ್‌ಗಳು ಸಹ ಸುರಕ್ಷಿತವಲ್ಲ ಎಂಬುದನ್ನು ಸಾಬೀತುಪಡಿಸಿತು.