ಮುಂಬೈ ಇಂಡಿಯನ್ಸ್ ಮತ್ತು ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಐಪಿಎಲ್ 2024ರ ಪಂದ್ಯಾವಳಿಯು ಅತ್ಯಂತ ಹೀನಾಯ ಟಿಪ್ಪಣಿಯಲ್ಲಿ ಮುಕ್ತಾಯಗೊಂಡಿತು. ಶುಕ್ರವಾರ, ಮೇ 17ರ ರಾತ್ರಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ವಿರುದ್ಧ 18 ರನ್‌ಗಳ ಸೋಲು ಈ ಆವೃತ್ತಿಯ 10ನೇ ಸೋಲನ್ನು ಗುರುತಿಸಿತು.
ಅಲ್ಲದೆ, ಐಪಿಎಲ್ 2025ರ ತಮ್ಮ ಆರಂಭಿಕ ಪಂದ್ಯದಿಂದ ಹಾರ್ದಿಕ್ ಪಾಂಡ್ಯ ಅವರಿಗೆ ಬಿಸಿಸಿಐ ನಿಷೇಧ ಹೇರಿದೆ. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯಗೆ ನಿರಾಶೆಯು ಅಲ್ಲಿಗೆ ಕೊನೆಗೊಂಡಿಲ್ಲ, ಐಪಿಎಲ್ 2024ರ ತಮ್ಮ ಅಂತಿಮ ಪಂದ್ಯದಲ್ಲಿ ಮಾಡಿದ ನಿಧಾನಗತಿಯ ಓವರ್-ರೇಟ್ ಅಪರಾಧಕ್ಕಾಗಿ 30 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಶುಕ್ರವಾರ ರಾತ್ರಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ತಮ್ಮ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ವಿರುದ್ಧ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡ ಮುಂಬೈ ಇಂಡಿಯನ್ಸ್ (ಎಂಐ) ನಾಯಕ ಹಾರ್ದಿಕ್ ಪಾಂಡ್ಯಗೆ 30 ಲಕ್ಷ ರೂಪಾಯಿ ದಂಡ ವಿಧಿಸಲಾಯಿತು. ಅಲ್ಲದೆ, ಮುಂಬೈ ಇಂಡಿಯನ್ಸ್ ಆಟಗಾರಿಗೂ ದಂಡ ಹಾಕಲಾಗಿದೆ.
"ಇದು ಐಪಿಎಲ್‌ನ ನೀತಿ ಸಂಹಿತೆಯ ಅಡಿಯಲ್ಲಿ ಕನಿಷ್ಠ ಓವರ್ ರೇಟ್ ಅಪರಾಧಕ್ಕೆ ಸಂಬಂಧಿಸಿದ್ದಾಗಿದ್ದು, ಈ ಆವೃತ್ತಿಯ ಮುಂಬೈ ಇಂಡಿಯನ್ಸ್ ತಂಡದ ಮೂರನೇ ಅಪರಾಧವಾಗಿರುವುದರಿಂದ, ನಾಯಕ ಹಾರ್ದಿಕ್ ಪಾಂಡ್ಯಗೆ 30 ಲಕ್ಷ ರೂಪಾಯಿ ಮತ್ತು ತಂಡದ ಮುಂದಿನ ಪಂದ್ಯವನ್ನು ಆಡದಂತೆ ನಿಷೇಧಿಸಲಾಗಿದೆ," ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

"ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ಆಡುವ 11ರ ಬಳಗದ ಉಳಿದ ಸದಸ್ಯರಿಗೆ ವೈಯಕ್ತಿಕವಾಗಿ 12 ಲಕ್ಷ ರೂಪಾಯಿ ಅಥವಾ ಅವರ ಆಯಾ ಪಂದ್ಯ ಶುಲ್ಕದ ಶೇ.50ರಷ್ಟು ಇದರಲ್ಲಿ ಯಾವುದು ಕಡಿಮೆಯೋ ಅದು ದಂಡ ವಿಧಿಸಲಾಯಿತು," ಎಂದು ಪ್ರಕಟಣೆಯಲ್ಲಿ ಹೇಳಿದೆ.
ಇನ್ನು ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪಂದ್ಯದ ಕುರಿತು ಹೇಳುವುದಾದರೆ, ರೋಹಿತ್ ಶರ್ಮಾ ಮತ್ತು ನಮನ್ ಧೀರ್ ಅವರ ಅರ್ಧಶತಕಗಳ ಅಬ್ಬರದ ಹೊರತಾಗಿಯೂ ಮುಂಬೈ ಇಂಡಿಯನ್ಸ್ 18 ರನ್‌ಗಳಿಂದ ಸೋಲನುಭವಿಸಿತು.

45 ನಿಮಿಷಗಳ ಮಳೆ ವಿರಾಮದ ನಂತರ ಲಕ್ನೋ ಸೂಪರ್ ಜೈಂಟ್ಸ್ ತಂಡ ಗೆಲ್ಲುವ ಮುನ್ನ ನಿಕೋಲಸ್ ಪೂರನ್ 28 ಎಸೆತಗಳಲ್ಲಿ 75 ರನ್ ಗಳಿಸಿ ಸವಾಲಿನ ಮೊತ್ತವನ್ನು ಕಲೆಹಾಕಲು ಸಹಾಯ ಮಾಡಿದರು.
ನಿಕೋಲಸ್ ಪೂರನ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಈ ಪಂದ್ಯದಲ್ಲಿ 8 ಎಂಟು ಸಿಕ್ಸರ್ ಸಿಡಿಸಿದ ಅವರು ಐಪಿಎಲ್ 2024ರಲ್ಲಿ ಈವರೆಗೆ ಅತಿ ಹೆಚ್ಚು ಸಿಕ್ಸರ್ (36) ಗಳಿಸಿದರು. ಅಂತಿಮವಾಗಿ ಎಲ್‌ಎಸ್‌ಜಿ ತಂಡ 10 ಓವರ್‌ಗಳಲ್ಲಿ 69 ರನ್‌ಗಳಿಗೆ 3 ವಿಕೆಟ್‌ಗೆ ಕುಸಿದಿದ್ದ ತಂಡವನ್ನು ಮೇಲಕ್ಕೆತ್ತಿ 200ರ ಗಡಿ ದಾಟಲು ನೆರವಾದರು.
ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಮ್ಮ 14 ಲೀಗ್ ಪಂದ್ಯಗಳಲ್ಲಿ 4 ಗೆಲುವು ಮತ್ತು 10 ಸೋಲು ಅನುಭವಿಸಿ 8 ಅಂಕಗಳೊಂದಿಗೆ ಐಪಿಎಲ್ 2024ರ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಿಯಾಗಿ ಪಂದ್ಯಾವಳಿ ಮುಗಿಸಿತು. ಕೊನೆಯ ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ ಕೊನೆಯ ಸ್ಥಾನ ಪಡೆದಿದೆ.
ಇನ್ನು ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ತಮ್ಮ 14 ಲೀಗ್ ಪಂದ್ಯಗಳಲ್ಲಿ 7 ಗೆಲುವು ಮತ್ತು 7 ಸೋಲು 14 ಅಂಕಗಳೊಂದಿಗೆ ಕೊನೆಗೊಂಡಿತು. ತಮ್ಮ ಕೊನೆಯ 2 ಪಂದ್ಯಗಳ ಸೋಲು ಪ್ಲೇಆಫ್‌ನಲ್ಲಿ ಸ್ಥಾನ ಪಡೆಯುವ ಅವಕಾಶವನ್ನು ಹಾಳುಮಾಡಿಕೊಂಡಿತು.