ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡದ ಭಾಗವಾಗಿರುವ ಇಂಗ್ಲೆಂಡ್ ಬೌಲರ್ ಡೇವಿಡ್ ವಿಲ್ಲಿ ಅವರು ವೈಯಕ್ತಿಕ ಕಾರಣಗಳಿಂದಾಗಿ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೆಲವು ಆರಂಭಿಕ ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ.
ಎಡಗೈ ವೇಗಿ ಡೇವಿಡ್ ವಿಲ್ಲಿ ಐಪಿಎಲ್‌ನ ಕಳೆದ ಎರಡು ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿದ್ದರು. ಆದರೆ, ದುಬೈನಲ್ಲಿ ನಡೆದ 2024ರ ಐಪಿಎಲ್ ಮಿನಿ ಹರಾಜಿನಲ್ಲಿ, ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ಅವರ ಮೂಲ ಬೆಲೆ 2 ಕೋಟಿ ರೂಪಾಯಿಗೆ ಖರೀದಿ ಮಾಡಿತು.

ಲಕ್ನೋ ಸೂಪರ್ ಜೈಂಟ್ಸ್ ತಂಡದ ಹೊಸ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರು ಬುಧವಾರ, ಮಾರ್ಚ್ 20ರಂದು ಈ ವಿಷಯವನ್ನು ಬಹಿರಂಗಪಡಿಸಿದರು. ಶ್ರೀಮಂತ ಕ್ರಿಕೆಟ್ ಲೀಗ್‌ನ 17ನೇ ಋತುವಿನ ಪ್ರಾರಂಭದಲ್ಲಿ ಡೇವಿಡ್ ವಿಲ್ಲಿ ಲಭ್ಯವಿರುವುದಿಲ್ಲ ಎಂದರು.
ಇಂಗ್ಲೆಂಡಿನ ವೇಗಿ ಕಳೆದ ಎರಡು ತಿಂಗಳು ಪ್ರವಾಸದಲ್ಲೇ ಕಳೆದರು. ILT20 ನಲ್ಲಿ ಅಬುಧಾಬಿ ನೈಟ್ ರೈಡರ್ಸ್ ಮತ್ತು ಇತ್ತೀಚೆಗಷ್ಟೇ ಮುಕ್ತಾಯಗೊಂಡ ಪಿಎಸ್‌ಎಲ್‌ನಲ್ಲಿ ಮುಲ್ತಾನ್ ಸುಲ್ತಾನ್ಸ್ ತಂಡದ ಪರ ಆಡಿದರು.
"ಪ್ರಮುಖ ಬೌಲರ್ ಮಾರ್ಕ್ ವುಡ್ ಪಂದ್ಯಾವಳಿಯಿಂದ ಹಿಂದೆ ಸರಿಯುವುದರೊಂದಿಗೆ ಮತ್ತು ಡೇವಿಡ್ ವಿಲ್ಲಿ ಕೂಡ ಈಗ ಬರುವುದಿಲ್ಲ. ಇದರರ್ಥ ನಮಗೆ ಸ್ವಲ್ಪ ಅನುಭವದ ಕೊರತೆಯಾಗಿದೆ. ಆದರೆ ಕಳೆದೆರಡು ದಿನಗಳಲ್ಲಿ ನಾನು ನೋಡಿದ್ದು ನಮ್ಮಲ್ಲಿ ಅಗಾಧ ಪ್ರತಿಭೆ ಇದೆ. ನಮ್ಮ ಕೆಲವು ಹುಡುಗರಿಗೆ ಕೆಲವು ಗಾಯಗಳಾಗಿವೆ. ಆದರೆ ಅವರೆಲ್ಲರೂ ಈ ಕ್ಷಣದಲ್ಲಿ ತುಂಬಾ ಫಿಟ್ ಆಗಿ ಕಾಣುತ್ತಿದ್ದಾರೆ," ಎಂದು ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗದ ದಾಳಿಯ ಬಗ್ಗೆ ಕೇಳಿದಾಗ ಜಸ್ಟಿನ್ ಲ್ಯಾಂಗರ್ ಉತ್ತರಿಸಿದರು.

"ಆಟಗಾರರು ಫಿಟ್ ಮತ್ತು ಆರೋಗ್ಯಕರವಾಗಿ ಕಾಣುತ್ತಾರೆ ಮತ್ತು ಅವರು ತುಂಬಾ ಹಸಿದಿದ್ದಾರೆ. ಆದ್ದರಿಂದ ನಾವು ಅವರನ್ನು ಚೆನ್ನಾಗಿ ನಿರ್ವಹಿಸಬೇಕು. ಇದರಿಂದ ನಾವು ಉತ್ತಮ ಫಲಿತಾಂಶ ಪಡೆಯಬಹುದು ಮತ್ತು ಪಂದ್ಯಾವಳಿಯ ಪ್ರಾರಂಭದಲ್ಲಿ ಮಾತ್ರವಲ್ಲದೆ, ಇಡೀ ಪಂದ್ಯಾವಳಿಯ ಮೂಲಕ ಕೆಲಸ ಮಾಡಬಹುದು," ಎಂದರು.
"ಅಗತ್ಯವಿದ್ದರೆ ನಾವು ಒಬ್ಬ ಸಾಗರೋತ್ತರ ಆಟಗಾರನನ್ನು ನಮ್ಮ ಲೈನ್‌ಅಪ್‌ನಲ್ಲಿ ಇರಿಸಿದ್ದೇವೆ. ಅಲ್ಲಿ ನಾವು ಸ್ವಲ್ಪ ಅನುಭವವನ್ನು ಸೇರಿಸಲು ಸಾಧ್ಯವಾಗುತ್ತದೆ," ಎಂದು ಎಲ್‌ಎಸ್‌ಜಿ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದರು.
ವರದಿಗಳ ಪ್ರಕಾರ, ಲಕ್ನೋ ಮೂಲದ ಫ್ರಾಂಚೈಸ್‌ನಿಂದ ಡೇವಿಡ್ ವಿಲ್ಲಿಯನ್ನು ಇನ್ನೂ ಬದಲಾಯಿಸಲಾಗಿಲ್ಲ ಮತ್ತು ಅವರು ಪಂದ್ಯಾವಳಿಯ ಕೊನೆಯ ಹಂತಗಳಲ್ಲಿ ತಂಡವನ್ನು ಸೇರಿಕೊಳ್ಳಬಹುದು.
ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್‌ನಿಂದ ಪ್ರಾರಂಭಿಸಿ, ಇಂಗ್ಲೆಂಡ್ ಚಳಿಗಾಲದ ಹೆಚ್ಚಿನ ಭಾಗಗಳಲ್ಲಿ ಅವರು ತವರಿನಿಂದ ದೂರವಿದ್ದರು.
34ರ ವರ್ಷದ ಡೇವಿಡ್ ವಿಲ್ಲಿ ಸೋಮವಾರ, ಮಾರ್ಚ್ 18ರಂದು ಪಿಎಸ್‌ಎಲ್ ಫೈನಲ್‌ನಲ್ಲಿ ಆಡಿದ ನಂತರ ತವರಿಗೆ ಮರಳಿದರು. ಅವರು ಕರಾಚಿಯಲ್ಲಿ ಪ್ರಶಸ್ತಿ ನಿರ್ಣಾಯಕ ಪಂದ್ಯದಲ್ಲಿ ಇಸ್ಲಾಮಾಬಾದ್ ಯುನೈಟೆಡ್ ವಿರುದ್ಧ ಸೋತ ಮುಲ್ತಾನ್ ಸುಲ್ತಾನ್ಸ್ ತಂಡವನ್ನು ಪ್ರತಿನಿಧಿಸಿದರು.
ಪಂದ್ಯಾವಳಿಯಲ್ಲಿ ಡೇವಿಡ್ ವಿಲ್ಲಿ ಅವರು ಆಡಿದ 11 ಪಂದ್ಯಗಳಲ್ಲಿ 20.40ರ ಸರಾಸರಿಯಲ್ಲಿ 15 ವಿಕೆಟ್‌ಗಳನ್ನು ಪಡೆದರು. 7.46ರ ಯೋಗ್ಯ ಎಕಾನಮಿ ದರದಲ್ಲಿ ರನ್‌ಗಳನ್ನು ಬಿಟ್ಟುಕೊಟ್ಟರು.
ಐಪಿಎಲ್ 2024ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕಾಗಿ ಆಡಬೇಕಾಗಿದ್ದ ಮಾರ್ಕ್ ವುಡ್, ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ತಮ್ಮ ಕೆಲಸದ ಹೊರೆಯನ್ನು ನಿರ್ವಹಿಸಲು ECB ಕರೆ ಪಡೆದು ಸಂಪೂರ್ಣ ಐಪಿಎಲ್ ಪಂದ್ಯಾವಳಿಯಿಂದ ಹೊರಗುಳಿದರು.
ಇದೀಗ ಡೇವಿಡ್ ವಿಲ್ಲಿ ಅವರ ಅನುಪಸ್ಥಿತಿಯು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮ್ಯಾನೇಜ್‌ಮೆಂಟ್ ಕಳವಳವನ್ನು ಇನ್ನಷ್ಟು ಹೆಚ್ಚಿಸಲಿದೆ. ಆದಾಗ್ಯೂ, ಬೌಲಿಂಗ್ ವಿಭಾಗದಲ್ಲಿ ಸಾಕಷ್ಟು ಪ್ರತಿಭೆಗಳಿದ್ದು, ಅವರು ದೊಡ್ಡ ವೇದಿಕೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಹಸಿವನ್ನು ಹೊಂದಿದ್ದಾರೆ ಎಂದು ಜಸ್ಟಿನ್ ಲ್ಯಾಂಗರ್ ತಿಳಿಸಿದರು.
ಲಕ್ನೋ ಸೂಪರ್ ಜೈಂಟ್ಸ್ ಭಾನುವಾರ, ಮಾರ್ಚ್ 24ರಂದು ಚೊಚ್ಚಲ ಐಪಿಎಲ್ ಪ್ರಶಸ್ತಿಗಾಗಿ ತಮ್ಮ ಅನ್ವೇಷಣೆಯನ್ನು ಪ್ರಾರಂಭಿಸಲಿದೆ. ಕೆಎಲ್ ರಾಹುಲ್ ನಾಯಕತ್ವದ ತಂಡ ಮಧ್ಯಾಹ್ನದ ಪಂದ್ಯದಲ್ಲಿ ಮಾಜಿ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲು ಜೈಪುರಕ್ಕೆ ಪ್ರಯಾಣಿಸಲಿದೆ.