2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದ್ದು, 2024ರ ಮಾರ್ಚ್ 22ರಿಂದ ಅದ್ಧೂರಿಯಾಗಿ ಪ್ರಾರಂಭವಾಗುವ ಸಾಧ್ಯತೆ ಇದೆ. ಟೆಸ್ಟ್ ಸರಣಿ ಮುಗಿಯುತ್ತಿದ್ದಂತೆಯೇ ಎಲ್ಲಾ ಹತ್ತು ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಒಟ್ಟುಗೂಡಿಸಲಿವೆ.
2008ರಿಂದ ಈವರೆಗೆ ಒಂದೇ ಒಂದು ಬಾರಿ ಐಪಿಎಲ್ ಟ್ರೋಫಿ ಎತ್ತಿ ಹಿಡಿಯಲು ಸಾಧ್ಯವಾಗದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತನ್ನ ಚೊಚ್ಚಲ ಪ್ರಶಸ್ತಿ ಗೆಲ್ಲಲು ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲಿದೆ.

ಇದೇ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಅತ್ಯುತ್ತಮ ಮತ್ತು ಕಳಪೆ ಋತುಗಳಲ್ಲಿಯೂ ಸದಾ ಬೆಂಬಲವಾಗಿ ನಿಂತಿದ್ದಕ್ಕೆ ರಾಯಲ್ ತಂಡದ ಲಾಯಲ್ ಅಭಿಮಾನಿಗಳನ್ನು ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಶ್ಲಾಘಿಸಿದರು.
2009, 2011 ಮತ್ತು 2016ರಲ್ಲಿ ಆರ್‌ಸಿಬಿ ತಂಡ ಫೈನಲ್‌ಗೆ ಪ್ರವೇಶಸಿತ್ತು. ಆದರೆ ಕ್ರಮವಾಗಿ ಇದೀಗ ನಿಷ್ಕ್ರಿಯವಾಗಿರುವ ಡೆಕ್ಕನ್ ಚಾರ್ಜರ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಅನುಭವಿಸಿ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.
"ನಾನು ಆರ್‌ಸಿಬಿ ಮತ್ತು ತಂಡದ ಅಭಿಮಾನಿಗಳಂತಹ ಫ್ರಾಂಚೈಸಿ-ಅಭಿಮಾನಿಗಳ ನಡುವಿನ ಸಂಬಂಧವನ್ನು ನೋಡಿಲ್ಲ. ಅವರು ಇಡೀ ಪ್ರಪಂಚದಲ್ಲಿ ಅತ್ಯಂತ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೂ, ಅವರು ಒಂದೇ ಒಂದು ಟ್ರೋಫಿಯನ್ನು ಗೆದ್ದಿಲ್ಲ. ಪ್ರತಿಷ್ಠಿತ ಟ್ರೋಫಿ ಗೆಲ್ಲಲು ಮೂರು ಬಾರಿ ಹತ್ತಿರಕ್ಕೆ ಬಂದರು," ಎಂದು ಇರ್ಫಾನ್ ಪಠಾಣ್ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದರು.
'2016 ಬಹಳ ವಿಶೇಷವಾದ ಋತುವಾಗಿತ್ತು'
ವಿರಾಟ್ ಕೊಹ್ಲಿ 2016ರ ಐಪಿಎಲ್ ಟಿ20 ಪಂದ್ಯಾವಳಿಯ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ನಿರ್ಮಿಸಿದಾಗ ಆರ್‌ಸಿಬಿ ತಂಡಕ್ಕೆ ಗೆಲ್ಲಲು ಉತ್ತಮ ಅವಕಾಶವಿದೆ ಎಂದು ಇರ್ಫಾನ್ ಪಠಾಣ್ ತಿಳಿಸಿದರು.
ಆರ್‌ಸಿಬಿ ನಾಯಕ ಆಡಿದ 16 ಪಂದ್ಯಗಳಲ್ಲಿ 81.08ರ ಸರಾಸರಿ ಮತ್ತು 152.03ರ ಸ್ಟ್ರೈಕ್-ರೇಟ್‌ನಲ್ಲಿ 973 ರನ್ ಗಳಿಸಿದರು ಮತ್ತು 4 ಶತಕಗಳು ಮತ್ತು 7 ಅರ್ಧಶತಕಗಳನ್ನು ಬಾರಿಸಿದರು.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 2016ರ ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ 8 ರನ್‌ಗಳಿಂದ ಸೋಲನುಭವಿಸಿತು. ಆಗ 209 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 200 ರನ್ ಗಳಿಸಿತು.
2024ರಲ್ಲಿ ಆರ್‌ಸಿಬಿ ತಂಡ ಐಪಿಎಲ್ ಟ್ರೋಫಿ ಗೆಲ್ಲಲು ಯಶಸ್ವಿಯಾದರೆ, ಇದು ಟಿ20 ಲೀಗ್ ಇತಿಹಾಸದಲ್ಲಿ 'ದೊಡ್ಡ ಕ್ಷಣ' ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ತಿಳಿಸಿದರು.
"2016ರ ಋತು ವಿರಾಟ್ ಕೊಹ್ಲಿ ಮತ್ತು ಆರ್‌ಸಿಬಿಗೆ ಬಹಳ ವಿಶೇಷವಾದ ಆವೃತ್ತಿಯಾಗಿದೆ. ಇದು ಗೆಲ್ಲುವ ವರ್ಷ ಎಂದು ನಾನು ಭಾವಿಸಿದ್ದೆ. ಒಂದು ವೇಳೆ ವಿರಾಟ್ ಕೊಹ್ಲಿ ಮತ್ತು ಆರ್‌ಸಿಬಿ ಪ್ರಶಸ್ತಿ ಗೆದ್ದರೆ, ಅದು ಆರ್‌ಸಿಬಿ ಇತಿಹಾಸವಲ್ಲ, ಐಪಿಎಲ್ ಇತಿಹಾಸದ ಅತಿದೊಡ್ಡ ಕ್ಷಣವಾಗಲಿದೆ," ಎಂದು ಇರ್ಫಾನ್ ಪಠಾಣ್ ಹೇಳಿದರು.
2022ರ ಐಪಿಎಲ್ ಆವೃತ್ತಿಯ ಮೊದಲು ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿದರು. ಅದರ ನಂತರ, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದಿಂದ ಹೊರ ಬಂದಿದ್ದ ಫಾಫ್ ಡು ಪ್ಲೆಸಿಸ್ ಅವರನ್ನು ಆರ್‌ಸಿಬಿ ನಾಯಕನಾಗಿ ಹೆಸರಿಸಲಾಯಿತು. ಕಳೆದ ವರ್ಷ ಆರ್‌ಸಿಬಿ ಆರನೇ ಸ್ಥಾನ ಪಡೆದು ಪ್ಲೇಆಫ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು.