ಶನಿವಾರದಂದು ಜೈಪುರದಲ್ಲಿ ನಡೆದ ಐಪಿಎಲ್ 2024ರ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ನಿಧಾನಗತಿ ಶತಕಕ್ಕೆ ಹಲವು ಕ್ರಿಕೆಟ್ ತಜ್ಞರು ಟೀಕೆಗಳ ಸುರಿಮಳೆಗೈದರು.
2024ರ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ತಂಡದ ಬ್ಯಾಟಿಂಗ್ ಕ್ರಮಾಂಕವನ್ನು ಏಕಾಂಗಿಯಾಗಿ ತನ್ನ ಹೆಗಲ ಮೇಲೆ ಹೊತ್ತು ಸಾಗುತ್ತಿರುವ ವಿರಾಟ್ ಕೊಹ್ಲಿ ಅವರ ಸ್ಟ್ರೈಕ್ ರೇಟ್ ಮತ್ತೆ ಚರ್ಚೆಯ ವಸ್ತುವಾಗಿದೆ.

ಇದೀಗ ವಿರಾಟ್ ಕೊಹ್ಲಿ ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಬ್ಯಾಟರ್‌ನನ್ನು ನಿಧಾನಗತಿ ಸ್ಟ್ರೈಕ್ ರೇಟ್‌ಗೆ ಗುರಿಪಡಿಸಿ ಟೀಕಿಸುತ್ತಿರುವವರಿಗೆ ತಿರುಗೇಟು ನೀಡಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 72 ಎಸೆತಗಳಲ್ಲಿ 156.94 ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 113 ರನ್ ಗಳಿಸಿ ಆರ್‌ಸಿಬಿ ತಂಡವನ್ನು 183 ರನ್‌ಗಳಿಗೆ ಮುನ್ನಡೆಸಿದರು.

ಆ ಬಳಿಕ ಜೋಸ್ ಬಟ್ಲರ್ ಅವರ ಶತಕ ಮತ್ತು ಸಂಜು ಸ್ಯಾಮ್ಸನ್ ಅವರ ಅರ್ಧಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ ಯಶಸ್ವಿಯಾಗಿ ಗುರಿ ಬೆನ್ನಟ್ಟಿತು. ನಾಲ್ಕು ಎಸೆತ ಮತ್ತು ಆರು ವಿಕೆಟ್‌ಗಳು ಬಾಕಿ ಇರುವಂತೆಯೇ ಪಂದ್ಯವನ್ನು ಗೆದ್ದಿತು. ಇದು ಸದ್ಯ ನಡೆಯುತ್ತಿರುವ 2024ರ ಐಪಿಎಲ್ ಪಂದ್ಯಾವಳಿಯಲ್ಲಿ ಆರ್‌ಸಿಬಿ ತಂಡದ ನಾಲ್ಕನೇ ಸೋಲನ್ನು ಗುರುತಿಸುತ್ತದೆ.
ವಿರಾಟ್ ಕೊಹ್ಲಿಯ ಅವರ ಸ್ಟ್ರೈಕ್ ರೇಟ್ ಅನ್ನು ಟೀಕಿಸಿದವರ ಬಗ್ಗೆ ಹತಾಶೆ ವ್ಯಕ್ತಪಡಿಸಿದ ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ, ಅವರ ಹೇಳಿಕೆಗಳನ್ನು 'ನಾನ್‌ಸೆನ್ಸ್' ಎಂದು ತಳ್ಳಿಹಾಕಿದರು.
35 ವರ್ಷದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ಜನಪ್ರಿಯತೆಯು ಆಗಾಗ್ಗೆ ಅನಗತ್ಯ ಪರಿಶೀಲನೆಗೆ ಕಾರಣವಾಗುತ್ತದೆ ಎಂದು ಒತ್ತಿ ಹೇಳಿದರು ಮತ್ತು ಜನರು ಆತನನ್ನು ಚರ್ಚಿಸುವ ಮೂಲಕ ಗಮನವನ್ನು ಸೆಳೆಯಲು ನೋಡುತ್ತಾರೆ ಎಂದು ರಾಜ್‌ಕುಮಾರ್ ಶರ್ಮಾ ಕಿಡಿಕಾರಿದರು.
"ಈ ಅಸಂಬದ್ಧವಾಗಿ ಮಾತನಾಡುವ ಕೆಲವು ಜನರು, ಪಂದ್ಯದ ಸಂದರ್ಭ, ಪಂದ್ಯದ ಪರಿಸ್ಥಿತಿ ಏನು ಮತ್ತು ಅರ್‌ಸಿಬಿ ತಂಡವು ಹೇಗೆ ಹೆಣಗಾಡುತ್ತಿದೆ ಎಂದು ಅವರಿಗೆ ತಿಳಿದಿಲ್ಲ ಎಂದು ನಾನು ಭಾವಿಸುತ್ತೇನೆ," ಎಂದು ತಿಳಿಸಿದರು.
"ಟೀಕಾಕಾರರು ಸುದ್ದಿಯಲ್ಲಿರಲು ಮಾತ್ರ ಮಾತನಾಡುತ್ತಾರೆ. ಏಕೆಂದರೆ ನೀವು ಯಾವುದೇ ಸಾಮಾನ್ಯ ಆಟಗಾರನ ಬಗ್ಗೆ ಮಾತನಾಡಿದಾಗ, ಅದು ಅವರನ್ನು ಸುದ್ದಿ ಮುಖ್ಯಾಂಶಗಳಲ್ಲಿ ಇರಿಸುವುದಿಲ್ಲ. ಆದರೆ ನೀವು ವಿರಾಟ್ ಕೊಹ್ಲಿಯಂತಹ ಆಟಗಾರನ ಬಗ್ಗೆ ಮಾತನಾಡಿದರೆ, ಇದು ಅವರನ್ನು ಪತ್ರಿಕೆಗಳ ಮುಖ್ಯಾಂಶಗಳಲ್ಲಿ ಪಡೆಯುತ್ತದೆ," ಎಂದು ರಾಜ್‌ಕುಮಾರ್ ಶರ್ಮಾ ಅವರು 'ಇಂಡಿಯನ್ ಸ್ಪೋರ್ಟ್ಸ್ ಫ್ಯಾನ್ಸ್' ಸಂಸ್ಥಾಪಕ ಸುನಿಲ್ ಯಶ್ ಕಲ್ರಾ ಅವರೊಂದಿಗೆ ಇಂಡಿಯಾ ನ್ಯೂಸ್‌ನಲ್ಲಿ ಮಾತನಾಡುತ್ತಾ ಹೇಳಿದರು.
ವಿಮರ್ಶಕರ ಗುರುತಿನ ಬಗ್ಗೆ ರಾಜ್‌ಕುಮಾರ್ ಶರ್ಮಾ ಅವರನ್ನು ಪ್ರಶ್ನಿಸಲಾಯಿತು. ಅದಕ್ಕೆ ಸಂಪಾದಕರು, ಮಾಜಿ ಕ್ರಿಕೆಟಿಗರು ಅಥವಾ ವಿರಾಟ್ ಕೊಹ್ಲಿ ಅವರ ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ಟೀಕೆ ಮಾಡುವ ತಜ್ಞರು. ಇದು ಕೇವಲ ಅಜೆಂಡಾ ಮುಂದಿಡುವ ಲಾಬಿ ಎಂದು ರಾಜ್‌ಕುಮಾರ್ ಶರ್ಮಾ ಪ್ರತಿಕ್ರಿಯಿಸಿದರು.
"ಇದು ಅಜೆಂಡಾವನ್ನು ನಡೆಸುತ್ತಿರುವ ಲಾಬಿ. ಅವರು ಕೇವಲ ಕಾರ್ಯಸೂಚಿಯನ್ನು ನಡೆಸುತ್ತಿದ್ದಾರೆ ಮತ್ತು ನಾವು ಅಭಿಮಾನಿಗಳು ಅಥವಾ ನಿಜವಾದ ವಿಶ್ಲೇಷಕರಾಗಿ ಅವರ ಕಾರ್ಯಸೂಚಿಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ," ಎಂದರು.
"ಕಿಂಗ್ ಯಾವತ್ತಿದ್ದರೂ ಕಿಂಗ್ ಆಗಿ ಇರುತ್ತಾನೆ. ಕ್ರಿಕೆಟ್‌ನ 'ಸಿ' ತಿಳಿದಿರುವ ವ್ಯಕ್ತಿ ಎಂದಿಗೂ ಈ ರೀತಿಯ ಅಸಂಬದ್ಧವಾಗಿ ಮಾತನಾಡುವುದಿಲ್ಲ," ಎಂದು ವಿರಾಟ್ ಕೊಹ್ಲಿ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ತಿಳಿಸಿದರು.