ಒಮ್ಮೆಯಾದರೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ರೋಫಿ ಗೆಲ್ಲುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮಹತ್ವಾಕಾಂಕ್ಷೆ ಬುಧವಾರ, ಮೇ 22ರಂದು ಅಂತ್ಯಗೊಂಡಿದೆ.
ಒಂದಲ್ಲ, ಎರಡಲ್ಲ, ಬರೋಬ್ಬರಿ 17ನೇ ವರ್ಷವೂ ಐಪಿಎಲ್ ಟ್ರೋಫಿ ಬರ ಆರ್‌ಸಿಬಿ ತಂಡಕ್ಕೆ ಎದುರಾಗಿದೆ. ಈ ಬಾರಿಯಾದರೂ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದ್ದ ತಂಡ ಮತ್ತು ಅಭಿಮಾನಿಗಳ ಕಾಯುವಿಕೆ ಮುಂದುವರೆದಿದೆ.
ಐಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತ ನಂತರ ಆರ್‌ಸಿಬಿ ಖಾಲಿ ಕೈಯಲ್ಲಿ ಹೊರಬಿದ್ದಿದೆ.

ಐಪಿಎಲ್‌ನ ನಾಕೌಟ್ ಹಂತಗಳಲ್ಲಿ ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ತಂಡ ತಮ್ಮ ಆವೇಗವನ್ನು ಹೆಚ್ಚಿಸಲು ಸಾಧ್ಯವಾಗದ ಕಾರಣ, ಸತತ ಆರು ಪಂದ್ಯಗಳ ಗೆಲುವಿನ ಓಟವು ಹೃದಯ ವಿದ್ರಾವಕ ಸೋಲಿನೊಂದಿಗೆ ಅಂತ್ಯ ಕಂಡಿದೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧ 4 ವಿಕೆಟ್‌ಗಳಿಂದ ಸೋತ ನಂತರ, ಆರ್‌ಸಿಬಿ ತಂಡವು ನಾಕೌಟ್ ಪಂದ್ಯಗಳ ಸೋಲಿನ ಒತ್ತಡದಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿನ ಇಬ್ಬನಿಯನ್ನು ಪರಿಗಣಿಸಿ, ಸಂಜು ಸ್ಯಾಮ್ಸನ್ ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡರು. ಈ ವೇಳೆ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 172 ರನ್ ಗಳಿಸಲು ಮಾತ್ರ ಶಕ್ತವಾಯಿತು. ನಿರ್ಣಾಯಕ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು.
173 ರನ್‌ಗಳ ಗುರಿ ಪಡೆದ ರಾಜಸ್ಥಾನ್ ರಾಯಲ್ಸ್ ತಂಡ 19 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವಿನ ಗಡಿ ತಲುಪಿತು. ಬೌಲರ್‌ಗಳಿಂದಲೂ ನಿರಾಸೆ ಉಂಟಾಯಿತು.
ಗಮನಾರ್ಹವಾಗಿ, 2022ರ ಐಪಿಎಲ್‌ನ ಎಲಿಮಿನೇಟರ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿದ ನಂತರ, ಆರ್‌ಸಿಬಿ ತಂಡವು ಕ್ವಾಲಿಫೈಯರ್ 2ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತಿತ್ತು.
2020 ಮತ್ತು 2021ರಲ್ಲಿ ಆರ್‌ಸಿಬಿ ಪ್ಲೇಆಫ್ ಪಂದ್ಯಗಳ ಮೊದಲ ಎಲಿಮಿನೇಟರ್‌ನಲ್ಲಿ ಸೋತು ಹೊರಬಿದ್ದಿತ್ತು. 2016ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ಕೊನೆಯ ಬಾರಿಗೆ ಫೈನಲ್ ತಲುಪಿತ್ತು. ಆದರೆ, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ರೋಚಕ ಸೋಲು ಕಂಡಿತ್ತು.
ಹಲವು ವರ್ಷಗಳಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್ ಮತ್ತು ಶೇನ್ ವ್ಯಾಟ್ಸನ್ ಅವರಂತಹ ಕೆಲವು ಅತ್ಯುತ್ತಮ ಬ್ಯಾಟರ್‌ಗಳನ್ನು ಆರ್‌ಸಿಬಿ ಹೊಂದಿದ್ದರೂ, ಐಪಿಎಲ್ ಟ್ರೋಫಿ ಮಾತ್ರ ಗಗನಕುಸುಮವಾಗಿದೆ.
ಆದಾಗ್ಯೂ, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳೊಂದಿಗೆ ಉದ್ಘಾಟನಾ ಆವೃತ್ತಿಯಿಂದ ಐಪಿಎಲ್ ಟ್ರೋಫಿ ಗೆದ್ದಿಲ್ಲದ ಕೇವಲ ಮೂರು ತಂಡಗಳಲ್ಲಿ ಆರ್‌ಸಿಬಿ ಉಳಿದುಕೊಂಡಿದೆ.

2008 - ಅಂಕಪಟ್ಟಿಯಲ್ಲಿ 7ನೇ ಸ್ಥಾನ
2009 - ರನ್ನರ್-ಅಪ್
2010 - ಅಂಕಪಟ್ಟಿಯಲ್ಲಿ 3ನೇ ಸ್ಥಾನ
2011 - ರನ್ನರ್-ಅಪ್
2012 - ಅಂಕಪಟ್ಟಿಯಲ್ಲಿ 5ನೇ ಸ್ಥಾನ
2013 - ಅಂಕಪಟ್ಟಿಯಲ್ಲಿ 5ನೇ ಸ್ಥಾನ
2014 - ಅಂಕಪಟ್ಟಿಯಲ್ಲಿ 7ನೇ ಸ್ಥಾನ
2015 - ಎಲಿಮಿನೇಟರ್
2016 - ರನ್ನರ್-ಅಪ್
2017 - ಅಂಕಪಟ್ಟಿಯಲ್ಲಿ 8ನೇ ಸ್ಥಾನ
2018 - ಅಂಕಪಟ್ಟಿಯಲ್ಲಿ 6ನೇ ಸ್ಥಾನ
2019 - ಅಂಕಪಟ್ಟಿಯಲ್ಲಿ 8ನೇ ಸ್ಥಾನ
2020 - ಎಲಿಮಿನೇಟರ್
2021 - ಎಲಿಮಿನೇಟರ್
2022 - ಕ್ವಾಲಿಫೈಯರ್ 2
2023 - ಅಂಕಪಟ್ಟಿಯಲ್ಲಿ 6ನೇ ಸ್ಥಾನ
2024 - ಎಲಿಮಿನೇಟರ್
ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್‌ಸಿಬಿ ಪರ ವಿರಾಟ್ ಕೊಹ್ಲಿ 33 ರನ್ ಮತ್ತು ರಜತ್ ಪಾಟಿದಾರ್ 34 ರನ್ ಗಳಿಸಿದರು. ಕೊನೆಯಲ್ಲಿ ಮಹಿಪಾಲ್ ಲೊಮ್ರೋರ್‌ನಿಂದ 32 ರನ್‌ಗಳು ಬಂದವು. ಆದರೆ ರಾಜಸ್ಥಾನ್ ವಿರುದ್ಧ ಸವಾಲಿನ ಗುರಿ ಹೊಂದಿಸಲು ಆರ್‌ಸಿಬಿ ತಂಡಕ್ಕೆ ಸಾಕಾಗಲಿಲ್ಲ.
ಬಲಿಷ್ಠ ಆರ್‌ಸಿಬಿ ತಂಡದ ಬ್ಯಾಟಿಂಗ್ ವಿಭಾಗವನ್ನು ನಿಯಂತ್ರಿಸಲು ಅನುಭವಿಗಳಾದ ಆರ್ ಅಶ್ವಿನ್ ಮತ್ತು ಟ್ರೆಂಟ್ ಬೌಲ್ಟ್ ನೇತೃತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಬೌಲಿಂಗ್ ವಿಭಾಗವು ಪ್ರಯತ್ನಿಸಿತು.
ಮತ್ತೊಂದೆಡೆ, ತಮ್ಮ ಚೇಸಿಂಗ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಹೆಚ್ಚು ಶಾಂತವಾಗಿತ್ತು ಮತ್ತು ಸಂಯೋಜನೆಯಿಂದ ಕಂಡುಬಂತು. ಪ್ಲೇಆಫ್‌ಗೆ ಅರ್ಹತೆ ಪಡೆದಿದ್ದರೂ, ಸತತ ನಾಲ್ಕು ಸೋಲುಗಳ ಒತ್ತಡವು ತಂಡದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.
ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್ ಮತ್ತು ಶಿಮ್ರಾನ್ ಹೆಟ್ಮೆಯರ್ ರಾಜಸ್ಥಾನ್ ರಾಯಲ್ಸ್ ತಂಡದ ಯಶಸ್ವಿ ರನ್ ಚೇಸ್‌ನಲ್ಲಿ ಪ್ರಮುಖ ಪಾತ್ರ ವಹಿಸಿದರು.