ಬುಧವಾರ, ಮೇ 22ರಂದು ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವಿನ ಒಂದು ತಂಡವು ಐಪಿಎಲ್ 2024ರಿಂದ ಹೊರಬೀಳಲಿದೆ. ಏಕೆಂದರೆ, ಅಹಮದಾಬಾದ್‌ನಲ್ಲಿ ಉಭಯ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.
ಇಲ್ಲಿ ಗೆದ್ದ ತಂಡವು ಶುಕ್ರವಾರ, ಮೇ 24ರಂದು ಕ್ವಾಲಿಫೈಯರ್ 2ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಚೆನ್ನೈನಲ್ಲಿ ಎದುರಿಸುತ್ತದೆ. ಅಲ್ಲಿ ಗೆದ್ದ ತಂಡವು ಫೈನಲ್‌ನಲ್ಲಿ ಕೆಕೆಆರ್ ತಂಡವನ್ನು ಎದುರಿಸಲಿದ್ದರೆ, ಸೋತ ತಂಡದ ಹಾದಿಯು ಅಂತ್ಯವಾಗುತ್ತದೆ.

ರಾಜಸ್ಥಾನ್ ರಾಯಲ್ಸ್ ತಂಡದ ಕೊನೆಯ ಐದು ಪಂದ್ಯಗಳಲ್ಲಿ ಸತತ ನಾಲ್ಕು ಸೋಲು ಮತ್ತು ಒಂದು ಪಂದ್ಯ ಮಳೆಯಿಂದ ರದ್ದುಗೊಂಡಿದೆ. ಇನ್ನು ಆರ್‌ಸಿಬಿ ತಂಡವು ಸತತ ಆರು ಗೆಲುವುಗಳ ಮೂಲಕ ತಮ್ಮ ಎದುರಾಳಿಗೆ ಎಚ್ಚರಿಕೆ ನೀಡುವಂತೆ ಪ್ಲೇಆಫ್‌ನಲ್ಲಿ ಅನಿರೀಕ್ಷಿತ ಪ್ರವೇಶ ಮಾಡಿದೆ.
2008ರ ಐಪಿಎಲ್ ವಿಜೇತ ರಾಜಸ್ಥಾನ್ ರಾಯಲ್ಸ್ ತಂಡವು ಕೆಲವು ವಾರಗಳ ಹಿಂದೆ ಅದ್ಭುತ ಫಾರ್ಮ್‌ನಲ್ಲಿತ್ತು ಮತ್ತು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದಾಗ, ಇದ್ದಕ್ಕಿದ್ದಂತೆ ದುರ್ಬಲವಾಗಿ ಕಾಣತೊಡಗಿದೆ. ಪ್ರಸಕ್ತ ಅಭಿಯಾನದಲ್ಲಿ ರಾಜಸ್ಥಾನ್ ರಾಯಲ್ಸ್ ಅಜೇಯ ಎಂದು ತೋರಿಸಿದ್ದರು. ಆದರೆ ಕೊನೆಯ ನಾಲ್ಕು ಪಂದ್ಯಗಳು ತಮ್ಮ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿನ ದೌರ್ಬಲ್ಯವನ್ನು ಬಹಿರಂಗಪಡಿಸಿವೆ.

ಇಂಗ್ಲೆಂಡ್ ಬ್ಯಾಟರ್ ಜೋಸ್ ಬಟ್ಲರ್ ಅವರ ನಿರ್ಗಮನವು ರಾಜಸ್ಥಾನ್ ರಾಯಲ್ಸ್‌ನ ಬ್ಯಾಟಿಂಗ್‌ನಿಂದ ಸಾಕಷ್ಟು ಫೈರ್‌ಪವರ್ ಕಿತ್ತುಕೊಂಡಿದೆ. ಇದೀಗ ಯಶಸ್ವಿ ಜೈಸ್ವಾಲ್ (348 ರನ್), ನಾಯಕ ಸಂಜು ಸ್ಯಾಮ್ಸನ್ (504) ಮತ್ತು ರಿಯಾನ್ ಪರಾಗ್ (531) ಮೇಲೆ ಜಾಸ್ತಿ ಅವಲಂಬಿತವಾಗಿದೆ.
ಆರ್‌ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಹಣಾಹಣಿಯು ಏಕಪಕ್ಷೀಯ ಪಂದ್ಯವಾಗಿರಬಹುದು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಕಾಮೆಂಟೇಟರ್ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
"ಈ ಅವೃತ್ತಿಯಲ್ಲಿ ಆರ್‌ಸಿಬಿ ಮಾಡಿರುವುದು ಅಸಾಧಾರಣವಾದದ್ದೇನೂ ಅಲ್ಲ. ಮೊದಲನೆಯದಾಗಿ, ಅವರು ಈ ರೀತಿ ಪುಟಿದೇಳಬಹುದು ಎಂದು ನಂಬಲು, ಅದಕ್ಕೆ ವಿಶೇಷವಾದದ್ದೇನಾದರೂ ಮಾಡಿದ್ದಾರೆ. ಪ್ರಮುಖ ಆಟಗಾರರಾದ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ಹಿರಿಯ ಆಟಗಾರರು. ಅವರು ಇತರ ಆಟಗಾರರನ್ನು ಹೆಚ್ಚು ಹುರಿದುಂಬಿಸುವ ಹುಡುಗರು ಎಂದು ಹೇಳಲೇಬೇಕು".

"ಸತತ ಸೋಲು ಕಂಡಾಗ ತಂಡದ ಇತರ ಸದಸ್ಯರು ತ್ವರಿತವಾಗಿ 'ಓಹ್ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ' ಎಂಬಂತಹ ಪರಿಸ್ಥಿತಿಗೆ ಬರಬಹುದು. ಆದರೆ, ಇಬ್ಬರೂ ಅಸಾಧಾರಣ ಕ್ರಿಕೆಟಿಗರು ತಮ್ಮ ತಂಡಕ್ಕೆ ಹೋರಾಟದ ಛಲ ಮೂಡಿಸಿದ್ದಾರೆ," ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೇಳಿದರು.
"ರಾಜಸ್ಥಾನ್ ರಾಯಲ್ಸ್ ಸತತ ನಾಲ್ಕು ಪಂದ್ಯಗಳಲ್ಲಿ ಸೋತಿದ್ದಾರೆ ಮತ್ತು ತಮ್ಮ ಕೊನೆಯ ಪಂದ್ಯವನ್ನೂ ಆಡಿಲ್ಲ. ಹೀಗಾಗಿ ಅವರು ಅಭ್ಯಾಸದಿಂದ ಹೊರಗುಳಿದಿದ್ದಾರೆ. 11 ದಿನಗಳ ಕಾಲ ಆಡದಿದ್ದರೂ, ಕ್ವಾಲಿಫೈಯರ್‌ನಲ್ಲಿ ಕೆಕೆಆರ್ ಮಾಡಿದಂತಹ ವಿಶೇಷವಾದದ್ದನ್ನು ರಾಜಸ್ಥಾನ್ ಮಾಡದಿದ್ದರೆ, ಆರ್‌ಸಿಬಿ ತಂಡ ಏಕಪಕ್ಷೀಯವಾಗಿ ಪಂದ್ಯವನ್ನು ಗೆಲ್ಲಲಿದೆ," ಎಂದರು.
"ಬುಧವಾರ ಮತ್ತೊಂದು ಏಕಪಕ್ಷೀಯ ಪಂದ್ಯವಾಗಬಹುದೆಂದು ನನ್ನ ಭಯ. ಅಲ್ಲಿ ಆರ್‌ಸಿಬಿ ತಂಡವು ರಾಜಸ್ಥಾನ್ ರಾಯಲ್ಸ್ ಮೇಲೆ ಸವಾರಿ ಮಾಡಲಿದೆ. ಹಾಗಾಗದೇ ಹೋದರೆ ಆಶ್ಚರ್ಯವಾಗುತ್ತದೆ," ಎಂದು ಸುನಿಲ್ ಗವಾಸ್ಕರ್ ತಿಳಿಸಿದರು.