IPL 2024: ಐಪಿಎಲ್‌ನಲ್ಲಿ ಮೂರು ಬಾರಿ ಈ ಸಾಧನೆ ಮಾಡಿದ ಮೊದಲ ಆಟಗಾರ ಸುನಿಲ್ ನರೈನ್
ಭಾನುವಾರ, ಮೇ 26ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಫೈನಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮೂರನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು.
ಈ ಹಿಂದೆ 2012 ಮತ್ತು 2014ರಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಟ್ರೋಫಿ ಎತ್ತಿಹಿಡಿದಿದ್ದರೆ, ದಶಕದ ನಂತ 2024ರಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿತು.

ಇದೇ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಆಲ್‌ರೌಂಡರ್ ಸುನಿಲ್ ನರೈನ್ 2024ರ ಋತುವಿನಲ್ಲಿ ತಮ್ಮ ತಂಡಕ್ಕೆ ಪ್ರಮುಖ ಆಟಗಾರನಾಗಿ ಮೂಡಿಬಂದರು.
ಫೈನಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿದ ನಂತರ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಮೂರು ಬಾರಿ "ಅತ್ಯಂತ ಮೌಲ್ಯಯುತ ಆಟಗಾರ' ಪ್ರಶಸ್ತಿಯನ್ನು ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಐಪಿಎಲ್ 2012ರಲ್ಲಿ 24 ವಿಕೆಟ್‌ಗಳನ್ನು ಪಡೆದ ನಂತರ, ಸುನಿಲ್ ನರೈನ್ ತಮ್ಮ ಮೊದಲ ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿಯನ್ನು ಗೆದ್ದರು. ಅದು ಅವರ ಚೊಚ್ಚಲ ಆವೃತ್ತಿಯಾಗಿತ್ತು. ತಮ್ಮ ಎರಡನೇ ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿಯು 2018ರ ಋತುವಿನಲ್ಲಿ ಅವರು 357 ರನ್ ಗಳಿಸಿ 17 ವಿಕೆಟ್‌ಗಳನ್ನು ಪಡೆದರು.
ಐಪಿಎಲ್‌ನ 17ನೇ ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಗಾಗಿ ಸುನಿಲ್ ನರೈನ್ ಅದ್ಭುತ ಫಾರ್ಮ್‌ನಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದರು. ಬ್ಯಾಟಿಂಗ್‌ನಲ್ಲಿ 488 ರನ್ ಗಳಿಸಿ, ಬೌಲಿಂಗ್‌ನಲ್ಲಿ 17 ವಿಕೆಟ್ ಪಡೆದರು.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ 2024ರ ಫೈನಲ್ ಪಂದ್ಯದಲ್ಲಿ ಸುನಿಲ್ ನರೈನ್ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 16 ರನ್ ನೀಡಿ 1 ವಿಕೆಟ್ ಪಡೆದರು. ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ ಜಯದೇವ್ ಉನಾದ್ಕಟ್ ಅವರನ್ನು ಔಟ್ ಮಾಡಿದರು.
ಕೆಕೆಆರ್ ತಂಡದ ಸಾಧಾರಣ ರನ್ ಚೇಸ್ ಸಮಯದಲ್ಲಿ ಆರಂಭಿಕ ಬ್ಯಾಟರ್ ಸುನಿಲ್ ನರೈನ್ 300 ಸ್ಟ್ರೈಕ್ ರೇಟ್‌ನಲ್ಲಿ 2 ಎಸೆತಗಳಲ್ಲಿ ಆರು ರನ್ ಗಳಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಬ್ಯಾಟರ್‌ಗಳಿಗೆ ಕೆಕೆಆರ್ ಬೌಲರ್‌ಗಳು ಪೆವಿಲಿಯನ್ ದಾರಿ ತೋರಿಸಿದರು. ಅತ್ಯಂತ ದುಬಾರಿ ಖರೀದಿಯೊಂದಿಗೆ ಮಿಚೆಲ್ ಸ್ಟಾರ್ಕ್ ತಮ್ಮ ಬೆಲೆಯನ್ನು ಸಮರ್ಥಿಸಿಕೊಂಡರು.
ನಾಯಕ ಪ್ಯಾಟ್ ಕಮ್ಮಿನ್ಸ್ 19 ಎಸೆತಗಳಲ್ಲಿ 2 ಬೌಂಡರಿ ಮತ್ತು ಒಂದು ಸಿಕ್ಸರ್ ಸಮೇತ 24 ರನ್ ಮತ್ತು ಏಡೆನ್ ಮಾರ್ಕ್ರಾಮ್ 23 ಎಸೆತಗಳಲ್ಲಿ 3 ಬೌಂಡರಿ ಸಹಿತ 20 ರನ್ ಗಳಿಸಿದ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ 18.3 ಓವರ್‌ಗಳಲ್ಲಿ 113 ರನ್‌ಗಳಿಗೆ ಆಲೌಟ್ ಆಯಿತು.
ಆಂಡ್ರೆ ರಸೆಲ್ 19 ರನ್‌ಗಳಿಗೆ 3 ವಿಕೆಟ್ ಪಡೆದು ಕೆಕೆಆರ್ ಪರ ಅಗ್ರ ಬೌಲರ್ ಎನಿಸಿಕೊಂಡರು. ಮಿಚೆಲ್ ಸ್ಟಾರ್ಕ್ 14 ರನ್ ನೀಡಿದ 2 ವಿಕೆಟ್ ಮತ್ತು ಹರ್ಷಿತ್ ರಾಣಾ 24 ರನ್ ನೀಡಿ 2 ವಿಕೆಟ್‌ಗಳೊಂದಿಗೆ ಉತ್ತಮ ಕೊಡುಗೆ ನೀಡಿದರು. ಸುನಿಲ್ ನರೈನ್, ವರುಣ್ ಚಕ್ರವರ್ತಿ ಮತ್ತು ವೈಭವ್ ಅರೋರಾ ತಲಾ ಒಂದು ವಿಕೆಟ್ ಪಡೆದರು.
ಕೆಕೆಆರ್ ಕೇವಲ 10.3 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳು ಬಾಕಿ ಇರುವಂತೆಯೇ 114 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ವೆಂಕಟೇಶ್ ಅಯ್ಯರ್ 26 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಮೂಲಕ ಅಜೇಯ 52 ರನ್ ಮತ್ತು ರಹಮಾನುಲ್ಲಾ ಗುರ್ಬಾಜ್ 32 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸಮೇತ 39 ರನ್ ಗಳಿಸಿ ಫೈನಲ್ ಪಂದ್ಯದಲ್ಲಿ ಕೆಕೆಆರ್ ಪರವಾಗಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications