ಸುದೀರ್ಘ 9 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದ ಶೇನ್ ಬಾಂಡ್ ಎಂಐ ತಂಡವನ್ನು ತೊರೆದಿದ್ದಾರೆ. ಇದೀಗ ಅವರು ಮುಂದಿನ ಐಪಿಎಲ್ ಆವೃತ್ತಿಗಾಗಿ ಮತ್ತೊಂದು ತಂಡಕ್ಕೆ ಬೌಲಿಂಗ್ ಕೋಚ್ ಆಗೊ ಕರ್ತವ್ಯ ನಿರ್ವಹಿಸಲಿದ್ದಾರೆ ಎನ್ನುವುದು ದೃಢಪಟ್ಟಿದೆ.
ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ದಿಗ್ಗಜ ವೇಗದ ಬೌಲರ್ ಶೇನ್ ಬಾಂಡ್ ಮುಂದಿನ ಐಪಿಎಲ್ ಆವೃತ್ತಿಗಾಗಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರ್ಪಡೆಯಾಗಲಿದ್ದು ಸಹಾಯಕ ಕೋಚ್ ಹಾಗೂ ಬೌಲಿಂಗ್ ಕೋಚ್ ಆಗಿ ಜವಾಬ್ಧಾರಿ ವಹಿಸಿಕೊಳ್ಳಲಿದ್ದಾರೆ. ಈ ವಿಚಾರವನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಖಚಿತಪಡಿಸಿದೆ.

ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರಸ್ತುತ ಸಂಜು ಸ್ಯಾಮ್ಸನ್ ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಲಸಿತ್ ಮಲಿಂಗ ಕಳೆದ ಆವೃತ್ತಿಯಲ್ಲಿ ಆರ್‌ಆರ್ ತಂಡದ ಬೌಲಿಂಗ್ ಕೋಚ್ ಆಗಿ ಜವಾಬ್ಧಾರಿ ವಹಿಸಿಕೊಂಡಿದ್ದರು. ಇದೀಗ ಅವರು ತಂಡವನ್ನು ತೊರೆದಿದ್ದು ಆ ಸ್ಥಾನಕ್ಕೆ ಶೇನ್ ಬಾಂಡ್ ಅವರು ಸೇರ್ಪಡೆಯಾಗಿದ್ದಾರೆ.
ಇನ್ನು ಲಸಿತ್ ಮಲಿಂಗ ಕಳೆದ ಎರಡು ಆವೃತ್ತಿಗಳಲ್ಲಿ(2022 ಹಾಗೂ 2023ರ ಆವೃತ್ತಿಯಲ್ಲಿ) ರಾಜಸ್ಥಾನ್ ರಾಯಲ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಜವಾಬ್ಧಾರಿ ನಿರ್ವಹಿಸಿದ್ದರು. ಅದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸುದೀರ್ಘ ಕಾಲ ಪ್ರಮುಖ ವೇಗಿಯಾಗಿ ಕಣಕ್ಕಿಳಿಯುತ್ತಿದ್ದರು. ಇದೀಗ ಮುಂಬರುವ ಆವೃತ್ತಿಗಾಗಿ ಲಸಿತ್ ಮಲಿಂಗ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ಈಗಾಗಲೇ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಬಾಂಡ್ ಆರ್ಆರ್ ತಂಡದತ್ತ ಪ್ರಯಾಣ ಬೆಳೆಸಿದ್ದಾರೆ.
ಶೇನ್ ಬಾಂಡ್ 2015ರಿಂದ 2023ರ ವರೆಗೆ 9 ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಹುದ್ದೆಯನ್ನು ನಿರ್ವಹಿಸಿದ್ದಾರೆ. ಈ ಅವಧಿಯಲ್ಲಿ 2015, 2017, 2019 ಹಾಗೂ 2020ರಲ್ಲಿ ತಂಡ ಚಾಂಪಿಯನ್ ಪಟ್ಟಕ್ಕೇರುವ ಅವಧಿಯಲ್ಲಿ ಕೋಚಿಂಗ್ ಹುದ್ದೆಯಲ್ಲಿದ್ದು ಅತ್ಯಂತ ಯಶಸ್ವಿ ಕೋಚ್ ಎಂಬ ಹೆಗ್ಗಳಿಕೆಗೂ ಪಾತ್ರಾರಾಗಿದ್ದಾರೆ. ಇನ್ನಿ ILT20 ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲಿ ಎಂಐ ಎಮಿರೇಟ್ಸ್ ತಂಡದ ಮುಖ್ಯ ಕೋಚ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.
ಇನ್ನು ಶೇನ್ ಬಾಂಡ್ ಅವರನ್ನು ತಂಡಕ್ಕೆ ಸ್ವಾಗತಿಸಿರುವ ರಾಜಸ್ಥಾನ್ ರಾಯಲ್ಸ್ ಸಾಮಾಜಿಕ ಜಾಲತಾಣದಲ್ಲಿ ಅವರ ಸಾಮರ್ಥ್ಯದ ಬಗ್ಗೆ ವಿಶೇಷ ಮಾತುಗಳನ್ನಾಡಿದೆ. "ಇವರ ಮಾರ್ಗದರ್ಶನದಲ್ಲಿ ಜಸ್ಪ್ರೀತ್ ಬೂಮ್ರಾ, ಮಿಚೆಲ್ ಮೆಕ್ಲನಾಘನ್, ಟ್ರೆಂಟ್ ಬೋಲ್ಟ್ ಹಾಗೂ ಇನ್ನೂ ಹಲವಾರು ಪ್ರಖ್ಯಾತ ಬೌಲರ್‌ಗಳು ಟಿ20 ಸ್ಪೆಶಲಿಸ್ಟ್‌ಗಳಾಗಿ ಖ್ಯಾತರಾಗಿದ್ದಾರೆ. ಆರ್‌ಆರ್ ತಂಡಕ್ಕೆ ಶೇನ್ ಬಾಂಡ್ ಸೇರ್ಪಡೆಯಾಗಿದ್ದು ತಂಡದ ವೇಗಿಗಳಾದ ಪ್ರಸಿದ್ಧ್ ಕೃಷ್ಣ, ನವದೀಪ್ ಸೈನಿ, ಸಂದೀಪ್ ಶರ್ಮಾ, ಕುಲದೀಪ್ ಸೇನ್, ಓಬೇದ್ ಮೆಕಾಯ್, ಕೆಎಂ ಆಸಿಫ್ ಮತ್ತು ಕುಲದೀಪ್ ಯಾದವ್ ಅವರನ್ನು ಒಳಗೊಂಡ ತಂಡಕ್ಕೆ ಮತ್ತಷ್ಟು ಮಾರ್ಗದರ್ಶನ ನೀಡಲಿದ್ದಾರೆ" ಎಂದಿದೆ.