ಸದ್ಯ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಆಡಿದ ಮೂರು ಪಂದ್ಯಗಳಲ್ಲಿ ಒಂದು ಗೆಲುವು ಮತ್ತು ಎರಡು ಸೋಲು ಅನುಭವಿಸಿದೆ.
ಶುಕ್ರವಾರ, ಮಾರ್ಚ್ 29ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ 7 ವಿಕೆಟ್‌ಗಳ ಹೀನಾಯ ಸೋಲು ಕಂಡಿತು.
ಆರ್‌ಸಿಬಿ ನೀಡಿದ 183 ರನ್‌ಗಳ ಸವಾಲಿನ ಗುರಿಯನ್ನು ಕೆಕೆಆರ್ ತಂಡ ಕೇವಲ 16.5 ಓವರ್‌ಗಳಲ್ಲಿ ಬೆನ್ನಟ್ಟಿತು. ಎರಡು ಬಾರಿಯ ಚಾಂಪಿಯನ್ ತಂಡದ ಬ್ಯಾಟರ್‌ಗಳು ಆರ್‌ಸಿಬಿ ಬೌಲಿಂಗ್ ದಾಳಿ ವಿರುದ್ಧ ಅಕ್ಷರಶಃ ಸವಾರಿ ಮಾಡಿದರು.

ಮೊಹಮ್ಮದ್ ಸಿರಾಜ್ 3 ಓವರ್‌ಗಳಲ್ಲಿ 46 ರನ್ ನೀಡಿದರೆ, ಯಶ್ ದಯಾಳ್ ನಾಲ್ಕು ಓವರ್‌ಗಳಲ್ಲಿ 46 ರನ್‌ಗಳನ್ನು ಬಿಟ್ಟುಕೊಟ್ಟು ದುಬಾರಿಯಾದರು. ಇನ್ನು ಅಲ್ಜಾರಿ ಜೋಸೆಫ್ 2 ಓವರ್‌ಗಳಲ್ಲಿ 34 ರನ್‌ಗಳನ್ನು ಬಿಟ್ಟುಕೊಟ್ಟರು ಮತ್ತು ಮಯಾಂಕ್ ಡಾಗರ್ 2.5 ಓವರ್‌ಗಳಲ್ಲಿ 23 ರನ್‌ಗಳನ್ನು ನೀಡಿದರು.
ಐಪಿಎಲ್ 2024ರಲ್ಲಿ ಆರ್‌ಸಿಬಿ ತಂಡದ ಬೌಲಿಂಗ್ ಪ್ರದರ್ಶನವು ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರಿಗೆ ಹಿಡಿಸಲಿಲ್ಲ ಮತ್ತು ಆರ್‌ಸಿಬಿ ಬೌಲಿಂಗ್ ದಾಳಿಯನ್ನು ಟೀಕಿಸಿದರು.
ಪ್ರಸಕ್ತ 2024ರ ಐಪಿಎಲ್‌ನಲ್ಲಿ ಆರ್‌ಸಿಬಿ ತಮ್ಮ ಶಿಬಿರದಲ್ಲಿ ಉತ್ತಮ ಬೌಲರ್‌ಗಳನ್ನು ಹೊಂದಿಲ್ಲ ಎಂದು ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಗಮನಾರ್ಹವಾಗಿ, ಕಳೆದ ವರ್ಷ ಆರ್‌ಸಿಬಿ ಬಿಡುಗಡೆ ಮಾಡಿದ ಬೌಲರ್‌ಗಳ ಬಗ್ಗೆಯೂ ಮಾತನಾಡಿದರು.
"ಆರ್‌ಸಿಬಿ ಬೌಲರ್‌ಗಳು ಎಲ್ಲಿದ್ದಾರೆ? ಐಪಿಎಲ್ 2024ರಲ್ಲಿ ತಂಡ ಉತ್ತಮ ಬೌಲರ್‌ಗಳನ್ನು ಹೊಂದಿಲ್ಲ. ಅವರ ಬೌಲಿಂಗ್ ದಾಳಿಯು ನನಗೆ ಒಂದು ಕಾಳಜಿಯ ಕ್ಷೇತ್ರವಾಗಿದೆ. ಆರ್‌ಸಿಬಿ ಯುಜ್ವೇಂದ್ರ ಚಹಾಲ್ ಜೊತೆ ಏನು ಮಾಡಿದ್ದಾರೆ? ಚಹಾಲ್ ಅತ್ಯುತ್ತಮ ಬೌಲರ್ ಆಗಿದ್ದರು, ಆದರೆ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ಅವರು ಟಿ20 ಕ್ರಿಕೆಟ್‌ನ ಲೆಜೆಂಡ್ ಬೌಲರ್‌ಗಳಲ್ಲಿ ಒಬ್ಬರು," ಎಂದು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದರು.
"ಆರ್‌ಸಿಬಿಗೆ ವನಿಂದು ಹಸರಂಗ ಕೂಡ ಇದ್ದರು, ಆದರೆ ಅವರನ್ನೂ ಬಿಡುಗಡೆ ಮಾಡಲಾಗಿದೆ. ದೊಡ್ಡ ಆಟಗಾರರನ್ನು ಬಿಡುಗಡೆ ಮಾಡುವ ಮೂಲಕ ನೀವು ಪಂದ್ಯಗಳನ್ನು ಗೆಲ್ಲಲು ಸಾಧ್ಯವಿಲ್ಲ. ಮೊಹಮ್ಮದ್ ಸಿರಾಜ್ ಹೊರತುಪಡಿಸಿ, ತಂಡಕ್ಕಾಗಿ ಪಂದ್ಯಗಳನ್ನು ಗೆಲ್ಲಿಸುವ ಯಾವುದೇ ಬೌಲರ್‌ಗಳು ನನಗೆ ಕಾಣುತ್ತಿಲ್ಲ. ಸಿರಾಜ್ ಕೂಡ ಫಾರ್ಮ್‌ಗಾಗಿ ಪರದಾಡುತ್ತಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದಿಂದ ಕರ್ಣ್ ಶರ್ಮಾಗೆ ಆರ್‌ಸಿಬಿ ವಿಶ್ರಾಂತಿ ನೀಡಿತು," ಎಂದು ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟರು.

ಇದೇ ವೇಳೆ, ಹರ್ಭಜನ್ ಸಿಂಗ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಯು ಕೆಲವು ವರ್ಷಗಳಲ್ಲಿ ತಮ್ಮ ಆಟಗಾರರನ್ನು ಬೆಂಬಲಿಸದ ಅಂಶವನ್ನು ಹೈಲೈಟ್ ಮಾಡಿ ಟೀಕಿಸಿದರು.
ಶಿವಂ ದುಬೆ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಾಗಿ ಹೇಗೆ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ ಎಂಬುದನ್ನು ಉದಾಹರಣೆಯಾಗಿ ಹರ್ಭಜನ್ ಸಿಂಗ್ ಉಲ್ಲೇಖಿಸಿದರು.
"ಆರ್‌ಸಿಬಿ ಫ್ರಾಂಚೈಸಿ ಆಟಗಾರರನ್ನು ಬೆಂಬಲಿಸುವುದಿಲ್ಲ. ಈಗ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಾಗಿ ಮ್ಯಾಚ್-ವಿನ್ನಿಂಗ್ ಪ್ರದರ್ಶನ ನೀಡುತ್ತಿರುವ ಶಿವಂ ದುಬೆ ಅವರಿಂದ ಈ ಹಿಂದೆ ಉತ್ತಮವಾದದ್ದನ್ನು ಪಡೆಯಲು ಆರ್‌ಸಿಬಿಗೆ ಸಾಧ್ಯವಾಗಲಿಲ್ಲ," ಎಂದು ಟೀಕಿಸಿದರು.
2023ರಲ್ಲಿ ಸಿಎಸ್‌ಕೆ ಪ್ರಶಸ್ತಿ ವಿಜೇತ ಋತುವಿನಲ್ಲಿ ಶಿವಂ ದುಬೆ ಸ್ಟಾರ್ ಪರ್ಫಾರ್ಮರ್ ಆಗಿದ್ದರು. ಶಿವಂ ದುಬೆ ಆರ್‌ಸಿಬಿ ತಂಡಕ್ಕಾಗಿ ಆಡಿದಾಗ, ಉತ್ತಮ ಪ್ರದರ್ಶನ ನೀಡಲು ವಿಫಲರಾದರು.
ವಾಸ್ತವವಾಗಿ, ಆಟಗಾರರು ಸಿಎಸ್‌ಕೆ ತಂಡದಲ್ಲಿ ಬೆಂಬಲವನ್ನು ಪಡೆಯುತ್ತಾರೆ. ಆದರೆ ಆರ್‌ಸಿಬಿ ತಂಡದಲ್ಲಿ ಪರಿಸ್ಥಿತಿ ವಿಭಿನ್ನವಾಗಿದೆ. ನೀವು 5 ಅಥವಾ 6ನೇ ಕ್ರಮಾಂಕದಲ್ಲಿ ಶಿವಂ ದುಬೆ ಅವರನ್ನು ಬ್ಯಾಟಿಂಗ್‌ಗೆ ಕಳುಹಿಸಿದರೆ, ಅವರು ವಿಫಲರಾಗುತ್ತಾರೆ ಎಂದು ಮಾಜಿ ಕ್ರಿಕೆಟಿಗ ಅಭಿಪ್ರಾಯಪಟ್ಟರು.