ಈಗಾಗಲೇ ಐಪಿಎಲ್ 2024 ಆರಂಭವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಲೇ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡಿದೆ. ತವರಿನಲ್ಲಿ ಮೊದಲ ಪಂದ್ಯ ಹಾಗೂ ಋತುವಿನ ಎರಡನೇ ಪಂದ್ಯ ಆಡಲು ಆರ್‌ಸಿಬಿ ಸಿದ್ಧವಾಗಿದೆ. ತವರಿನಲ್ಲೂ ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಆರ್‌ಸಿಬಿ ಕೊಂಚ ವೀಕ್ ಕಂಡಂತೆ ಕಾಣುತ್ತಿದೆ. ಆದರೆ ಸದ್ಯದ ತಂಡ ಬಲಿಷ್ಠವಾಗಿದೆ.
ಬ್ಯಾಟಿಂಗ್ ಸ್ವರ್ಗ ಎಂದೇ ಕರಿಸಿಕೊಳ್ಳುವ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಬ್ಯಾಟರ್‌ಗಳ ಆರ್ಭಟ ಜೋರಾಗಿರುತ್ತದೆ. ಈ ಅಂಗಳದಲ್ಲಿ ಈಗಾಗಲೇ 84 ಪಂದ್ಯಗಳನ್ನು ಆಡಲಾಗಿದ್ದು, ಇದರಲ್ಲಿ 39 ಆರ್‌ಸಿಬಿ ಗೆಲುವು ಸಾಧಿಸಿದೆ. 40 ಪಂದ್ಯಗಳಲ್ಲಿ ಸೋಲು ಕಂಡಿದೆ. ಆರ್‌ಸಿಬಿ ಹಾಗೂ ಪಂಜಾಬ್ ನಡುವಣ ಅಂಕಿ ಅಂಶಗಳಲ್ಲೂ ಪಂಜಾಬ್ ಮೇಲುಗೈ ಸಾಧಿಸಿದ್ದು ಕಾಣುತ್ತದೆ. ಈಗಾಗಲೇ ಉಭಯ ತಂಡಗಳು ಒಟ್ಟು 31 ಬಾರಿ ಮುಖಾಮುಖಿ ಆಗಿದ್ದು, 14 ರಲ್ಲಿ ಆರ್‌ಸಿಬಿ ಜಯ ಸಾಧಿಸಿದರೆ, 17 ಪಂದ್ಯಗಳಲ್ಲಿ ಪಂಜಾಬ್ ಗೆಲುವಿನ ನಗೆ ಬೀರಿದೆ.

ವಿರಾಟ್ ಕೊಹ್ಲಿ 2008ರಿಂದ ಆರ್‌ಸಿಬಿ ತಂಡದ ಜೆರ್ಸಿಯಲ್ಲಿ ಆಡುತ್ತಿದ್ದಾರೆ. ಈಗಾಗಲೇ ಈ ಮೈದಾನದಲ್ಲಿ ಅವರು 82 ಪಂದ್ಯಗಳ 79 ಇನ್ನಿಂಗ್ಸ್‌ಗಳಲ್ಲಿ ಕಣಕ್ಕೆ ಇಳಿದಿದ್ದು, ರನ್ ಮಹಲ್ ಕಟ್ಟಿದ್ದಾರೆ. ವಿರಾಟ್ 39.13ರ ಸರಾಸರಿ ಹಾಗೂ 140.69 ಸ್ಟ್ರೈಕ್ ರೇಟ್‌ನಲ್ಲಿ 2700 ರನ್ ಸಿಡಿಸಿದ್ದಾರೆ. ಇದರಲ್ಲಿ 4 ಶತಕ ಹಾಗೂ 20 ಅರ್ಧಶತಕಗಳು ಸೇರಿವೆ. ಅಲ್ಲದೆ ಐದು ಬಾರಿ ಸೊನ್ನೆ ಸಹ ಸುತ್ತಿದ್ದಾರೆ. ವಿರಾಟ್ ಈ ಮೈದಾನದಲ್ಲಿ 248 ಬೌಂಡರಿ, 108 ಸಿಕ್ಸರ್ ಬಾರಿಸಿದ್ದಾರೆ.
ಆರ್‌ಸಿಬಿ ತಂಡದ ನಾಯಕ ಫಾಫ್ ಡುಪ್ಲೇಸಿಸ್ ಈ ಅಂಗಳದಲ್ಲಿ ಈಗಾಗಲೇ 11 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಇವರ ಸ್ಟ್ರೈಕ್ ರೇಟ್f 155.91 ಆಗಿದ್ದು, ಸರಾಸರಿ 62.14 ಆಗಿದೆ. ಒಟ್ಟು ಐದು ಅರ್ಧಶತ ಸೇರಿದಂತೆ ಫಾಫ್ 435 ರನ್ ಕಲೆ ಹಾಕಿದ್ದಾರೆ.
ಆರ್‌ಸಿಬಿ ತಂಡದ ಸ್ಟಾರ್ ಆಲ್‌ರೌಂಡರ್ ಗ್ಲೇನ್ ಮ್ಯಾಕ್ಸ್‌ವೆಲ್ ಮೇಲೆ ಭರವಸೆ ಹೆಚ್ಚಿದೆ. ಈ ಪ್ಲೇಯರ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್. ಇವರು ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಧಾರ. ಮ್ಯಾಕ್ಸ್‌ವೆಲ್ 13 ಪಂದ್ಯಗಳನ್ನು ಚಿನ್ನಸ್ವಾಮಿ ಅಂಗಳದಲ್ಲಿ ಆಡಿದ್ದು 303 ರನ್ ಸಿಡಿಸಿದ್ದಾರೆ. ಇದರಲ್ಲಿ 5 ಅರ್ಧಶತಕಗಳು ಸೇರಿವೆ. ಇನ್ನು ಬೌಲಿಂಗ್‌ನಲ್ಲಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ಮೊಹಮ್ಮದ್ ಸಿರಾಜ್ ಅವರಿಗೆ ಚಿನ್ನಸ್ವಾಮಿ ಅಂಗಳ ಎರಡನೇ ತವರು ಎಂದರೆ ತಪ್ಪಾಗಲಾರದು. ಈ ಮೈದಾನದಲ್ಲಿ ಅವರು 15 ಪಂದ್ಯಗಳನ್ನು ಆಡಿದ್ದು 19 ವಿಕೆಟ್ ಕಬಳಿಸಿದ್ದಾರೆ. ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸುವಲ್ಲಿ ಇವರು ಹೆಸರು ವಾಸಿ.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಈ ಸ್ಟಾರ್ ಆಟಗಾರರು ಮನಮೋಹಕ ಆಟವನ್ನು ಆಡಿದಲ್ಲಿ ಜಯದ ನಗೆ ಬೀರಬಹುದು. ಅಲ್ಲದೆ ಯುವ ಆಟಗಾರರು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಆಡಬೇಕು.