2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (ಐಪಿಎಲ್) ಎಲ್ಲ ಹತ್ತು ತಂಡಗಳು ಭರದಿಂದ ಸಿದ್ಧತೆ ನಡೆಸಿವೆ. ಹಲವು ತಂಡಗಳು ತಮ್ಮ ಸ್ಪಾಟ್‌ಗಳನ್ನು ಫಿಲ್ ಮಾಡಿಕೊಳ್ಳಲು ಡಿಸೆಂಬರ್ 19ರಂದು ನಡೆಯುವ ಮಿನಿ ಹರಾಜಿನತ್ತ ಮುಖಮಾಡಿವೆ.
ಇನ್ನು ದುಬೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಸ್ಟಾರ್ ಆಟಗಾರರನ್ನು ತಂಡಕ್ಕೆ ಸೆಳೆಯಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಇನ್ನು ಏಕದಿನ ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಆಟಗಾರರಿಗೆ ಬಂಪರ್ ಹೊಡೆಯುವ ಸಾಧ್ಯತೆ ಇದೆ. ಇನ್ನು ದೇಶೀಯ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಟಗಾರರಿಗೂ ಮಿನಿ ಐಪಿಎಲ್ ಹರಾಜಿನಲ್ಲಿ ಹಣದ ಹೊಳೆ ಹೊರೆಯಬಹುದು.

ಐಪಿಎಲ್‌ನಲ್ಲಿ ತಮ್ಮ ಅಮೋಘ ಪ್ರದರ್ಶನದಿಂದಲೇ ಸದ್ದು ಮಾಡಿದ್ದ ಆಟಗಾರ ಮತ್ತೊಮ್ಮೆ ಎಲ್ಲರ ಚಿತ್ತ ಕದ್ದಿದ್ದಾರೆ. ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕದ ಪರ ಬ್ಯಾಟ್ ಮಾಡಿರುವ ಈ ಸ್ಟಾರ್ ಪ್ಲೇಯರ್ ರನ್ ಮಹಲ್ ಕಟ್ಟಿ ಸೈ ಎನಿಸಿಕೊಂಡಿದ್ದಾರೆ.
ತಾವು ಆಡಿದ ಮೊದಲ ಐಪಿಎಲ್ ಆವೃತ್ತಿಯಲ್ಲೇ ಅಮೋಘ ಪ್ರದರ್ಶನ ನೀಡಿದ್ದ ಈ ಸ್ಟಾರ್ ಪ್ಲೇಯರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಖಾಯಂ ಸದಸ್ಯರಾಗಿದ್ದರು. ಆದರೆ ಬದಲಾದ ಸನ್ನಿವೇಶದಲ್ಲಿ ಬೆಂಗಳೂರು ತಂಡ ಇವರನ್ನು ಕೈ ಬಿಟ್ಟಿತ್ತು.
ಈ ಸ್ಟಾರ್ ಪ್ಲೇಯರ್‌ಗೆ ರಾಜಸ್ಥಾನ ರಾಯಲ್ಸ್ ಕೋಟಿ ಕೋಟಿ ಸುರಿದು ತಂಡಕ್ಕೆ ಸೇರಿಸಿಕೊಂಡಿತು. ಇನ್ನು ರಾಯಲ್ಸ್ ಪರ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದ ಇವರನ್ನು ತಂಡ ಉಳಿಸಿಕೊಳ್ಳುವಲ್ಲಿ ವಿಫಲವಾಯಿತು. ಇದೇ ಚಾನ್ಸ್ ಎಂದು ಕಾಯುತ್ತಾ ಕುಳಿತಿದ್ದ ಲಕ್ನೋ ಸೂಪರ್ ಜೇಂಟ್ಸ್ ಈ ಪ್ಲೇಯರ್‌ನನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತು. ಅವರೇ ಕರ್ನಾಟಕದ ಭರವಸೆಯ ಆಟಗಾರ ದೇವದತ್ ಪಡಿಕ್ಕಲ್.
ದೇವದತ್ ಪಡಿಕ್ಕಲ್ ದೇಶೀಯ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಇವರು, ಎಲ್ಲರ ಗಮನ ಸೆಳೆದಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದಿಂದ ವ್ಯಾಪಾರವಾದ ಕರ್ನಾಟಕದ ಆಟಗಾರ ದೇವದತ್ ಪಡಿಕ್ಕಲ್ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ. ಇದರಿಂದ ಐಪಿಎಲ್‌ಗೂ ಮುನ್ನವೇ ಲಕ್ನೋ ಸೂಪರ್ ಜೇಂಟ್ಸ್ ತಂಡಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದೆ.
ಪ್ರಸಕ್ತ 2023ರ ವಿಜಯ್ ಹಜಾರೆ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡುತ್ತಿರುವ ದೇವದತ್ ಆಡಿದ 5 ಇನ್ನಿಂಗ್ಸ್‌ಗಳಲ್ಲಿ 155ರ ಸರಾಸರಿಯೊಂದಿಗೆ 465 ರನ್ ಸಿಡಿಸಿದ್ದಾರೆ. ಚಂಡೀಗಢ ಹಾಗೂ ಉತ್ತರಾಖಂಡ ವಿರುದ್ಧದ ಪಂದ್ಯದಲ್ಲಿ ಮೂರಂಕಿ ದಾಟಿರುವ ದೇವದತ್ ಪಡಿಕ್ಕಲ್ ಅಬ್ಬರಿಸುತ್ತಿದ್ದಾರೆ. 24 ವರ್ಷದ ಯುವ ಬ್ಯಾಟರ್ ಆಡಿದ ಎಲ್ಲ ಪಂದ್ಯಗಳಲ್ಲೂ 50ಕ್ಕೂ ಹೆಚ್ಚು ರನ್‌ಗಳನ್ನು ಕಲೆಹಾಕಿ ಅಬ್ಬರಿಸಿದ್ದಾರೆ.
2020ರ ಐಪಿಎಲ್‌ನಲ್ಲಿ ಆಡಿದ ಮೊದಲ ಆವೃತ್ತಿಯಲ್ಲೇ ದೇವದತ್ ಪಡಿಕ್ಕಲ್ ಆರ್‌ಸಿಬಿ ಪರ ಆರ್ಭಟಿಸಿದ್ದರು. ಆಡಿದ 15 ಪಂದ್ಯಗಳಲ್ಲಿ 5 ಅರ್ಧಶತಕ ಸೇರಿದಂತೆ 473 ರನ್ ಸಿಡಿಸಿದ್ದ ದೇವದತ್ ಭವಿಷ್ಯದ ಭರವಸೆಯ ಬ್ಯಾಟರ್ ಎನಿಸಿಕೊಂಡಿದ್ದರು.
ಇನ್ನು 2021ರಲ್ಲಿ ನಡೆದಿದ್ದ ಐಪಿಎಲ್ ಟೂರ್ನಿಯಲ್ಲೂ ದೇವದತ್ ಆಡಿದ 14 ಪಂದ್ಯಗಳಲ್ಲಿ 411 ರನ್ ಗಳಿಸಿದ್ದರು. ಇದರಲ್ಲಿ ಒಂದು ಶತಕ ಹಾಗೂ ಒಂದು ಅರ್ಧಶತಕ ಸೇರಿವೆ. ಕಳೆದ ಎರಡು ಆವೃತ್ತಿಯಲ್ಲಿ ಮಂಕಾಗಿರುವ ದೇವದತ್ ಪಡಿಕ್ಕಲ್ ಬ್ಯಾಟಿಂಗ್ ದೇಶೀಯ ಟೂರ್ನಿಗಳಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದು, ಐಪಿಎಲ್‌ನಲ್ಲಿ ಮತ್ತೆ ಮಿಂಚುವ ಇರಾದೆ ಹೊಂದಿದ್ದಾರೆ.