ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಯುವ ವೇಗಿ ಹರ್ಷಿತ್ ರಾಣಾ ವಿಕೆಟ್ ಪಡೆದ ನಂತರ, ಮೈದಾನದಲ್ಲಿ ತನ್ನ ಸಂಭ್ರಮಾಚರಣೆಗಾಗಿ ಈಗಾಗಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿಂದ ಎರಡು ಬಾರಿ ದಂಡ ಮತ್ತು ಒಂದು ಪಂದ್ಯದಿಂದ ನಿಷೇಧಕ್ಕೆ ಒಳಗಾಗಿದ್ದಾರೆ.
ಆದರೂ, ಇದರಿಂದ ಬುದ್ಧಿ ಕಲಿಯದ ಕೆಕೆಆರ್ ಬೌಲರ್ ಹರ್ಷಿತ್ ರಾಣಾ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಪಡೆದ ಬಳಿಕ, ಅತಿರೇಕದ ಸಂಭ್ರಮಾಚರಣೆ ಮಾಡದಿದ್ದರೂ, ಬಾಯಿ ಮೇಲೆ ಬೆರಳಿಟ್ಟುಕೊಂಡು ಬಿಸಿಸಿಐ ಅನ್ನು ಗೇಲಿ ಮಾಡುವ ಸಂಭ್ರಮ ಮಾಡಿದ್ದಾರೆ.

ಕೆಕೆಆರ್ ವೇಗಿ ಹರ್ಷಿತ್ ರಾಣಾ ಅವರು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಅವರಿಗೆ ಫ್ಲೈಯಿಂಗ್ ಕಿಸ್ ನೀಡಿ ಬೀಳ್ಕೊಟ್ಟಿದ್ದಕ್ಕಾಗಿ ಪಂದ್ಯದ ಶೇ.60 ದಂಡ ವಿಧಿಸಿದ್ದರು. ಇತ್ತೀಚೆಗಷ್ಟೇ ಪಂದ್ಯದ ಶುಲ್ಕದ ಶೇ.100ರಷ್ಟು ದಂಡ ಮತ್ತು ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆಗಾಗಿ ಒಂದು ಪಂದ್ಯದಿಂದ ಅಮಾನತುಗೊಳಿಸಲಾಗಿತ್ತು.
ಅನ್‌ಕ್ಯಾಪ್ಡ್ ಭಾರತೀಯ ಬೌಲರ್ ಹರ್ಷಿತ್ ರಾಣಾ ಎಲ್‌ಎಸ್‌ಜಿ ವಿರುದ್ಧದ ತನ್ನ ಸಂಭ್ರಮಾಚರಣೆಯಿಂದ ಮಿತಿಮೀರಿ ಹೋಗಲಿಲ್ಲ. ಆದರೆ ಐಪಿಎಲ್ ಆಯೋಜಕರನ್ನು 'ಗೇಲಿ' ಮಾಡುವಲ್ಲಿ ಯಶಸ್ವಿಯಾದರು.
ಲಕ್ನೋ ವಿರುದ್ಧದ ಪಂದ್ಯದಲ್ಲಿ ಹರ್ಷಿತ್ ರಾಣಾ ಅವರು ಬಾಯಿಯ ಮೇಲೆ ಬೆರಳಿಟ್ಟುಕೊಂಡ ಸಂಭ್ರಮಾಚರಣೆ ನೋಡಿದ ಅಭಿಮಾನಿಗಳು, ವೇಗಿ ಬಿಸಿಸಿಐಗೆ 'ಟೀಸ್' ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಸಹ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರವನ್ನು ಹಂಚಿಕೊಂಡಿದೆ.

ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಹರ್ಷಿತ್ ರಾಣಾ ಮೈದಾನದಲ್ಲಿ ಅತಿರೇಕದಿಂದ ಸಂಭ್ರಮಿಸಿದ್ದಕ್ಕಾಗಿ ಬಿಸಿಸಿಐ ಪಂದ್ಯ ನಿಷೇಧದಂತಹ ಕಠಿಣ ಶಿಕ್ಷೆ ವಿಧಿಸಿತ್ತು.
"2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಬೌಲರ್ ಹರ್ಷಿತ್ ರಾಣಾ ಅವರು ತಮ್ಮ ಪಂದ್ಯದ ಶುಲ್ಕದ ಶೇಕಡಾ 100ರಷ್ಟು ದಂಡವನ್ನು ವಿಧಿಸಿದ್ದಾರೆ ಮತ್ತು ಒಂದು ಪಂದ್ಯದಿಂದ ಅಮಾನತುಗೊಳಿಸಿದ್ದಾರೆ," ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿತ್ತು.
ಐಪಿಎಲ್‌ನ ನೀತಿ ಸಂಹಿತೆಯ ಆರ್ಟಿಕಲ್ 2.5ರ ಅಡಿಯಲ್ಲಿ ಕೆಕೆಆರ್ ವೇಗಿ ಲೆವೆಲ್ 1 ಅಪರಾಧ ಎಸಗಿದ್ದಾರೆ ಎಂದು ಕಂಡುಬಂದಿದೆ. ಹರ್ಷಿತ್ ರಾಣಾ ತಮ್ಮ ತಪ್ಪನ್ನು ಒಪ್ಪಿಕೊಂಡರು ಮತ್ತು ಮ್ಯಾಚ್ ರೆಫರಿಯ ದಂಡವನ್ನು ಸ್ವೀಕರಿಸಿದರು. ಐಪಿಎಲ್ ನೀತಿ ಸಂಹಿತೆಯ ಹಂತ 1 ಉಲ್ಲಂಘನೆಗಾಗಿ, ಮ್ಯಾಚ್ ರೆಫರಿಯ ನಿರ್ಧಾರವು ಅಂತಿಮವಾಗಿದೆ,'' ಎಂದು ಬಿಸಿಸಿಐ ಪ್ರಕಟಣೆಯಲ್ಲಿ ಹೇಳಿತ್ತು.
"ಈ ಹಿಂದೆಯೂ ಹರ್ಷಿತ್ ರಾಣಾ ಅವರಿಗೆ ಐಪಿಎಲ್ ನೀತಿ ಸಂಹಿತೆಯ ಅದೇ ಮಟ್ಟ ಮತ್ತು ಆರ್ಟಿಕಲ್ ಅಡಿಯಲ್ಲಿ ಶೇ.60ರಷ್ಟು ದಂಡ ವಿಧಿಸಲಾಗಿತ್ತು," ಎಂದು ತಿಳಿಸಲಾಗಿದೆ.
ಇದೀಗ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಹರ್ಷಿತ್ ರಾಣಾ ಅವರ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವ ಸಂಭ್ರಮಾಚರಣೆಯನ್ನು ಬಿಸಿಸಿಐ ಅಪರಾಧ ಎಂದು ಪರಿಗಣಿಸುತ್ತದೆಯೇ ಮತ್ತು ಅವರಿಗೆ ಮತ್ತೊಂದು ದಂಡ ವಿಧಿಸುತ್ತದೆಯೇ ಎಂಬುದು ಇನ್ನೂ ತಿಳಿದಿಲ್ಲ.