ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಮೈದಾನಕ್ಕೆ ಕಮ್‌ಬ್ಯಾಕ್ ಮಾಡಲು ಶ್ರಮಿಸುತ್ತಿದ್ದಾರೆ. ಇಂಗ್ಲೆಂಡ್ ಸರಣಿಯ ಮೊದಲ ಪಂದ್ಯದ ಬಳಿಕ ಗಾಯಕ್ಕೆ ತುತ್ತಾಗಿದ್ದ ಕೆಎಲ್ ರಾಹುಲ್ ಈಗ ಮತ್ತೆ ಮೈದಾನಕ್ಕೆ ಮರಳಲು ಸಿದ್ಧತೆ ನಡೆಸಿದ್ದಾರೆ. ಇದೀಗ ಐಪಿಎಲ್ 2024ಕ್ಕೆ ರಾಹುಲ್ ಬೆವರು ಹರಿಸುತ್ತಿರುವುದು ಕಂಡು ಬರುತ್ತಿದೆ.
ಸಾಮಾಜಿಕ ತಾಣದಲ್ಲಿ ರಾಹುಲ್ ಪೋಸ್ಟ್ ಮಾಡಿದ್ದು, ಆ ಮೂಲಕ ಮತ್ತೆ ಕಮ್‌ಬ್ಯಾಕ್ ಮಾಡಲು ಶ್ರಮಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಒಂದು ಚಿತ್ರದಲ್ಲಿ ಅವರ ಕೈಯಲ್ಲಿ ಬ್ಯಾಟ್ ಕೂಡ ಕಂಡುಬರುತ್ತದೆ. ಆದರೆ ಒಂದು ಚಿತ್ರದಲ್ಲಿ ಅವರು ವ್ಯಾಯಾಮವನ್ನು ಪೂರ್ಣಗೊಳಿಸಿದ ನಂತರ ಕುರ್ಚಿಯ ಮೇಲೆ ಕುಳಿತಿದ್ದಾರೆ ಎಂದು ತೋರುತ್ತದೆ.

ರಾಹುಲ್ ಗಾಯದ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಈ ಋತುವಿನಲ್ಲಿ ಅವರು ಲಕ್ನೋ ಪರ ಆಡುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ರಾಹುಲ್ ಯಾವಾಗ ಟೂರ್ನಿಗೆ ಮರಳುತ್ತಾರೆ ಎಂಬುದು ಈಗ ಕುತೂಹಲ ಮೂಡಿಸಿದೆ. ಐಪಿಎಲ್ 2023ರಲ್ಲಿಯೂ ಸಹ ರಾಹುಲ್ ಗಾಯದ ಸಮಸ್ಯೆಗೆ ಸಿಲುಕಿದ್ದರು. ಪಂದ್ಯಾವಳಿಯಲ್ಲಿ ಕೆಲವು ಪಂದ್ಯಗಳನ್ನು ಆಡಿದ ನಂತರ, ಫೀಲ್ಡಿಂಗ್ ಮಾಡುವಾಗ ರಾಹುಲ್ ಗಾಯಗೊಂಡರು, ನಂತರ ಅವರು ಮೈದಾನಕ್ಕೆ ಮರಳಲು ಹಲವಾರು ತಿಂಗಳುಗಳನ್ನು ತೆಗೆದುಕೊಂಡರು.
ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್ 2022 ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿತು. ಇಲ್ಲಿಯವರೆಗೆ ತಂಡವು ಎರಡು ಸೀಸನ್‌ಗಳನ್ನು ಆಡಿದೆ ಮತ್ತು ಎರಡೂ ಸೀಸನ್‌ಗಳಲ್ಲಿ ಲಕ್ನೋ ಪ್ಲೇ ಆಫ್‌ಗೆ ಪ್ರವೇಶಿಸಿದೆ. ಆದರೆ, ತಂಡಕ್ಕೆ ಎಲಿಮಿನೇಟರ್ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಈ ಋತುವಿನಲ್ಲಿ ತಂಡವು ಹೇಗೆ ಆಡುತ್ತದೆ ಎಂಬುದನ್ನು ನೋಡಬೇಕಿದೆ.

ಕರ್ನಾಟಕದ ಸ್ಟಾರ್ ಪ್ಲೇಯರ್ ಕೆ.ಎಲ್ ರಾಹುಲ್ ಐಪಿಎಲ್‌ನಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ ಆಡಿದ 11 ಪಂದ್ಯಗಳಲ್ಲಿ ರಾಹುಲ್, 46.78ರ ಸರಾಸರಿಯಲ್ಲಿ 4163 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 33 ಅರ್ಧಶತಕ ಹಾಗೂ 4 ಶತಕಗಳು ಸೇರಿವೆ. 355 ಬೌಂಡರಿ, 168 ಸಿಕ್ಸರ್ ಇವರ ಬ್ಯಾಟ್ ನಿಂದ ಬಂದಿವೆ.