ಬುಧವಾರ, ಏಪ್ರಿಲ್ 3ರಂದು ವಿಶಾಖಪಟ್ಟಣದ ಡಾ. ವೈ.ಎಸ್. ರಾಜಶೇಖರ್‌ರೆಡ್ಡಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 16ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 106 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದೆ.
ಗಮನಾರ್ಹವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 272 ರನ್‌ಗಳ 2ನೇ ಅತ್ಯಧಿಕ ಮೊತ್ತವನ್ನು ಕಲೆಹಾಕಿತ್ತು. ಇದಕ್ಕೂ ಮುನ್ನ ಇದೇ ಐಪಿಎಲ್ 2024ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಮುಂಬೈ ಇಂಡಿಯನ್ಸ್ 277 ರನ್ ಗಳಿಸಿದ್ದು, ಐಪಿಎಲ್‌ನ ಅತ್ಯಧಿಕ ಮೊತ್ತವಾಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸುನಿಲ್ ನರೈನ್, ಅಂಗ್‌ಕ್ರಿಶ್ ರಘುವಂಶಿ ಮತ್ತು ಆಂಡ್ರೆ ರಸೆಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 272 ರನ್‌ಗನ್ನು ಗಳಿಸಿತ್ತು.
273 ರನ್‌ಗಳ ಬೃಹತ್ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಷಭ್ ಪಂತ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅವರ ಅರ್ಧಶತಕಗಳ ಹೊರತಾಗಿಯೂ 17.2 ಓವರ್‌ಗಳಲ್ಲಿ 166 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಕೆಕೆಆರ್ ತಂಡದ ವಿರುದ್ಧ 106 ರನ್‌ಗಳ ಸೋಲು ಅನುಭವಿಸಿತು.
ಬೃಹತ್ ಮೊತ್ತದ ಬೆನ್ನಟ್ಟುವಿಕೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಡೇವಿಡ್ ವಾರ್ನರ್ ಮತ್ತು ಪೃಥ್ವಿ ಶಾ ಉತ್ತಮ ಆರಂಭ ನೀಡಲು ವಿಫಲರಾದರು. ಪೃಥ್ವಿ ಶಾ 10 ರನ್ ಗಳಿಸಿ ಔಟಾದರೆ, ಡೇವಿಡ್ ವಾರ್ನರ್ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ನಂತರ ಬಂದ ಮಿಚೆಲ್ ಮಾರ್ಷ್ ಮತ್ತು ಅಭಿಷೇಕ್ ಪೊರೆಲ್ ಸೊನ್ನೆಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಬಳಿಕ ಕ್ರೀಸ್‌ಗೆ ಆಗಮಿಸಿದ ನಾಯಕ ರಿಷಭ್ ಪಂತ್ ಕೇವಲ 25 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ಸಮೇತ 55 ರನ್ ಬಾರಿಸಿದರು.
ರಿಷಭ್ ಪಂತ್‌ಗೆ ಉತ್ತಮ ಸಾಥ್ ನೀಡಿದ ಟ್ರಿಸ್ಟಾನ್ ಸ್ಟಬ್ಸ್ 32 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ 54 ರನ್ ಗಳಿಸಿದರು. ಈ ಜೋಡಿ ಐದನೇ ವಿಕೆಟ್‌ಗೆ 93 ರನ್‌ಗಳ ಜೊತೆಯಾಟ ನೀಡಿತು. ಆದರೆ ಇವರಿಬ್ಬರ ವಿಕೆಟ್ ಕಳೆದುಕೊಳ್ಳುವುದರೊಂದಿಗೆ ಪಂದ್ಯವನ್ನೂ ಕಳದುಕೊಂಡಿತು.
ಉಳಿದಂತೆ ಅಕ್ಷರ್ ಪಟೇಲ್ 0, ಸುಮಿತ್ ಕುಮಾರ್ 7 ರನ್, ರಸಿಕ್ ದಾರ್ ಸಲಾಮ್ 1 ರನ್, ಅನ್ರಿಚ್ ನಾರ್ಟ್ಜೆ 4 ರನ್ ಮತ್ತು ಇಶಾಂತ್ ಶರ್ಮಾ 1 ರನ್ ಗಳಿಸಿದರು.

ಇನ್ನು ಬೌಲಿಂಗ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ವೈಭವ್ ಅರೋರಾ 4 ಓವರ್‌ಗಳಲ್ಲಿ 27 ರನ್ ನೀಡಿ 3 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ 4 ಓವರ್‌ಗಳಲ್ಲಿ 33 ರನ್ ನೀಡಿ 3 ವಿಕೆಟ್ ಕಬಳಿಸಿದರು. ಉಳಿದಂತೆ ಮಿಚೆಲ್ ಸ್ಟಾರ್ಕ್ 2 ವಿಕೆಟ್ ಮತ್ತು ಆಂಡ್ರೆ ರಸೆಲ್ ಹಾಗೂ ಸುನಿಲ್ ನರೈನ್ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟಿಂಗ್‌ನಲ್ಲಿ ಸುನಿಲ್ ನರೈನ್ ಮತ್ತು ಫಿಲಿಪ್ ಸಾಲ್ಟ್ ಭರ್ಜರಿ ಆರಂಭ ಒದಗಿಸಿದರು ಮತ್ತು ಈ ಜೋಡಿ ಮೊದಲ ವಿಕೆಟ್‌ಗೆ 4.3 ಓವರ್‌ಗಳಲ್ಲಿ 60 ರನ್‌ಗಳ ಜೊತೆಯಾಟ ನೀಡಿದರು. ಫಿಲಿಪ್ ಸಾಲ್ಟ್ 12 ಎಸೆತಗಳಲ್ಲಿ 4 ಬೌಂಡರಿಗಳ ನೆರವಿನಿಂದ 18 ರನ್ ಗಳಿಸಿದರು.
ನಂತರ ಕ್ರೀಸ್‌ಗೆ ಬಂದ ಅಂಗ್‌ಕ್ರಿಶ್ ರಘುವಂಶಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿ ಕೇವಲ 27 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಮೇತ 54 ರನ್ ಬಾರಿಸಿದರು. ಆರಂಭಿಕ ಸುನಿಲ್ ನರೈನ್ ಮತ್ತೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ, 39 ಎಸೆತಗಳಲ್ಲಿ 7 ಬೌಂಡರಿ ಹಾಗೂ 7 ಸಿಕ್ಸರ್‌ಗಳ ಮೂಲಕ 85 ರನ್ ಸಿಡಿಸಿದರು.

ಬಳಿಕ ಆಂಡ್ರೆ ರಸೆಲ್ ತಮ್ಮ ಅಬ್ಬರದ ಬ್ಯಾಟಿಂಗ್ ಮುಂದುವರೆಸಿದರು ಮತ್ತು 19 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಮೇತ 41 ರನ್ ಗಳಿಸಿ ಕೊನೆಯ ಓವರ್‌ನಲ್ಲಿ ಔಟಾದರು. ನಾಯಕ ಶ್ರೇಯಸ್ ಅಯ್ಯರ್ 11 ಎಸೆತಗಳಲ್ಲಿ 2 ಸಿಕ್ಸರ್‌ಗಳ ಮೂಲಕ 18 ರನ್ ಗಳಿಸಿದರು.
ಸ್ಫೋಟಕ ಬ್ಯಾಟರ್ ರಿಂಕು ಸಿಂಗ್ 8 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 26 ರನ್ ಗಳಿಸಿದರು. ಉಳಿದಂತೆ ವೆಂಕಟೇಶ್ ಅಯ್ಯರ್ 5 ರನ್ ಮತ್ತು ರಮಣದೀಪ್ ಸಿಂಗ್ 2 ರನ್ ಗಳಿಸಿದರು.
ಇನ್ನು ಬೌಲಿಂಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಎಲ್ಲ ಬೌಲರ್‌ಗಳು ದುಬಾರಿಯಾದರು. ಅನ್ರಿಚ್ ನಾರ್ಟ್ಜೆ 4 ಓವರ್‌ಗಳಲ್ಲಿ 59 ರನ್ ನೀಡಿ 3 ವಿಕೆಟ್ ಪಡೆದರೆ, ಇಶಾಂತ್ ಶರ್ಮಾ 3 ಓವರ್‌ಗಳಲ್ಲಿ 43 ರನ್ ನೀಡಿ 2 ವಿಕೆಟ್ ಕಬಳಿಸಿದರು. ಉಳಿದಂತೆ ಖಲೀಲ್ ಅಹ್ಮದ್ ಮತ್ತು ಮಿಚೆಲ್ ಮಾರ್ಷ್ ತಲಾ ಒಂದೊಂದು ವಿಕೆಟ್ ಪಡೆದರು.