2023ರ ಐಸಿಸಿ ಏಕದಿನ ವಿಶ್ವಕಪ್ ತೆರೆಯ ಹಿಂದೆ ಸರಿದಿದೆ. ಈಗ ಕ್ರಿಕೆಟ್ ಅಭಿಮಾನಿಗಳು ಮುಂದಿನ ತಿಂಗಳು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿನತ್ತ ಚಿತ್ತ ನೆಟ್ಟಿದ್ದಾರೆ. ಯಾವ ತಂಡ ಯಾವ ಸ್ಟಾರ್ ಆಟಗಾರನನ್ನು ತಂಡ ಉಳಿಸಿಕೊಳ್ಳಲಿದೆ ಎಂಬ ಲೆಕ್ಕಾಚಾರಗಳು ಆರಂಭವಾಗಿವೆ.
2024ರ ಐಪಿಎಲ್ ಸಿದ್ಧತೆಗಳು ಪ್ರಾರಂಭವಾಗಿವೆ. ಎಲ್ಲಾ ಹತ್ತು ತಂಡಗಳು ತಮ್ಮ ಆಟಗಾರರ ಪಟ್ಟಿಯನ್ನು ಮರು ಪರಿಶೀಲನೆ ನಡೆಸುತ್ತವೆ. ಹಲವು ತಂಡಗಳು ಆಟಗಾರರನ್ನು ಅಳೆದು ತೂಗಿ ಉಳಿಸಿಕೊಳ್ಳುವ ಪ್ಲ್ಯಾನ್ ಮಾಡುತ್ತಿದೆ. 2024ರ ಐಪಿಎಲ್‌ಗಾಗಿ ಮಿನಿ ಹರಾಜು ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿದೆ.

ಇದಕ್ಕೂ ಮುನ್ನ ಹಲವು ಆಟಗಾರರ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಿದೆ. ಇದರಲ್ಲಿ ಶಾರ್ದೂಲ್ ಠಾಕೂರ್ ಮತ್ತು ಸ್ಯಾಮ್ ಕರ್ರಾನ್ ಸೇರಿದಂತೆ ಐವರು ಆಟಗಾರರು ಇದ್ದಾರೆ. ಲಾಕಿ ಫರ್ಗುಸನ್, ಟಿಮ್ ಸೌಥಿ ಮತ್ತು ಹ್ಯಾರಿ ಬ್ರೂಕ್ ಅವರನ್ನೂ ಕೈಬಿಡಬಹುದು.
ಭಾರತದ ತಂಡದ ಸ್ಟಾರ್ ಅಟಗಾರರ ಪಟ್ಟಿಯಲ್ಲಿ ಶಾರ್ದೂಲ್ ಠಾಕೂರ್ ಕಾಣಿಸಿಕೊಳ್ಳುತ್ತಾರೆ. ಶಾರ್ದೂಲ್ ತಮ್ಮ ಅಮೋಘ ಆಟದ ಬೌಲಿಂಗ್‌ನಿಂದ ಹಲವು ತಂಡಗಳಿಗೆ ನೆರವಾಗಿದ್ದಾರೆ. ಐಪಿಎಲ್‌ನಲ್ಲಿ ಹಲವು ಬಾರಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಐಪಿಎಲ್ 2023 ಅವರು ವಿಶೇಷ ಪ್ರದರ್ಶನವನ್ನು ನೀಡಿಲ್ಲ.

ಕಳೆದ ಐಪಿಎಲ್ ಋತುವಿನಲ್ಲಿ ಶಾರ್ದೂಲ್ 11 ಪಂದ್ಯಗಳಲ್ಲಿ 7 ವಿಕೆಟ್ ಪಡೆದಿದ್ದರು. ಶಾರ್ದೂಲ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಕೈ ಬಿಡಬಹುದು. ಕೆಕೆಆರ್ ಲಾಕಿ ಫರ್ಗುಸನ್ ಅವರಿಗೂ ಹೊರಗಿನ ದಾರಿ ತೋರಿಸುವ ಸಾಧ್ಯತೆ ಇದೆ. ಐಪಿಎಲ್‌ನಲ್ಲಿ ಫರ್ಗುಸನ್ ಇದುವರೆಗೆ 38 ಪಂದ್ಯಗಳನ್ನು ಆಡಿದ್ದು 37 ವಿಕೆಟ್ ಪಡೆದಿದ್ದಾರೆ.
ಹ್ಯಾರಿ ಬ್ರೂಕ್ ಸಹ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದಾರೆ. ಅವರು ಐಪಿಎಲ್‌ನಲ್ಲಿ ಇದುವರೆಗೆ ಕೇವಲ 11 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 190 ರನ್ ಮಾತ್ರ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಬಾರಿಸಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡ ಹ್ಯಾರಿ ಬ್ರೂಕ್ ಅವರನ್ನು ಕೈ ಬಿಡುವ ಸಾಧ್ಯತೆ ಇದೆ.
ಸ್ಯಾಮ್ ಕರ್ರಾನ್ ಐಪಿಎಲ್ ನ ದುಬಾರಿ ಆಟಗಾರ. ಆಲ್ ರೌಂಡರ್ ಅಬ್ಬರದ ಪ್ರದರ್ಶನ ನೀಡುವ ನೀರಿಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಸ್ಯಾಮ್ ಕರ್ರಾನ್ ಈವರೆಗೆ 46 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು 613 ರನ್ ಗಳಿಸಿ 42 ವಿಕೆಟ್ ಪಡೆದಿದ್ದಾರೆ.
ಸದ್ಯ ಪಂಜಾಬ್ ಕಿಂಗ್ಸ್ ತಂಡ ಸ್ಯಾಮ್ ಕರ್ರಾನ್ ಅವರನ್ನು ಬಿಡುಗಡೆ ಮಾಡಬಹುದು. ಟಿಮ್ ಸೌಥಿ ಬೇರೆ ತಂಡಗಳತ್ತ ಮುಖ ಮಾಡುವ ಸಾಧ್ಯತೆ ಇದೆ. ಅವರು 54 ಪಂದ್ಯಗಳಲ್ಲಿ 47 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಇವರಲ್ಲದೆ ಹಲವು ಆಟಗಾರರನ್ನು ಹರಾಜಿಗೂ ಮುನ್ನವೇ ಬಿಡುಗಡೆ ಮಾಡಬಹುದು ಎಂದು ಅಂದಾಜಿಸಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಗುಜರಾತ್ ಟೈಟಾನ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2024ಕ್ಕೆ ತಯಾರಿ ಆರಂಭಿಸಿವೆ.
ಈ ಬಾರಿ ಮಿನಿ ಹರಾಜಿಗೂ ಮುನ್ನ ಹಲವು ದೊಡ್ಡ ಆಟಗಾರರು ಬಿಡುಗಡೆಯಾಗಬಹುದು. ಮಹೇಂದ್ರ ಸಿಂಗ್ ಧೋನಿ ಈ ಬಾರಿಯ ಐಪಿಎಲ್‌ನಲ್ಲಿ ಮತ್ತೊಮ್ಮೆ ಮ್ಯಾಜಿಕ್ ತೋರಿಸಬಹುದು. ಧೋನಿ ಜೊತೆಗೆ ಇತರ ಶ್ರೇಷ್ಠ ಆಟಗಾರರು ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.