ಭಾನುವಾರ, ಏಪ್ರಿಲ್ 7ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ರೋಚಕ ಪಂದ್ಯದಲ್ಲಿ ರೊಮಾರಿಯೋ ಶೆಫರ್ಡ್ ವಿಶಿಷ್ಟ ದಾಖಲೆಯನ್ನು ಸ್ಥಾಪಿಸಿದರು.
ವೆಸ್ಟ್ ಇಂಡೀಸ್ ಹಾಗೂ ಮುಂಬೈ ಇಂಡಿಯನ್ಸ್ ಬ್ಯಾಟರ್ ರೊಮಾರಿಯೋ ಶೆಫರ್ಡ್ ಅವರು ಐಪಿಎಲ್ ಇನ್ನಿಂಗ್ಸ್‌ನಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಎಸೆತಗಳನ್ನು ಎದುರಿಸಿದ ಬ್ಯಾಟರ್‌ಗಳಲ್ಲಿ ಅತ್ಯಧಿಕ ಸ್ಟ್ರೈಕ್-ರೇಟ್ ಗಳಿಸಿ ದಾಖಲೆ ನಿರ್ಮಿಸಿದರು.

ಈ ಮೂಲಕ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ 2022ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 373.33ರ ಸ್ಟ್ರೈಕ್ ರೇಟ್ ಹೊಂದಿದ್ದ ಪ್ಯಾಟ್ ಕಮ್ಮಿನ್ಸ್ ಅವರ ದಾಖಲೆಯನ್ನು ರೊಮಾರಿಯೋ ಶೆಫರ್ಡ್ ಅಳಿಸಿ ಹಾಕಿದರು.
ಭಾನುವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರೊಮಾರಿಯೋ ಶೆಫರ್ಡ್ ಸಂಪೂರ್ಣವಾಗಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದರು. ಕೇವಲ 10 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಮೇತ ಅಜೇಯ 39 ರನ್ ಬಾರಿಸಿದರು.

ಅದರಲ್ಲೂ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಇನಿಂಗ್ಸ್‌ನ ಕೊನೆಯ ಓವರ್ ಎಸೆದ ಆನ್ರಿಚ್ ನಾರ್ಟ್ಜೆ ಅವರ ಬೌಲಿಂಗ್‌ನಲ್ಲಿ ರೊಮಾರಿಯೋ ಶೆಫರ್ಡ್ ಸಿಕ್ಸರ್, ಬೌಂಡರಿಗಳ ಮೂಲಕ ಮೈದಾನ ತುಂಬೆಲ್ಲಾ ಚೆಂಡು ಕಳಿಸಿದರು.
ಇನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಬಲಗೈ ಬ್ಯಾಟರ್ 4 ಸಿಕ್ಸರ್ ಮತ್ತು 2 ಬೌಂಡರಿಗಳನ್ನು ಸಿಡಿಸಿದರು. ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 234 ರನ್ ಕಲೆಹಾಕಿತು.
ರೊಮಾರಿಯೋ ಶೆಫರ್ಡ್ - 390 (10 ಎಸೆತಗಳಲ್ಲಿ 39 ರನ್) vs ಡೆಲ್ಲಿ ಕ್ಯಾಪಿಟಲ್ಸ್, 2024
ಪ್ಯಾಟ್ ಕಮ್ಮಿನ್ಸ್ - 373.33 (15 ಎಸೆತಗಳಲ್ಲಿ 56 ರನ್) vs ಮುಂಬೈ ಇಂಡಿಯನ್ಸ್, 2022
ಎಬಿ ಡಿವಿಲಿಯರ್ಸ್ - 372.72 (11 ಎಸೆತಗಳಲ್ಲಿ 41 ರನ್) vs ಮುಂಬೈ ಇಂಡಿಯನ್ಸ್, 2015
ಆಂಡ್ರೆ ರಸೆಲ್ - 369.23 (13 ಎಸೆತಗಳಲ್ಲಿ 48 ರನ್) vs ಆರ್‌ಸಿಬಿ, 2019
ಕ್ರಿಸ್ ಗೇಲ್ - 350 (10 ಎಸೆತಗಳಲ್ಲಿ 35 ರನ್) vs ಎಸ್‌ಆರ್‌ಎಚ್, 2015
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 234 ರನ್ ಗಳಿಸಿತು.
ಆರಂಭಿಕರಾದ ರೋಹಿತ್ ಶರ್ಮಾ 49 ರನ್ ಮತ್ತು ಇಶಾನ್ ಕಿಶನ್ 42 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ನಂತರ 33 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 39 ರನ್ ಗಳಿಸಿದ್ದ ಹಾರ್ದಿಕ್ ಪಾಂಡ್ಯ ವಿಕೆಟ್ ಬಿದ್ದ ನಂತರ ರೊಮಾರಿಯೋ ಶೆಫರ್ಡ್ ಬ್ಯಾಟಿಂಗ್‌ಗೆ ಬಂದರು.
ಆ ಬಳಿಕ ರೊಮಾರಿಯೋ ಶಫರ್ಡ್ ಮತ್ತು ಟಿಮ್ ಡೇವಿಡ್ ಜೋಡಿ ಮುರಿಯದ ಆರನೇ ವಿಕೆಟ್‌ಗೆ 13 ಎಸೆತಗಳಲ್ಲಿ 53 ರನ್‌ಗಳ ಜೊತೆಯಾಟ ನಿರ್ಮಿಸಿದರು.
ಕೇವಲ 21 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ 45 ರನ್ ಗಳಿಸಿದ ಟಿಮ್ ಡೇವಿಡ್ ಕೂಡ ತಮ್ಮ ಆಕ್ರಮಣಕಾರಿಯಾಗಿ ಆಡಿದರು. ರೊಮಾರಿಯೋ ಶೆಫರ್ಡ್ ಬಗ್ಗೆ ಹೇಳುವುದಾದರೆ, ಅವರು ಮುಂಬೈ ಇಂಡಿಯನ್ಸ್‌ಗೆ ತೆರಳುವ ಮೊದಲು ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದರು.