ಗುರುವಾರ, ಏಪ್ರಿಲ್ 18ರಂದು ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 33ನೇ ಪಂದ್ಯದಲ್ಲಿ ಆತಿಥೇಯ ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 9 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಇದೇ ವೇಳೆ ಪಂಜಾಬ್ ಕಿಂಗ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯಗೆ 12 ಲಕ್ಷ ರೂಪಾಯಿಗಳ ದಂಡ ವಿಧಿಸಲಾಗಿದೆ.

ಇದು ಐಪಿಎಲ್‌ನ ನೀತಿ ಸಂಹಿತೆಯ ಅಡಿಯಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಕನಿಷ್ಠ ಮಿತಿಮೀರಿದ ದರದ ಉಲ್ಲಂಘನೆಗಳ ಆವೃತ್ತಿಯ ಮೊದಲ ಅಪರಾಧವಾಗಿದೆ.
ಉನ್ಮಾದಕ ಪಂದ್ಯದ ಸಂದರ್ಭದಲ್ಲಿ, ಮುಂಬೈ ಇಂಡಿಯನ್ಸ್ ತನ್ನ ಕೊನೆಯ ಎರಡು ಓವರ್‌ಗಳಲ್ಲಿ ಐದು ಫೀಲ್ಡರ್‌ಗಳನ್ನು ವೃತ್ತದೊಳಗೆ ಇರಿಸಬೇಕಾಗಿದ್ದರಿಂದ, ನಿಧಾನಗತಿಯ ಓವರ್‌ರೇಟ್ ಕಾಯ್ದುಕೊಂಡಿದ್ದಕ್ಕಾಗಿ ದಂಡ ವಿಧಿಸಲಾಗಿದೆ.
ಆದಾಗ್ಯೂ, ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ 193 ರನ್‌ಗಳ ಗುರಿಯನ್ನು ಬೆನ್ನಟ್ಟುವ ವೇಳೆ ಸ್ಯಾಮ್ ಕರ್ರಾನ್ ನಾಯತಕತ್ವದ ಪಂಜಾಬ್ ಕಿಂಗ್ಸ್ ತಂಡವು ಇನ್ನೂ ಐದು ಎಸೆತಗಳು ಬಾಕಿ ಇರುವಂತೆಯೇ ಸರ್ವಪತನ ಕಂಡಿದ್ದರಿಂದ ಮುಂಬೈ ಇಂಡಿಯನ್ಸ್‌ನ ಅನಾನುಕೂಲತೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ.

ಇದಕ್ಕೂ ಮೊದಲು ಟಾಸ್ ಗೆದ್ದ ಸ್ಯಾಮ್ ಕರ್ರಾನ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮುಂಬೈ ಇಂಡಿಯನ್ಸ್‌ನ ಆರಂಭಿಕ ಇಶಾನ್ ಕಿಶನ್ ಅವರನ್ನು ಮೂರನೇ ಓವರ್‌ನಲ್ಲಿ ಔಟ್ ಮಾಡುವ ಮೂಲಕ ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಪಂಜಾಬ್ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು.
ಆದಾಗ್ಯೂ, ಸೂರ್ಯಕುಮಾರ್ ಯಾದವ್ ಮತ್ತು ರೋಹಿತ್ ಶರ್ಮಾ ನಡುವಿನ 57 ಎಸೆತಗಳಲ್ಲಿ 81 ರನ್‌ಗಳ ಜೊತೆಯಾಟವು ಮುಂಬೈ ಇಂಡಿಯನ್ಸ್ ತಂಡಕ್ಕೆ ನೆರವಾಯಿತು.
ಭಾರತ ತಂಡದ ನಾಯಕ ರೋಹಿತ್ ಶರ್ಮಾ 25 ಎಸೆತಗಳಲ್ಲಿ 36 ರನ್ ಗಳಿಸಿ ಔಟಾದ ನಂತರ, ಸೂರ್ಯಕುಮಾರ್ ಯಾದವ್ ಕೇವಲ 28 ಎಸೆತಗಳಲ್ಲಿ ತಿಲಕ್ ವರ್ಮಾ ಜೊತೆಗೆ 49 ರನ್ ಜೊತೆಯಾಟ ನಿರ್ಮಿಸಿದರು.
ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅಂತಿಮವಾಗಿ 53 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಮೇತ 78 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ತಿಲಕ್ ವರ್ಮಾ 18 ಎಸೆತಗಳಲ್ಲಿ ಅಜೇಯ 34 ರನ್ ಮತ್ತು ಹಾರ್ದಿಕ್ ಪಾಂಡ್ಯ ಮತ್ತು ಟಿಮ್ ಡೇವಿಡ್ ಅವರ ಕೆಲವು ಸ್ಫೋಟಕ ಶಾಟ್‌ಗಳು ಮುಂಬೈ ಇಂಡಿಯನ್ಸ್ ತಂಡವನ್ನು ತಮ್ಮ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 192 ರನ್‌ಗಳಿಗೆ ಕೊಂಡೊಯ್ದವು.
ಇದಕ್ಕೆ ಪ್ರತ್ಯುತ್ತರವಾಗಿ, ಪಂಜಾಬ್ ಕಿಂಗ್ಸ್ ತಂಡ ತನ್ನ ಮೂರನೇ ಓವರ್‌ನಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಭಯಾನಕ ಆರಂಭ ಪಡೆಯಿತು. ಮೊದಲ 10 ಓವರ್‌ಗಳಲ್ಲಿ ಪಂಜಾಬ್‌ನ ಆರು ಬ್ಯಾಟರ್‌ಗಳನ್ನು ಕಳೆದುಕೊಂಡಿದ್ದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿತು.
ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಶಶಾಂಕ್ ಸಿಂಗ್ 25 ಎಸೆತಗಳಲ್ಲಿ 41 ರನ್ ಗಳಿಸಿ ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಔಟಾದರು. ಅನುಭವಿ ವೇಗಿ ತನ್ನ ಲೈನ್ ಆಂಡ್ ಲೆಂಥ್‌ನಲ್ಲಿ ಸಂಪೂರ್ಣವಾಗಿ ಅದ್ಭುತವಾಗಿದ್ದರು ಮತ್ತು ನಾಲ್ಕು-ಓವರ್‌ಗಳ ಸ್ಪೆಲ್‌ನಲ್ಲಿ ಮೂರು ವಿಕೆಟ್ ಕಬಳಿಸಿದರು.
ಪಂಜಾಬ್ ಕಿಂಗ್ಸ್ ತೀವ್ರ ಸಂಕಷ್ಟದಲ್ಲಿದ್ದಾಗ, ಅಶುತೋಷ್ ಶರ್ಮಾ ಅವರು 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು ಕೇವಲ 28 ಎಸೆತಗಳಲ್ಲಿ 2 ಬೌಂಡರಿ ಮತ್ತು 7 ಸಿಕ್ಸರ್‌ಗಳೊಂದಿಗೆ 61 ರನ್ ಗಳಿಸಿ ಮತ್ತೊಮ್ಮೆ ಆಸರೆಯಾಗಿದ್ದರು. ಆದರೆ, 25 ರನ್‌ಗಳ ಅಗತ್ಯವಿದ್ದಾಗ ಔಟಾಗಿದ್ದರಿಂದ ಕೆಳ ಕ್ರಮಾಂಕದ ಬ್ಯಾಟರ್‌ಗಳು ಪಂಜಾಬ್ ಕಿಂಗ್ಸ್ ತಂಡವನ್ನು ಗೆಲ್ಲಿಸಲು ವಿಫಲರಾದರು.
ಮುಂಬೈ ಇಂಡಿಯನ್ಸ್ ತಂಡ 9 ರನ್‌ಗಳ ರೋಚಕ ಗೆಲುವಿನೊಂದಿಗೆ ಐಪಿಎಲ್ 2024ರ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಏರಿದರೆ, ಪಂಜಾಬ್ ಕಿಂಗ್ಸ್ ತಂಡ 9ನೇ ಸ್ಥಾನಕ್ಕೆ ಕುಸಿತ ಕಂಡಿತು.