IPL 2024: ರಾಹುಲ್, ಪೂರನ್ ಹೋರಾಟ ವ್ಯರ್ಥ; ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆಲುವಿಗೆ ಸಂಜು ಸಾರಥಿ
ಭಾನುವಾರ, ಮಾರ್ಚ್ 24ರಂದು ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 4ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.
ತವರಿನಲ್ಲಿ ನಡೆದ ತಮ್ಮ ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ 20 ರನ್‌ಗಳ ಗೆಲುವು ದಾಖಲಿಸುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ ಅಮೂಲ್ಯ 2 ಅಂಕಗಳನ್ನು ಗಳಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಸಂಜು ಸ್ಯಾಮ್ಸನ್ ಅವರ ಅಮೋಘ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 193 ರನ್‌ಗಳನ್ನು ಕಲೆಹಾಕಿತು.
194 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೆಎಲ್ ರಾಹುಲ್ ಮತ್ತು ನಿಕೋಲಸ್ ಪೂರನ್ ಅವರ ಹೋರಾಟದ ಹೊರತಾಗಿಯೂ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 173 ರನ್‌ಗಳನ್ನು ಮಾತ್ರ ಗಳಿಸಿ ರನ್‌ಗಳ ವಿರೋಚಿತ ಸೋಲು ಅನುಭವಿಸಿತು.
ನಾಯಕ ಕೆಎಲ್ ರಾಹುಲ್ ಹೊರತುಪಡಿಸಿ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಕೈಕೊಟ್ಟಿದ್ದರಿಂದ ಲಕ್ನೋ ಸೂಪರ್ ಜೈಂಟ್ಸ್ ಸೋಲಿನ ರುಚಿ ಕಾಣಬೇಕಾಯಿತು. ಕ್ವಿಂಟನ್ ಡಿ ಕಾಕ್ ಕೇವಲ 4 ರನ್ ಗಳಿಸಿದರೆ, ನಂತರ ಬಂದ ದೇವದತ್ ಪಡಿಕ್ಕಲ್ ಸೊನ್ನೆಗೆ ಔಟಾದರು.

ಆ ಬಳಿಕ ಬಂದ ಆಯುಷ್ ಬದೊನಿ ಕೇವಲ 1 ರನ್‌ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಕ್ರೀಸ್‌ಗೆ ಬಂದ ದೀಪಕ್ ಹೂಡಾ 13 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಮೇತ 26 ರನ್ ಗಳಿಸಿ ಔಟಾದರು. ಆಗ ಲಕ್ನೋ ತಂಡದ ಮೊತ್ತ 7.3 ಓವರ್‌ಗಳಲ್ಲಿ 60 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು.
ಈ ವೇಳೆ ಜೊತೆಗೂಡಿದ ಕೆಎಲ್ ರಾಹುಲ್ ಮತ್ತು ನಿಕೋಲಸ್ ಪೂರನ್ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ತಂಡವನ್ನು ಗೆಲುವಿನ ಹಳಿಗೆ ತಂದಿದ್ದರು. ಈ ಜೋಡಿ ಐದನೇ ವಿಕೆಟ್‌ಗೆ 85 ರನ್‌ಗಳ ಜೊತೆಯಾಟ ನಿರ್ಮಿಸಿತು.
ಆದರೆ, ಕೆಎಲ್ ರಾಹುಲ್ ವಿಕೆಟ್ ಕಳೆದುಕೊಳ್ಳುವುದರೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ಗೆಲುವಿನ ಆಸೆಗೆ ತಣ್ಣೀರೆರಚಿತು. ಕೆಎಲ್ ರಾಹುಲ್ 44 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 58 ರನ್ ಗಳಿಸಿದರು.
ಇನ್ನು ಮಾರ್ಕಸ್ ಸ್ಟೊಯಿನಿಸ್ ಕೇವಲ 3 ರನ್‌ಗಳಿಗೆ ಔಟಾದರು. ಕೊನೆಯದಾಗಿ ನಿಕೋಲಸ್ ಪೂರನ್ 41 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಮೇತ ಅಜೇಯ 64 ರನ್ ಬಾರಿಸಿದರು. ಉಳಿದಂತೆ ಕೃನಾಲ್ ಪಾಂಡ್ಯ ಅಜೇಯ 3 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಟ್ರೆಂಟ್ ಬೌಲ್ಟ್ 4 ಓವರ್‌ಗಳಲ್ಲಿ 35 ರನ್ ನೀಡಿ 2 ವಿಕೆಟ್ ಪಡೆದರೆ, ನಾಂದ್ರೆ ಬರ್ಗರ್, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್ ಮತ್ತು ಸಂದೀಪ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.

ಇದಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡದ ಪರ ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಿದರು ಮತ್ತು ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ತಂಡದ ಮೊತ್ತ 13 ರನ್‌ಗಳಾಗಿದ್ದಾಗ 9 ಎಸೆತಗಳಲ್ಲಿ 11 ರನ್ ಗಳಿಸಿದ್ದ ಜೋಸ್ ಬಟ್ಲರ್ ಔಟಾದರು.
ಇನ್ನು 12 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 24 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಯಶಸ್ವಿ ಜೈಸ್ವಾಲ್ ದೊಡ್ಡ ಶಾಟ್ ಬಾರಿಸಲು ಹೋಗಿ ವಿಕೆಟ್ ಒಪ್ಪಿಸಿದರು.
ಈ ವೇಳೆ ಜೊತೆಗೂಡಿದ ನಾಯಕ ಸಂಜು ಸ್ಯಾಮ್ಸನ್ ಮತ್ತು ರಿಯಾನ್ ಪರಾಗ್ ತಂಡದ ಸ್ಕೋರ್ ಹೆಚ್ಚಿಸಲು ನೇರವಾದರು ಮತ್ತು ಈ ಜೋಡಿ ಮೂರನೇ ವಿಕೆಟ್‌ಗೆ 101 ರನ್‌ಗಳ ಜೊತೆಯಾಟ ನಿರ್ಮಿಸಿತು.
ರಿಯಾನ್ ಪರಾಗ್ 29 ಎಸೆತಗಳನ್ನು ಎದುರಿಸಿ 1 ಬೌಂಡರಿ ಹಾಗೂ 3 ಸಿಕ್ಸರ್ ಸಮೇತ 43 ರನ್ ಗಳಿಸಿ ಔಟಾದರೆ, ನಂತರ ಬಂದ ಶಿಮ್ರಾನ್ ಹೆಟ್ಮೆಯರ್ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಕೊನೆಯಲ್ಲಿ ಸಂಜು ಸ್ಯಾಮ್ಸನ್ ಮತ್ತು ಧ್ರುವ್ ಜುರೆಲ್ ಜೋಡಿ 43 ರನ್‌ಗಳ ಜೊತೆಯಾಟ ನಿರ್ಮಿಸಿತು. ನಾಯಕನ ಆಟವಾಡಿದ ಸಂಜು ಸ್ಯಾಮ್ಸನ್ 52 ಎಸೆತಗಳಲ್ಲಿ 3 ಬೌಂಡರಿ ಹಾಗೂ 6 ಸಿಕ್ಸರ್‌ಗಳ ಮೂಲಕ 82 ರನ್ ಬಾರಿಸಿದರೆ, ಧ್ರುವ್ ಜುರೆಲ್ 12 ಎಸೆತಗಳಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 20 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ನವೀನ್-ಉಲ್-ಹಕ್ 2 ವಿಕೆಟ್, ಮೊಹ್ಸಿನ್ ಖಾನ್ ಮತ್ತು ರವಿ ಬಿಷ್ಣೋಯಿ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications