ರಾಜಸ್ಥಾನ ರಾಯಲ್ಸ್ ಹಾಗೂ ಲಖ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವೆ ಐಪಿಎಲ್ 2024ರ 4ನೇ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರು ಇದ್ದು, ರೋಚಕತೆ ಹೆಚ್ಚಿಸಿದೆ. ಒಂದು ಕಡೆ ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸುತ್ತಿದ್ದು, ಲಖ್ನೋ ತಂಡವನ್ನು ಕನ್ನಡಿಗ ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ.
ಟೂರ್ನಿ ಆರಂಭಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಗಾಯದ ಸುದ್ದಿ ಬಹುವಾಗಿ ಕಾಡಿದೆ. ತಂಡದ ಸ್ಟಾರ್ ಬೌಲರ್ ಪ್ರಸಿದ್ಧ ಕೃಷ್ಣ ಟೂರ್ನಿಯಿಂದ ಹೊರ ನಡೆದಿದ್ದಾರೆ. ಸ್ಪಿನ್ನರ್ ಆಡಮ್ ಝಂಪಾ ವೈಯಕ್ತಿಕ ಕಾರಣಗಳಿಂದ ಐಪಿಎಲ್ 2024 ರಿಂದ ಹೊರಗುಳಿದಿದ್ದಾರೆ. ರಾಜಸ್ಥಾನ ತಂಡದ ಸ್ಟಾರ್ ಬ್ಯಾಟರ್‌ನನ್ನು ಎಲ್‌ಎಸ್‌ಜಿ ಟ್ರೇಡ್ ಮಾಡಿದೆ. ಹೀಗಾಗಿ ದೇವದತ್ ಲಖ್ನೋ ಪರ ಪದಾರ್ಪಣೆ ಮಾಡಲಿದ್ದಾರೆ.

ಲಖ್ನೋ ಸೂಪರ್ ಜೈಂಟ್ಸ್ ತಂಡದ ಆರಂಭಿಕರಾಗಿ ಕ್ವಿಂಟನ್ ಡಿಕಾಕ್ ಹಾಗೂ ಕೆಎಲ್ ರಾಹುಲ್ ಕಳೆದ ಋತುವಿನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಬಾರಿ ದೇವದತ್ ಪಡಿಕ್ಕಲ್ ತಂಡ ಸೇರಿದ್ದರಿಂದ ಕೆಎಲ್ ರಾಹುಲ್ ಅವರು ಯಾವ ಸ್ಥಾನದಲ್ಲಿ ಆಡಲಿದ್ದಾರೆ ಎಂಬ ಬಗ್ಗೆ ಕುತೂಹಲ ಮೂಡಿಸಿದೆ. ದೇವದತ್ ಹಾಗೂ ಕ್ವಿಂಟನ್ ಡಿಕಾಕ್ ಓಪನರ್ ಆಗಿ ಕಾಣಿಸಿಕೊಂಡಲ್ಲಿ, ರಾಹುಲ್ ಮಿಡ್ಲ್ ಆರ್ಡರ್‌ನಲ್ಲಿ ಆಡಬಹುದು. ಇದರಿಂದ ತಂಡದ ಬ್ಯಾಟಿಂಗ್‌ಗೆ ಶಕ್ತಿ ತುಂಬಿದಂತೆ ಆಗುತ್ತದೆ.
ಮಧ್ಯಮ ಕ್ರಮಾಂಕದಲ್ಲಿ ದೀಪಕ್ ಹೂಡಾ, ಯುವ ಆಟಗಾರ ಆಯುಷ್ ಬಡೋನಿ, ನಿಕೋಲಸ್ ಪೂರನ್ ತಂಡದ ಪರ ಅಬ್ಬರಿಸುವ ಅವಶ್ಯಕತೆ ಇದೆ. ಅಂದಾಗ ಮಾತ್ರ ಬಿಗ್ ಸ್ಕೋರ್ ಕನಸು ನನಸಾಗುತ್ತದೆ. ಆಲ್‌ರೌಂಡರ್ ರೂಪದಲ್ಲಿ ಮಾರ್ಕಸ್ ಸ್ಟೋಯ್ನಿಸ್, ಕೃನಾಲ್ ಪಾಂಡ್ಯ ತಂಡಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಲಿದ್ದಾರೆ.
ರಾಜಸ್ಥಾನ ತಂಡದ ಬ್ಯಾಟಿಂಗ್ ಬಲಾಢ್ಯವಾಗಿದೆ. ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಬಲ್ಲರು. ಇವರಿಬ್ಬರೂ ಪವರ್ ಪ್ಲೇನಲ್ಲಿ ಬಿಗ್ ಶಾಟ್‌ಗಳನ್ನು ಆಡಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ನಾಯಕ ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಇತ್ತೀಚಿಗೆ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಧ್ರುವ್ ಜುರೇಲ್ ಬ್ಯಾಟಿಂಗ್ ಬಲ ತುಂಬ ಬಲ್ಲರು.

ವೇಗದ ಬೌಲಿಂಗ್ ನೊಗವನ್ನು ಆವೇಶ್ ಖಾನ್ ಹಾಗೂ ಟ್ರೆಂಟ್ ಬೌಲ್ಟ್ ಹೊರಲಿದ್ದಾರೆ. ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಅನುಭವಿ ಆರ್ ಅಶ್ವಿನ್ ಹಾಗೂ ಯುಜುವೇಂದ್ರ ಚಹಾಲ್ ಎದುರಾಳಿಗಳನ್ನು ಕಾಡಬಲ್ಲರು.
ರಾಜಸ್ಥಾನ್ ಸಂಭಾವ್ಯ ತಂಡ: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ/ವಿಕೆಟ್ ಕೀಪರ್), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ರೋವ್‌ಮನ್ ಪೊವೆಲ್, ಧ್ರುವ್ ಜುರೆಲ್, ಆರ್ ಅಶ್ವಿನ್, ಯುಜುವೇಂದ್ರ ಚಾಹಲ್, ಅವೇಶ್ ಖಾನ್, ಟ್ರೆಂಟ್ ಬೌಲ್ಟ್.
ಲಕ್ನೋ ಸಂಭಾವ್ಯ ತಂಡ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ದೀಪಕ್ ಹೂಡಾ, ಕೆಎಲ್ ರಾಹುಲ್ (ನಾಯಕ), ನಿಕೋಲಸ್ ಪೂರನ್, ಆಯುಷ್ ಬಡೋನಿ, ಮಾರ್ಕಸ್ ಸ್ಟೋಯ್ನಿಸ್, ಕೃನಾಲ್ ಪಾಂಡ್ಯ, ನವೀನ್-ಉಲ್-ಹಕ್, ಯಶ್ ಬಿಷ್ಣೋ ಠಾಕೂರ್.