ಶನಿವಾರ, ಏಪ್ರಿಲ್ 6ರಂದು ಜೈಪುರದಲ್ಲಿ ನಡೆದ 2024ರ ಐಪಿಎಲ್‌ನ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಸೋಲಿನ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿರುದ್ಧ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಆರ್‌ಸಿಬಿ ಮ್ಯಾನೇಜ್‌ಮೆಂಟ್, ಆರ್‌ಸಿಬಿ ಆಟಗಾರರ ವಿರುದ್ಧ ಸ್ವತಃ ನಿಷ್ಠಾವಂತ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.
2024ರ ಆವೃತ್ತಿ ಆರಂಭಕ್ಕೂ ಮುನ್ನ 'ಇದು ಆರ್‌ಸಿಬಿಯ ಹೊಸ ಅಧ್ಯಾಯ'ವೆಂದು ಅಭಿಯಾನ ಆರಂಭಿಸಿದ ತಂಡ, ಅದೇ ಹಳೆಯ ಚಾಳಿಯನ್ನು ಮುಂದುವರೆಸಿದೆ. ಐಪಿಎಲ್ 2024ರ ಉದ್ಘಾಟನಾ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಸೋಲಿನೊಂದಿಗೆ ಆರಂಭಿಸಿತು.

ಐಪಿಎಲ್ 2024ರಲ್ಲಿ ಈವರೆಗೆ ಆಡಿದ ಐದು ಪಂದ್ಯಗಳಲ್ಲಿ ನಾಲ್ಕು ಸೋಲು ಕಂಡ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೀನಾಯ ಪ್ರದರ್ಶನದ ವಿರುದ್ಧ ಅಭಿಮಾನಿಗಳು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಆರ್‌ಸಿಬಿ ಮ್ಯಾನೇಜ್‌ಮೆಂಟ್ ಪಂದ್ಯದಿಂದ ಪಂದ್ಯಕ್ಕೆ ಮಾಡುತ್ತಿರುವ ತಪ್ಪುಗಳು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ 5 ಪಂದ್ಯಗಳಲ್ಲಿ 1 ಗೆಲುವು ಮತ್ತು 4 ಸೋಲು ಅನುಭವಿಸಿದ್ದು, 2 ಅಂಕಗಳು ಮತ್ತು -0.843 ನೆಟ್ ರನ್ ರೇಟ್‌ನೊಂದಿಗೆ 9ನೇ ಸ್ಥಾನದಲ್ಲಿದೆ. ಹೀಗೆ ಮುಂದುವರೆದರೆ ಆರ್‌ಸಿಬಿ ಪ್ಲೇ ಆಫ್ ಹಂತ ತಲುಪುವುದು ಅಸಾಧ್ಯವೆನಿಸಲಿದೆ.

ಪ್ರಸಕ್ತ ಪಂದ್ಯಾವಳಿಯಲ್ಲಿ ಆರ್‌ಸಿಬಿ ತಂಡ ಬಲಿಷ್ಠ ಆಡುವ 11ರ ಬಳಗವನ್ನೇ ಕಣಕ್ಕಿಳಿಸಿಲ್ಲ, ಅಸಲಿಯಾಗಿ ಬಲಿಷ್ಠ ತಂಡವೇ ಇಲ್ಲ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರನ್ನೇ ಇಡೀ ತಂಡ ನೆಚ್ಚಿಕೊಂಡಿದೆ. ಕೊಹ್ಲಿ ಆಡಿದರೆ ರನ್‌ಗಳು ಬರುತ್ತವೆ, ಇಲ್ಲದಿದ್ದರೆ ಕನಿಷ್ಠ 100ರ ಗಡಿ ಸಹ ತಲುಪುವುದಿಲ್ಲ.
ಬಿಗ್ ಹಿಟ್ಟರ್‌ಗಳು ಎಂದು ಹೆಸರು ಗಳಿಸಿರುವ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಈ ಬಾರಿಯ ಐಪಿಎಲ್‌ನಲ್ಲಿ ಕಳಪೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿದ್ದರೆ, ಬೌಲಿಂಗ್ ವಿಭಾಗವಂತೂ ಅತಿ ಕೆಟ್ಟದಾಗಿದೆ.

ಆರ್‌ಸಿಬಿ ತಂಡದ ಅಭಿಮಾನಿಯಾಗಲಿ ಅಥವಾ ಕ್ರಿಕೆಟ್ ಪ್ರೇಮಿಯಾಗಲಿ ಆರ್‌ಸಿಬಿ ಯಾವೊಬ್ಬ ಬೌಲರ್ ಮೇಲೆ ನಂಬಿಕೆ ಇಡಲು ಸಾಧ್ಯವಾಗುತ್ತಿಲ್ಲ. ಎಲ್ಲರೂ ದುಬಾರಿಯಾಗುತ್ತಿದ್ದಾರೆ ಮತ್ತು ವಿಕೆಟ್ ರಹಿತರಾಗುತ್ತಿದ್ದಾರೆ. ಆಡಿದ ಒಂದು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ವಿಜಯ್‌ಕುಮಾರ್ ವೈಶಾಕ್‌ರನ್ನು ಆಡುವ 11ರ ಬಳಗಕ್ಕೆ ಸೇರಿಸಿಕೊಳ್ಳುತ್ತಿಲ್ಲ.
17.50 ಕೋಟಿ ರೂಪಾಯಿ ಕೊಟ್ಟು ವ್ಯಾಪಾರ ಮಾಡಿಕೊಂಡಿರುವ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ ಈವರೆಗೆ ಒಂದೇ ಒಂದು ಹೇಳಿಕೊಳ್ಳುವ ಆಟ ಆಡಿಲ್ಲ. ಬ್ಯಾಟಿಂಗ್‌ನಲ್ಲಿಯೂ ಅಬ್ಬರಿಸುತ್ತಿಲ್ಲ ಮತ್ತು ಬೌಲಿಂಗ್‌ನಲ್ಲಿ ದುಬಾರಿ. ಇಂತಹ ಆಟಗಾರ ತಂಡಕ್ಕೆ ಬೇಕಿತ್ತಾ? ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಕ್ಯಾಮೆರಾನ್ ಗ್ರೀನ್‌ಗೆ ಕೊಡುವ ಮೊತ್ತದಲ್ಲಿ 3-4 ಭಾರತೀಯ ಆಟಗಾರರು ಸಿಗುತ್ತಿದ್ದರು ಎಂದು ಟೀಕಿಸುತ್ತಿದ್ದಾರೆ.
ಆರ್‌ಸಿಬಿ ತಂಡದ ಮ್ಯಾನೇಜ್‌ಮೆಂಟ್ ಮತ್ತು ಆರ್‌ಸಿಬಿ ನಾಯಕ ಮಧ್ಯೆ ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತಿದೆ. ಇದು ಪ್ರತಿ ಪಂದ್ಯದ ಆಡುವ 11ರ ಬಳಗದಲ್ಲಿ ಎದ್ದು ಕಾಣುತ್ತಿದೆ. ಮುಖ್ಯ ಕೋಚ್ ಆಂಡಿ ಫ್ಲವರ್, ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ತಂಡದ ಆಯ್ಕೆಯಲ್ಲಿ ಎಡುವುತ್ತಿದ್ದಾರೆ ಎಂದು ಅನ್ನಿಸುತ್ತಿದೆ.

ಮೊದಲೇ ಐಪಿಎಲ್ ಹರಾಜಿನಲ್ಲಿ ಪ್ರತಿಭಾವಂತ ಆಟಗಾರರನ್ನು ಬಿಟ್ಟು ದೊಡ್ಡ ಹೆಸರುಗಳಿಗೆ ಮಾತ್ರ ಗಾಳ ಹಾಕುವ ಆರ್‌ಸಿಬಿ, ಈ ಬಾರಿಯೂ ಫಾರ್ಮ್‌ನಲ್ಲಿಲ್ಲದ ಆಟಗಾರರನ್ನು ಗುಡ್ಡೆ ಹಾಕಿಕೊಂಡಿದೆ. ಇನ್ನು ಆಟಗಾರರು ಯಾವುದೇ ಹಂತದಲ್ಲೂ ಪ್ರತಿರೋಧ ನೀಡುತ್ತಿಲ್ಲ ಮತ್ತು ಹೋರಾಡುವ ಮನಸ್ಥಿತಿಯ ಇಲ್ಲದಂತೆ ಕಾಣುತ್ತಾರೆ.
ವಿಲ್ ಜ್ಯಾಕ್ಸ್ ಅವರಂತಹ ಸ್ಫೋಟಕ ಬ್ಯಾಟರ್‌ನನ್ನು ಇಲ್ಲಿಯವರೆಗೂ ಆಡುವ 11ರ ಬಳಗಕ್ಕೆ ಆಯ್ಕೆ ಮಾಡದಿರುವುದು ಆರ್‌ಸಿಬಿ ತಂಡದ ಲಕ್ಷಾಂತರ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಸತತವಾಗಿ ವಿಫಲವಾಗುತ್ತಿರುವ ಗ್ಲೆನ್ ಮ್ಯಾಕ್‌ವೆಲ್, ಕ್ಯಾಮೆರಾನ್ ಗ್ರೀನ್ ಬದಲಾಗಿ ವಿಲ್ ಜ್ಯಾಕ್ಸ್ ಆಡಿಸಿ ಎಂದು ಒತ್ತಾಯಿಸುತ್ತಿದ್ದಾರೆ.
ಐಪಿಎಲ್ 2024ರ ಪ್ಲೇ ಆಫ್ ರೇಸ್‌ನಲ್ಲಿ ಉಳಿಯಬೇಕಾದರೆ ಆರ್‌ಸಿಬಿ ತಂಡ ಉಳಿದ 9 ಪಂದ್ಯಗಳಲ್ಲಿ ಕನಿಷ್ಠ 8 ಪಂದ್ಯಗಳನ್ನಾದರೂ ಗೆಲ್ಲಬೇಕಿದೆ. ಈ ಹಿಂದಿನ ಎಲ್ಲ ಸೋಲುಗಳನ್ನು ಮರೆತು ಮುಂದಿನ ಪಂದ್ಯದಲ್ಲಿ ಹೊಸ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿದು ಗೆಲುವು ಸಾಧಿಸಲಿ ಎಂಬುದು ಅಭಿಮಾನಿಗಳ ಹಾರೈಕೆಯಾಗಿದೆ.