ಮುಂಬೈ ಇಂಡಿಯನ್ಸ್ (ಎಂಐ) ತಂಡದ ಮಾಜಿ ನಾಯಕ ಹಾಗೂ ಅನುಭವಿ ಆಟಗಾರ ರೋಹಿತ್ ಶರ್ಮಾ ತಮ್ಮ ಮುಡಿಗೆ ಮತ್ತೊಂದು ಗರಿಯನ್ನು ಸೇರಿಸಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ 100 ಕ್ಯಾಚ್‌ಗಳನ್ನು ತಲುಪಿದ ನಾಲ್ಕನೇ ಆಟಗಾರ ಎನಿಸಿದರು.
ಭಾನುವಾರ, ಏಪ್ರಿಲ್ 7ರಂದು ಮುಂಬೈನ ಐಕಾನಿಕ್ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧದ ಪಂದ್ಯದ ವೇಳೆ 36 ವರ್ಷದ ರೋಹಿತ್ ಶರ್ಮಾ ಈ ಸಾಧನೆ ಮಾಡಿದರು.
ಐಪಿಎಲ್‌ನಲ್ಲಿ ತಮ್ಮ 247ನೇ ಪಂದ್ಯದಲ್ಲಿ ಜೆರಾಲ್ಡ್ ಕೊಯೆಟ್ಜಿಯವರ ಎಸೆತದಲ್ಲಿ ಝೈ ರಿಚರ್ಡ್ಸನ್ ಅವರ ಕ್ಯಾಚ್ ತೆಗೆದುಕೊಳ್ಳುವ ಮೂಲಕ ರೋಹಿತ್ ಶರ್ಮಾ 100 ಕ್ಯಾಚ್‌ಗಳ ಮೈಲಿಗಲ್ಲು ಸಾಧಿಸಿದರು.

ಇದೇ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ 242 ಪಂದ್ಯಗಳಲ್ಲಿ ಒಟ್ಟು 110 ಕ್ಯಾಚ್‌ಗಳೊಂದಿಗೆ ಐಪಿಎಲ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
"ಮಿಸ್ಟರ್ ಐಪಿಎಲ್' ಎಂದು ಜನಪ್ರಿಯವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ 205 ಪಂದ್ಯಗಳಲ್ಲಿ 109 ಕ್ಯಾಚ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, 189 ಪಂದ್ಯಗಳಲ್ಲಿ 103 ಕ್ಯಾಚ್‌ಗಳನ್ನು ಹೊಂದಿರುವ ಕೀರಾನ್ ಪೊಲಾರ್ಡ್ ಮೂರನೇ ಸ್ಥಾನದಲ್ಲಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಐಪಿಎಲ್‌ನಲ್ಲಿ ತಮ್ಮ ತಂಡದ ಪರ 150 ವಿಕೆಟ್‌ಗಳ ಮೈಲಿಗಲ್ಲನ್ನು ತಲುಪುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.
ಒಂದೇ ಐಪಿಎಲ್ ಫ್ರಾಂಚೈಸಿಗಾಗಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರಿಕೆಟಿಗ ಎನಿಸಿಕೊಂಡರು. 2013ರಿಂದ ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಆಡುತ್ತಿರುವ ಅಹಮದಾಬಾದ್ ಮೂಲದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ 124 ಪಂದ್ಯಗಳಲ್ಲಿ 150 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.

ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಹೈ-ಸ್ಕೋರಿಂಗ್ ಪಂದ್ಯದಲ್ಲಿ 30 ವರ್ಷದ ಜಸ್ಪ್ರೀತ್ ಬುಮ್ರಾ ತಮ್ಮ ಬೌಲಿಂಗ್ ಪರಾಕ್ರಮವನ್ನು ಪ್ರದರ್ಶಿಸಿದರು. ಕೇವಲ 5.50ರ ಎಕಾನಮಿ ದರದಲ್ಲಿ ನಾಲ್ಕು ಓವರ್‌ಗಳಲ್ಲಿ 22 ರನ್ ನೀಡಿ 2 ವಿಕೆಟ್‌ಗಳ ಅತ್ಯುತ್ತಮ ಅಂಕಿಅಂಶಗಳೊಂದಿಗೆ ಮುಗಿಸಿದರು.
ಜಸ್ಪ್ರೀತ್ ಬುಮ್ರಾ ತಮ್ಮ 150 ವಿಕೆಟ್‌ಗಳ ಗಡಿ ತಲುಪಲು ಪೃಥ್ವಿ ಶಾ ಬಳಿಕ ಅಭಿಷೇಕ್ ಪೊರೆಲ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು.
ಪ್ರಸಕ್ತ ಐಪಿಎಲ್ ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಮೊದಲ ಗೆಲುವು ಕಂಡಿದ್ದು, ಕೊನೆಗೂ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ 150 ಟಿ20 ಪಂದ್ಯಗಳಲ್ಲಿ ಗೆಲುವು ಪಡೆದ ವಿಶ್ವದ ಮೊದಲ ತಂಡವಾಗಿ ಇತಿಹಾಸ ನಿರ್ಮಿಸಿತು.
ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 29 ರನ್‌ಗಳ ಗೆಲುವಿನ ನಂತರ, 150 ಟಿ20 ಪಂದ್ಯಗಳಲ್ಲಿ ಗೆದ್ದ ಮೊದಲ ತಂಡವಾಯಿತು. ಐಪಿಎಲ್‌ನಲ್ಲಿ ಅತಿ ಹೆಚ್ಚು ಟಿ20 ಗೆಲುವು ಸಾಧಿಸಿದ ತಂಡಗಳ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ನಂತರ 148 ಗೆಲುವುಗಳೊಂದಿಗೆ ಸಿಎಸ್‌ಕೆ ಎರಡನೇ ಸ್ಥಾನದಲ್ಲಿದೆ.