IPL 2024: RCB vs LSG ಹೆಡ್-ಟು-ಹೆಡ್ ದಾಖಲೆ, ಅಂಕಿಅಂಶಗಳು
ಮಂಗಳವಾರ, ಏಪ್ರಿಲ್ 2ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 15ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡಗಳು ಸೆಣಸಾಡಲಿವೆ.
ಐಪಿಎಲ್ 2024ರ ಆರಂಭಿಕ ಪಂದ್ಯದಲ್ಲಿ ಆರ್‌ಸಿಬಿ ತಂಡವು ಸಿಎಸ್‌ಕೆ ವಿರುದ್ಧ ಸೋಲಿನೊಂದಿಗೆ ಅಭಿಯಾನ ಆರಂಭಿಸಿತು. ನಂತರ, ಪಂಜಾಬ್ ಕಿಂಗ್ಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಅದ್ಭುತ ಶೈಲಿಯಲ್ಲಿ ಪುಟಿದೇಳುವ ಮೂಲಕ ಗೆಲುವಿನ ಟ್ರ್ಯಾಕ್‌ಗೆ ಮರಳಿತು.
ಆದರೆ ಮೂರನೇ ಪಂದ್ಯದಲ್ಲಿ ಕೆಕೆಆರ್ ತಂಡದ ವಿರುದ್ಧ ಹೀನಾಯ ಸೋಲಿನೊಂದಿಗೆ ಆರ್‌ಸಿಬಿ ತಂಡ ಮತ್ತೆ ಹಳಿತಪ್ಪಿದೆ. ಇಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧವೂ ಸೋತರೆ, ಇಲ್ಲಿಂದ ಮುಂದೆ ಹೋಗುವುದು ಕಠಿಣವಾಗುವುದರಿಂದ ಆರ್‌ಸಿಬಿ ತಂಡ ಹೆಚ್ಚು ಒತ್ತಡಕ್ಕೆ ಸಿಲುಕಿದೆ.

ಮತ್ತೊಂದೆಡೆ, ಲಕ್ನೋ ಸೂಪರ್ ಜೈಂಟ್ಸ್ ತಂಡ ತನ್ನ ಗೆಲುವಿನ ಓಟ ಮುಂದುವರಿಸುವ ಗುರಿ ಹೊಂದಿದ್ದು, ಇತ್ತೀಚೆಗೆ ಪಂಜಾಬ್ ಕಿಂಗ್ಸ್ ವಿರುದ್ಧ ತವರಿನಲ್ಲಿ ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸಿದ್ದರು.
ಆದರೆ ಲಕ್ನೋ ಸೂಪರ್ ಜೈಂಟ್ಸ್ ತವರಿನ ಹೊರಗಿನ ಪಂದ್ಯಗಳನ್ನು ಗೆಲ್ಲಲು ಪ್ರಾರಂಭಿಸಬೇಕಿದೆ. ಇದಕ್ಕಾಗಿ ಬೆಂಗಳೂರಿನಲ್ಲಿ ಆರ್‌ಸಿಬಿ ಸವಾಲನ್ನು ಹೇಗೆ ಎದುರಿಸುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ಇದು ಹೆಚ್ಚು ಸ್ಕೋರಿಂಗ್ ಪಂದ್ಯವಾಗಿರಲಿದೆ.
ಆರ್‌ಸಿಬಿ vs ಎಲ್‌ಎಸ್‌ಜಿ ಹೆಡ್-ಟು-ಹೆಡ್ ದಾಖಲೆ
ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಈವರೆಗೆ ನಾಲ್ಕು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ತಂಡವು ಮೂರು ಪಂದ್ಯಗಳನ್ನು ಗೆದ್ದು ಮೇಲುಗೈ ಸಾಧಿಸಿದ್ದರೆ, ಎಲ್‌ಎಸ್‌ಜಿ ಒಮ್ಮೆ ಮಾತ್ರ ಗೆದ್ದಿದೆ.
ಆಟಗಾರರಿಂದ ಹೆಚ್ಚಿನ ರನ್‌ಗಳು
ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಅವರು ಲಕ್ನೋ ವಿರುದ್ಧ 219 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ 127 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 117 ರನ್ ಗಳಿಸಿ ಅಗ್ರ ಮೂರು ರನ್ ಗಳಿಸಿದವರ ಪಟ್ಟಿಯನ್ನು ಪೂರ್ಣಗೊಳಿಸಿದ್ದಾರೆ.
ಬೌಲರ್‌ಗಳಿಂದ ಹೆಚ್ಚಿನ ವಿಕೆಟ್‌ಗಳು
ವೇಗ ಮತ್ತು ವೈವಿಧ್ಯತೆಯನ್ನು ಹೊಂದಿರುವ ಅರ್‌ಸಿಬಿ ಮಾಜಿ ವೇಗಿ ಜೋಶ್ ಹ್ಯಾಜಲ್‌ವುಡ್ 9 ವಿಕೆಟ್‌ಗಳೊಂದಿಗೆ ಉಭಯ ತಂಡಗಳ ನಡುವೆ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ. ಭಾರತದ ವೇಗಿ ಮೊಹಮ್ಮದ್ ಸಿರಾಜ್ 6 ವಿಕೆಟ್‌ಗಳನ್ನು ಪಡೆದಿದ್ದರೆ, ಹರ್ಷಲ್ ಪಟೇಲ್ ಕೂಡ ಆರು ವಿಕೆಟ್‌ಗಳೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ತಂಡದಿಂದ ಅತ್ಯಧಿಕ ಮೊತ್ತ
2023ರ ಅವೃತ್ತಿಯಲ್ಲಿ ಬೆಂಗಳೂರಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ 213 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿತು. ಮಾರ್ಕಸ್ ಸ್ಟೊಯಿನಿಸ್ ಮತ್ತು ನಿಕೋಲಸ್ ಪೂರನ್ ತಲಾ ಅರ್ಧಶತಕಗಳನ್ನು ಗಳಿಸುವ ಮೂಲಕ ಅದ್ಭುತ ರನ್ ಚೇಸ್ ಮಾಡಿದರು. ಒಟ್ಟಾರೆಯಾಗಿ, ಲಕ್ನೋ ಸೂಪರ್ ಜೈಂಟ್ಸ್ ತಂಡ ಒಂದು ವಿಕೆಟ್‌ನಿಂದ ಪಂದ್ಯವನ್ನು ಗೆದ್ದು ಗರಿಷ್ಠ ಸ್ಕೋರ್ ಹೊಂದಿದೆ.
ತಂಡದಿಂದ ಕಡಿಮೆ ಮೊತ್ತ
ಬೃಹತ್ ಮೊತ್ತವನ್ನು ಬೆನ್ನಟ್ಟಿದ ಶ್ರೇಯವನ್ನು ಲಕ್ನೋ ಸೂಪರ್ ಜೈಂಟ್ಸ್ ಹೊಂದಿದ್ದರೆ, ಆರ್‌ಸಿಬಿ ವಿರುದ್ಧ ಕಡಿಮೆ ಮೊತ್ತವನ್ನು ಗಳಿಸಿದ ಕಾರಣ ಅನಗತ್ಯ ದಾಖಲೆಯನ್ನು ಸಹ ಹೊಂದಿದೆ.
2023ರಲ್ಲಿ ಲಕ್ನೋದಲ್ಲಿ ಉಭಯ ತಂಡಗಳು ಆಡಿದಾಗ ನವೀನ್-ಉಲ್-ಹಕ್ ಅವರ ಮೂರು-ವಿಕೆಟ್ ಗಳಿಕೆಯೊಂದಿಗೆ, ಆರ್‌ಸಿಬಿ ತಂಡವನ್ನು 9 ವಿಕೆಟ್‌ಗೆ 126 ರನ್‌ಗಳಿಗೆ ನಿರ್ಬಂಧಿಸಲು ಸಹಾಯ ಮಾಡಿದರು. ಆದರೆ, ಎಲ್‌ಎಸ್‌ಜಿ ತಂಡ ಪ್ರತಿಯಾಗಿ 108 ರನ್‌ಗಳಿಗೆ ಆಲೌಟಾಯಿತು.
ಆರ್‌ಸಿಬಿ vs ಎಲ್‌ಎಸ್‌ಜಿ ಸಂಭಾವ್ಯ ಆಡುವ 11ರ ಬಳಗ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಕ್ಯಾಮೆರಾನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಆಕಾಶ್ ದೀಪ್, ರೀಸ್ ಟೋಪ್ಲಿ, ಮೊಹಮ್ಮದ್ ಸಿರಾಜ್, ಮಯಾಂಕ್ ಡಾಗರ್
ಲಕ್ನೋ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಆಯುಷ್ ಬದೊನಿ, ನಿಕೋಲಸ್ ಪೂರನ್ (ನಾಯಕ), ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಮಯಾಂಕ್ ಯಾದವ್, ನವೀನ್ ಉಲ್-ಹಕ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications