ಭಾನುವಾರ, ಮೇ 19ರಂದು ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಅಂತಿಮ ಲೀಗ್ ಪಂದ್ಯವು ಮಳೆಯಿಂದಾಗಿ ಒಂದೇ ಒಂದು ಎಸೆತ ಕಾಣದೆ ರದ್ದುಗೊಂಡಿದೆ.
ಟಾಸ್ ಗೆದ್ದಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಹೀಗಾಗಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಬೇಕಿತ್ತು.

ಆದರೆ, ಇನ್ನೇನು ಆಟಗಾರರು ಮೈದಾನಕ್ಕೆ ಇಳಿಯಬೇಕು ಎನ್ನುವಷ್ಟರಲ್ಲಿ ಮತ್ತೆ ಮಳೆ ಬಂದಿದ್ದರಿಂದ ಹಾಗೂ ಸಮಯ ಮೀರಿದ್ದರಿಂದ ಪಂದ್ಯವನ್ನು ಉಭಯ ತಂಡಗಳ ನಾಯಕರ ಒಪ್ಪಿಗೆಯೊಂದಿಗೆ ರದ್ದುಗೊಳಿಸಲು ಪಂದ್ಯದ ಅಧಿಕಾರಿಗಳು ಅನಿರ್ಧರಿಸಿದರು.
ಈ ಮೂಲಕ ಐಪಿಎಲ್ 2024ರ ಪ್ಲೇಆಫ್‌ನ ಅಂತಿಮ ನಾಲ್ಕು ತಂಡಗಳಲ್ಲಿ ಕ್ರಮವಾಗಿ ಕೋಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸ್ಥಾನ ಪಡೆದಿವೆ.
ಮಂಗಳವಾರ, ಮೇ 21ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಕ್ವಾಲಿಫೈಯರ್ 1ರ ಪಂದ್ಯದಲ್ಲಿ ಅಗ್ರ 2 ತಂಡಗಳಾದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಡಲಿವೆ.

ಇಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಸೋತ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡ ವಿರುದ್ಧ ಆಡುವ ಫೈನಲ್‌ಗೆ ಮತ್ತೊಂದು ಅವಕಾಶ ಪಡೆಯಲಿದೆ.
ಇನ್ನು ಬುಧವಾರ, ಮೇ 22ರಂದು ಅದೇ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ.
ಇಲ್ಲಿ ಗೆದ್ದ ತಂಡವು ಕ್ವಾಲಿಫೈಯರ್ 1ರಲ್ಲಿ ಸೋತ ತಂಡದ ವಿರುದ್ಧ ಮೇ 24ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಕ್ವಾಲಿಫೈಯರ್ 2ರಲ್ಲಿ ಕಣಕ್ಕಿಳಿಯಲಿದೆ.
ಐಪಿಎಲ್ 2024ರ ಫೈನಲ್ ಪಂದ್ಯವು ಮೇ 26ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದ್ದು, ಅಂದು ಚಾಂಪಿಯನ್ ಮತ್ತು ರನ್ನರ್-ಅಪ್ ಸ್ಥಾನಗಳು ನಿರ್ಧಾರವಾಗಲಿವೆ.