ಮಾಜಿ ಕ್ರಿಕೆಟಿಗ ಮತ್ತು ಪ್ರಸ್ತುತ ಕಾಮೆಂಟೇಟರ್ ಆಗಿರುವ ಇರ್ಫಾನ್ ಪಠಾಣ್ ಅವರು ಭಾರತ ರಾಷ್ಟ್ರೀಯ ತಂಡದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯಗೆ ಬಿಸಿಸಿಐ ಆದ್ಯತೆ ನೀಡುತ್ತಿರುವುದನ್ನು ಪ್ರಶ್ನಿಸಿದ್ದಾರೆ. ಆಲ್‌ರೌಂಡರ್‌ಗೆ ಸೂಪರ್‌ಸ್ಟಾರ್ ಟ್ಯಾಗ್ ನೀಡುವುದನ್ನು ಬಿಸಿಸಿಐ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಟೀಮ್ ಇಂಡಿಯಾ ದೃಷ್ಟಿಕೋನದಲ್ಲಿ ಬದಲಾವಣೆಯ ಅಗತ್ಯವನ್ನು ಇರ್ಫಾನ್ ಪಠಾಣ್ ಒತ್ತಿಹೇಳಿದ್ದು, ಹಾರ್ದಿಕ್ ಪಾಂಡ್ಯ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಿರವಾದ ಪ್ರದರ್ಶನ ನೀಡುವವರೆಗೆ, ವಿಶೇಷವಾಗಿ ವಿಶ್ವಕಪ್‌ನಂತಹ ಪ್ರಮುಖ ಪಂದ್ಯಾವಳಿಗಳಲ್ಲಿ ಅವರಿಗೆ ಹೆಚ್ಚಿನ ಆದ್ಯತೆ ನೀಡಬಾರದು ಎಂದು ತಿಳಿಸಿದರು.

ಹಾರ್ದಿಕ್ ಪಾಂಡ್ಯ ಅವರು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ಗೆ ಮರಳಿದ ನಂತರ ಅದ್ಭುತ ಪ್ರದರ್ಶನ ನೀಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಐಪಿಎಲ್ 2024ರ ಆವೃತ್ತಿಯಲ್ಲಿ ಎಲ್ಲ ನಿರೀಕ್ಷೆಗಳನ್ನು ಹುಸಿ ಮಾಡಿದ್ದಾರೆ.
ಐಪಿಎಲ್ 2024ರಲ್ಲಿ ಈವರೆಗೆ ಎಂಟು ಪಂದ್ಯಗಳಲ್ಲಿ ಕೇವಲ ಮೂರು ಗೆಲುವಿಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದ ಹೊರತಾಗಿಯೂ, ಅವರ ವೈಯಕ್ತಿಕ ಪ್ರದರ್ಶನ ನೀರಸವಾಗಿದೆ. ಆಡಿದ ಎಂಟು ಇನ್ನಿಂಗ್ಸ್‌ಗಳಿಂದ ಕೇವಲ 151 ರನ್ ಗಳಿಸುವ ಮೂಲಕ ಹಾರ್ದಿಕ್ ಪಾಂಡ್ಯ ಅವರ ಬ್ಯಾಟಿಂಗ್ ಕಳಪೆಯಾಗಿದೆ.

ಅಲ್ಲದೆ, ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್ ನಿಷ್ಪರಿಣಾಮಕಾರಿಯಾಗಿದ್ದು, 10.94ರ ಆಘಾತಕಾರಿ ಎಕಾನಮಿ ದರದೊಂದಿಗೆ ಕೇವಲ 4 ವಿಕೆಟ್‌ಗಳನ್ನು ಪಡೆದಿದ್ದಾರೆ. ಆರು ಪಂದ್ಯಗಳಲ್ಲಿ ಮೊದಲ ಓವರ್ ಎಸೆಯುವ ಜವಾಬ್ದಾರಿಯನ್ನು ವಹಿಸಿದ್ದರೂ, ಬಯಸಿದ ಫಲಿತಾಂಶ ಪಡೆಯಲು ವಿಫಲರಾದರು.
"ಹಾರ್ದಿಕ್ ಪಾಂಡ್ಯ ಬಗ್ಗೆ ನನಗೆ ಅನಿಸುವುದೇನೆಂದರೆ, ನಾವು ಇನ್ನೂ ವಿಶ್ವಕಪ್ ಗೆದ್ದಿಲ್ಲವಾದ್ದರಿಂದ, ಇಲ್ಲಿಯವರೆಗೆ ಅವರಿಗೆ ನೀಡಿದ ಆದ್ಯತೆಯನ್ನು ನೀಡಬಾರದು ಎಂದು ಭಾರತೀಯ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಬೇಕಾಗಿದೆ. ಹಾರ್ದಿಕ್ ಪಾಂಡ್ಯರನ್ನು ಪ್ರಾಥಮಿಕ ಆಲ್‌ರೌಂಡರ್ ಎಂದು ಭಾವಿಸಿದ್ದರೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಆ ರೀತಿಯ ಪ್ರಭಾವವನ್ನು ಬೀರಬೇಕು," ಎಂದರು ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟರು.

ಆಲ್‌ರೌಂಡರ್ ಟ್ಯಾಗ್‌ಗೆ ಸಂಬಂಧಿಸಿದಂತೆ ಹಾರ್ದಿಕ್ ಪಾಂಡ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂತಹ ಪ್ರಭಾವಿ ಪ್ರದರ್ಶನ ನೀಡಿಲ್ಲ. ನಾವು ಆತನ ಸಾಮರ್ಥ್ಯದ ಬಗ್ಗೆ ಮಾತ್ರ ಯೋಚಿಸುತ್ತಿದ್ದೇವೆ,'' ಎಂದು ಇರ್ಫಾನ್ ಪಠಾಣ್ ಅವರು ಸ್ಟಾರ್ ಸ್ಪೋರ್ಟ್ಸ್ ಪ್ರೆಸ್ ರೂಮ್‌ನಲ್ಲಿ ತಿಳಿಸಿದರು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮತ್ತು ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಅವರ ಪ್ರದರ್ಶನಗಳ ನಡುವಿನ ಅಸಮಾನತೆಯನ್ನು ಇರ್ಫಾನ್ ಪಠಾಣ್ ಎತ್ತಿ ತೋರಿಸಿದರು. ವೈಯಕ್ತಿಕವಾಗಿ ಆಟಗಾರರನ್ನು ಮೇಲಕ್ಕೆತ್ತುವುದಕ್ಕಿಂತ ಹೆಚ್ಚಾಗಿ ತಂಡ-ಆಧಾರಿತ ವಿಧಾನವನ್ನು ಬೆಳೆಸುವತ್ತ ಗಮನಹರಿಸುವಂತೆ ಬಿಸಿಸಿಐಗೆ ಒತ್ತಾಯಿಸಿದರು.
ಆಸ್ಟ್ರೇಲಿಯಾದ ತಂಡ-ಕೇಂದ್ರಿತ ತತ್ತ್ವಶಾಸ್ತ್ರಕ್ಕೆ ವ್ಯತಿರಿಕ್ತತೆ ಚಿತ್ರಿಸಿದ ಮಾಜಿ ಆಲ್‌ರೌಂಡರ್, ಭಾರತವು ವೈಯಕ್ತಿಕ ಸ್ಟಾರ್‌ಗಳ ಮೇಲೆ ಹೆಚ್ಚು ಅವಲಂಬಿತರಾಗುವುದಕ್ಕಿಂತ ಹೆಚ್ಚಾಗಿ ಒಗ್ಗೂಡಿಸುವ ತಂಡದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ.
ಕೆಲವು ಆಟಗಾರರಿಗೆ ಅನಗತ್ಯ ಆದ್ಯತೆ ನೀಡುವುದರ ವಿರುದ್ಧ ಎಚ್ಚರಿಕೆ ನೀಡಿದ ಭಾರತೀಯ ಮಾಜಿ ಆಲ್‌ರೌಂಡರ್, ಅಂತಹ ವಿಧಾನವು ಪ್ರಮುಖ ಪಂದ್ಯಾವಳಿಗಳಲ್ಲಿ ಭಾರತದ ಯಶಸ್ಸಿನ ಸಾಧ್ಯತೆಗಳಿಗೆ ಅಡ್ಡಿಯಾಗಬಹುದು ಎಂದು ಹೇಳಿದರು.
"ಐಪಿಎಲ್ ಪ್ರದರ್ಶನಗಳು ಮತ್ತು ಅಂತಾರಾಷ್ಟ್ರೀಯ ಪ್ರದರ್ಶನಗಳ ನಡುವೆ ನಾವು ಗೊಂದಲಕ್ಕೊಳಗಾಗಿದ್ದೇವೆ. ಅದು ದೊಡ್ಡ ವ್ಯತ್ಯಾಸವಾಗಿದೆ. ಮೊದಲನೆಯದಾಗಿ ಅವರು ಇಡೀ ವರ್ಷ ಪೂರ್ತಿ ಆಡಬೇಕಾಗಿದೆ. ವ್ಯಕ್ತಿಗಳಿಗೆ ಆದ್ಯತೆ ನೀಡುವುದನ್ನು ಭಾರತೀಯ ಕ್ರಿಕೆಟ್ ಇದನ್ನು ನಿಲ್ಲಿಸಬೇಕು. ನೀವು ಹಾಗೆ ಮಾಡಿದರೆ, ನೀವು ಪ್ರಮುಖ ಪಂದ್ಯಾವಳಿಗಳನ್ನು ಗೆಲ್ಲುವುದಿಲ್ಲ," ಎಂಬ ಸೂಚನೆ ನೀಡಿದರು.
"ಅನೇಕ ವರ್ಷಗಳಿಂದ ಕ್ರಿಕೆಟ್ ಆಸ್ಟ್ರೇಲಿಯಾ ಏನು ಮಾಡುತ್ತಿದೆ ಎಂದರೆ, ಅವರು ವಾಸ್ತವವಾಗಿ ತಂಡದ ಆಟಕ್ಕೆ ಆದ್ಯತೆ ನೀಡುತ್ತಿದ್ದಾರೆ. ಅದು ಎಲ್ಲರನ್ನೂ ಸೂಪರ್ ಸ್ಟಾರ್‌ಗಳನ್ನಾಗಿ ಮಾಡುತ್ತಿದೆ. ತಂಡದಲ್ಲಿ ಒಬ್ಬ ಸೂಪರ್‌ಸ್ಟಾರ್ ಅಲ್ಲ, ಎಲ್ಲರೂ ಸೂಪರ್‌ಸ್ಟಾರ್‌ಗಳು. ನೀವು ಹಾಗೆ ಮಾಡದಿದ್ದರೆ, ನೀವು ಐಸಿಸಿ ಪಂದ್ಯಾವಳಿಗಳನ್ನು ಗೆಲ್ಲುವುದಿಲ್ಲ," ಎಂದು ಇರ್ಫಾನ್ ಪಠಾಣ್ ಎಚ್ಚರಿಸಿದರು.