ಶುಕ್ರವಾರ, ಮಾರ್ಚ್ 29ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ಭರ್ಜರಿ ಗೆಲುವು ಸಾಧಿಸಿದೆ.
ಆರ್‌ಸಿಬಿ ವಿರುದ್ಧ ವಿಕೆಟ್‌ಗಳ ಅಂತರದಿಂದ ಗೆಲುವು ದಾಖಲಿಸಿದ ಕೆಕೆಆರ್ ತಂಡ, ಪ್ರಸಕ್ತ ಐಪಿಎಲ್ 2024ರಲ್ಲಿ ತವರಿನ ಹೊರಗೆ ಮೊದಲ ತಂಡ ಎನಿಸಿತು ಮತ್ತು ಈ ಪಂದ್ಯಾವಳಿಯಲ್ಲಿ ತನ್ನ ಎರಡನೇ ಗೆಲುವು ಕಂಡಿತು. ಇತ್ತ ಆರ್‌ಸಿಬಿ ಆಡಿದ ಮೂರು ಪಂದ್ಯಗಳಲ್ಲಿ ಎರಡು ಸೋಲು ಮತ್ತು ಒಂದು ಗೆಲುವು ಮಾತ್ರ ಪಡೆದಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ ವಿರಾಟ್ ಕೊಹ್ಲಿ ಅವರ ಭರ್ಜರಿ ಅರ್ಧಶತಕದ ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತ್ತು.
ಆರ್‌ಸಿಬಿ ನೀಡಿದ್ದ 183 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸುನಿಲ್ ನರೈನ್ ಮತ್ತು ವೆಂಕಟೇಶ್ ಅಯ್ಯರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 16.5 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ಗಡಿ ತಲುಪಿತು.
ತೀರಾ ಕೆಟ್ಟ ಬೌಲಿಂಗ್ ಪ್ರದರ್ಶನ ನೀಡಿದ ಆರ್‌ಸಿಬಿ ತಂಡ ಆರಂಭದಿಂದಲೇ ರನ್‌ಗಳನ್ನು ಬಿಟ್ಟುಕೊಟ್ಟಿತು. ಕೆಕೆಆರ್ ತಂಡದ ಬ್ಯಾಟರ್‌ಗಳು ಅಕ್ಷರಶಃ ಆರ್‌ಸಿಬಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.

ಕೆಕೆಆರ್ ಆರಂಭಿಕ ಬ್ಯಾಟರ್‌ಗಳಾದ ಸುನಿಲ್ ನರೈನ್ ಮತ್ತು ಫಿಲ್ ಸಾಲ್ಟ್ ಉತ್ತಮ ಆರಂಭ ನೀಡಿದರು ಮತ್ತು ಈ ಜೋಡಿ ಮೊದಲ ವಿಕೆಟ್‌ಗೆ 6.3 ಓವರ್‌ಗಳಲ್ಲಿ 86 ರನ್‌ಗಳ ಜೊತೆಯಾಟ ನಿರ್ಮಿಸಿತು. ಸುನಿಲ್ ನರೈನ್ 22 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್‌ಗಳ ಮೂಲಕ 47 ರನ್ ಬಾರಿಸಿದರೆ, ಫಿಲ್ ಸಾಲ್ಟ್ 20 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಮೇತ 30 ರನ್ ಗಳಿಸಿದರು.
ನಂತರ ಬಂದ ವೆಂಕಟೇಶ್ ಅಯ್ಯರ್ ಆರ್‌ಸಿಬಿ ಬೌಲರ್‌ಗಳನ್ನು ದಂಡಿಸಿದರು ಮತ್ತು 30 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 50 ರನ್ ಬಾರಿಸಿದರು. ಶ್ರೇಯಸ್ ಅಯ್ಯರ್ 24 ಎಸೆತಗಳನ್ನು ಎದುರಿಸಿ 2 ಬೌಂಡರಿ ಮತ್ತು 2 ಸಿಕ್ಸರ್ ಮೂಲಕ ಅಜೇಯ 39 ರನ್ ಗಳಿಸಿದದರೆ, ರಿಂಕು ಸಿಂಗ್ ಅಜೇಯ 5 ರನ್ ಗಳಿಸಿ ಕೆಕೆಆರ್ ಗೆಲುವಿಗೆ ನೆರವಾದರು.

ಬೌಲಿಂಗ್‌ನಲ್ಲಿ ಆರ್‌ಸಿಬಿ ತಂಡದ ಪರ ವಿಜಯ್‌ಕುಮಾರ್ ವೈಶಾಕ್ 4 ಓವರ್‌ಗಳಲ್ಲಿ 23 ರನ್ ನೀಡಿ 1 ವಿಕೆಟ್ ಪಡೆದರೆ, ಯಶ್ ದಯಾಳ್ 4 ಓವರ್‌ಗಳಲ್ಲಿ 46 ರನ್ ನೀಡಿ 1 ವಿಕೆಟ್ ಪಡೆದರೆ, ಮಯಾಂಕ್ ಡಾಗರ್ 2.5 ಓವರ್‌ಗಳಲ್ಲಿ 23 ರನ್ ನೀಡಿ 1 ವಿಕೆಟ್ ತಮ್ಮದಾಗಿಸಿಕೊಂಡರು.
ಇದಕ್ಕೂ ಮುನ್ನ ಆರ್‌ಸಿಬಿ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಉತ್ತಮ ಆರಂಭ ನೀಡಲು ವಿಫಲರಾದರು. 2 ಓವರ್‌ಗಳಲ್ಲಿ 17 ರನ್‌ಗಳಾಗಿದ್ದಾಗ 8 ರನ್ ಗಳಿಸಿ ಆಡುತ್ತಿದ್ದ ಫಾಫ್ ಡು ಪ್ಲೆಸಿಸ್ ಔಟಾದರು.
ನಂತರ ಕ್ಯಾಮೆರಾನ್ ಗ್ರೀನ್ 21 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಮೂಲಕ 33 ರನ್ ಗಳಿಸಿದರೆ, ಗ್ಲೆನ್ ಮ್ಯಾಕ್ಸ್‌ವೆಲ್ 19 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 28 ರನ್ ಗಳಿಸಿ ದೊಡ್ಡ ಶಾಟ್ ಬಾರಿಸಲು ಹೋಗಿ ವಿಕೆಟ್ ಒಪ್ಪಿಸಿದರು.
ತವರಿನ ಅಭಿಮಾನಿಗಳ ಎದುರು ಕೊನೆಯವರೆಗೂ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ 59 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 83 ರನ್ ಬಾರಿಸಿದರು.
ಆದರೆ, ಅನುಜ್ ರಾವತ್ 3 ರನ್ ಮತ್ತು ರಜತ್ ಪಾಟಿದಾರ್ 3 ರನ್ ಗಳಿಸಿ ವಿಕೆಟ್ ನೀಡಿದರು. ಕೊನೆಯಲ್ಲಿ ದಿನೇಶ್ ಕಾರ್ತಿಕ್ ಕೇವಲ 8 ಎಸೆತಗಳಲ್ಲಿ 3 ಸಿಕ್ಸರ್‌ಗಳ ಸಮೇತ 20 ರನ್ ಸಿಡಿಸಿದರು.
ಬೌಲಿಂಗ್‌ನಲ್ಲಿ ಕೆಕೆಆರ್ ತಂಡದ ಪರ ಆಂಡ್ರೆ ರಸೆಲ್ 4 ಓವರ್‌ಗಳಲ್ಲಿ 29 ರನ್ ನೀಡಿ 2 ವಿಕೆಟ್ ಪಡೆದರೆ, ಹರ್ಷಿತ್ ರಾಣಾ 4 ಓವರ್‌ಗಳಲ್ಲಿ 39 ರನ್ ನೀಡಿ 2 ವಿಕೆಟ್ ಕಬಳಿಸಿದರು. ಉಳಿದಂತೆ ಸುನಿಲ್ ನರೈನ್ ಕೇವಲ 1 ವಿಕೆಟ್ ಪಡೆದರು. ಐಪಿಎಲ್‌ನ ದುಬಾರಿ ಆಟಗಾರ ಮಿಚೆಲ್ ಸ್ಟಾರ್ಕ್ 4 ಓವರ್‌ಗಳಲ್ಲಿ 47 ರನ್ ಬಿಟ್ಟುಕೊಟ್ಟು ದುಬಾರಿಯಾದರು.