IPL 2024: 'ಇದು ಆರ್‌ಸಿಬಿಯ ಹೊಸ ಅಧ್ಯಾಯ'; ಮತ್ತೆ ಕನ್ನಡಿಗರ ಹೃದಯ ಗೆದ್ದ ವಿರಾಟ್ ಕೊಹ್ಲಿ
ಮಂಗಳವಾರ, ಮಾರ್ಚ್ 19ರ ಸಂಜೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2024ರ ಐಪಿಎಲ್‌ಗೂ ಮುನ್ನ ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್ ನಡೆಯಿತು. ಈ ವೇಳೆ ಕೆಲವು ವಿಷಯಗಳು ಅನಾವರಣಗೊಂಡವು.
ಮೊದಲಿಗೆ 2024ರ ಮಹಿಳಾ ಪ್ರೀಮಿಯರ್ ಲೀಗ್ ಗೆದ್ದ ಆರ್‌ಸಿಬಿ ಮಹಿಳಾ ತಂಡಕ್ಕೆ ಗೌರವ ರಕ್ಷೆ ನೀಡಲಾಯಿತು ಮತ್ತು ಸನ್ಮಾನಿಸಲಾಯಿತು. ಖ್ಯಾತ ಸ್ಟಾರ್‌ಗಳಿಂದ ಮನರಂಜನಾ ಕಾರ್ಯಕ್ರಮ ಕೂಡ ಇತ್ತು.
ಆ ಬಳಿಕ Royal Challengers Bangalore ಹೆಸರನ್ನು ಅಧಿಕೃತವಾಗಿ Royal Challengers Bengaluru ಎಂದು ಮರುನಾಮಕರಣ ಮಾಡಲಾಯಿತು. ಈ ವೇಳೆ ಆರ್‌ಸಿಬಿ ತಂಡದ ಹೊಸ ಜೆರ್ಸಿಯನ್ನು ಬಿಡುಗಡೆಗೊಳಿಸಲಾಯಿತು.

ಇನ್ನು ರಾಯಲ್ ಚಾಲೆಂಜರ್ಸ್ 'ಬೆಂಗಳೂರು' ಎಂದು ಹೆಸರು ಬದಲಾಯಿಸುವ ಕೆಲವೇ ಕ್ಷಣಗಳ ಮೊದಲು, ಆರ್‌ಸಿಬಿ ಫ್ರಾಂಚೈಸಿಯ ಮಾಜಿ ವೇಗದ ಬೌಲರ್ ವಿನಯ್ ಕುಮಾರ್ ಅವರನ್ನು ತನ್ನ ಹಾಲ್ ಆಫ್ ಫೇಮ್‌ಗೆ ಸೇರಿಸಿಕೊಂಡಿತು.
ಆ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ನಲ್ಲಿ ಮತ್ತೊಮ್ಮೆ ಕನ್ನಡಿಗರ ಹೃದಯ ಗೆದ್ದರು. ಕನ್ನಡದಲ್ಲೇ ಮಾತನಾಡುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ಮೋಡಿ ಮಾಡಿದರು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಕೆಲವೇ ಕ್ಷಣದಲ್ಲಿ ವೈರಲ್ ಆಯಿತು.
ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ವಿರಾಟ್ ಕೊಹ್ಲಿ, 'ಇದು ಆರ್‌ಸಿಬಿಯ ಹೊಸ ಅಧ್ಯಾಯ' ಎಂದು ಕನ್ನಡದಲ್ಲೇ ಹೇಳುವ ಮೂಲಕ ಆರ್‌ಸಿಬಿ ತಂಡದ ಹೆಸರು ಮತ್ತು ಹೊಸ ಜೆರ್ಸಿ ಅನಾವರಣಕ್ಕೆ ಫಾಫ್ ಡು ಪ್ಲೆಸಿಸ್ ಮತ್ತು ಸ್ಮೃತಿ ಮಂಧಾನ ಜೊತೆಗೆ ಬಜರ್ ಒತ್ತಿದರು.
ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆರೆದಿದ್ದ ಸಾವಿರಾರು ಪ್ರೇಕ್ಷಕರಿಂದ ಚಪ್ಪಾಳೆ, ಹರ್ಷೋದ್ಗಾರ ಪಡೆದುಕೊಂಡರು. ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಕನ್ನಡದಲ್ಲಿ ಮಾತನಾಡಿರುವ ದೃಶ್ಯಗಳು ವೈರಲ್ ಆಗಿವೆ.

ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವನ್ನು ಎದುರು ನೋಡುತ್ತಿರುವ ವಿರಾಟ್ ಕೊಹ್ಲಿ, ಇತ್ತೀಚೆಗೆ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ನಲ್ಲಿ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಯಶಸ್ಸನ್ನು ಪುನರಾವರ್ತಿಸುವ ಆಕಾಂಕ್ಷೆಯನ್ನು ವ್ಯಕ್ತಪಡಿಸಿದರು.
ಆರ್‌ಸಿಬಿ ತಂಡಕ್ಕಾಗಿ ಐಪಿಎಲ್‌ನ ಚೊಚ್ಚಲ ಟ್ರೋಫಿಯನ್ನು ಗೆಲ್ಲುವ ಅವರ ಬಯಕೆಯನ್ನು ಒತ್ತಿ ಹೇಳಿದರು. ಆರ್‌ಸಿಬಿ ತಂಡ ಮತ್ತು ವಿರಾಟ್ ಕೊಹ್ಲಿ ಇಲ್ಲಿಯವರೆಗೆ ಐಪಿಎಲ್ ಟ್ರೋಫಿ ಗೆದ್ದಿಲ್ಲ.
ಮಂಗಳವಾರ, ಮಾರ್ಚ್ 19ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾವಿರಾರು ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ವಿರಾಟ್ ಕೊಹ್ಲಿಯ "ಇದು ಆರ್‌ಸಿಬಿಯ ಹೊಸ ಅಧ್ಯಾಯ' ಮಾತುಗಳು ಉತ್ಸಾಹವನ್ನು ಹೆಚ್ಚಿಸಿದವು.
ತಮ್ಮ 16 ವರ್ಷಗಳ ಟ್ರೋಫಿಯ ಬರಗಾಲದ ನಡುವೆಯೂ ಆರ್‌ಸಿಬಿ ಅಭಿಮಾನಿಗಳ ನಿಷ್ಠೆಯನ್ನು ಶ್ಲಾಘಿಸಿದ 35 ವರ್ಷದ ವಿರಾಟ್ ಕೊಹ್ಲಿ, ಇತ್ತೀಚಿನ WPL 2024ರ ವಿಜಯೋತ್ಸವದಲ್ಲಿ ತಮ್ಮ ಮಹಿಳಾ ತಂಡದ ಯಶಸ್ಸನ್ನು ತಮ್ಮ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಪಡೆಯುವ ಮೂಲಕ ಪುನರಾವರ್ತಿಸಲು ಸಾಧ್ಯವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
"ಐಪಿಎಲ್ ಟ್ರೋಫಿಯೊಂದಿಗೆ ನಾವು ಅದನ್ನು ದ್ವಿಗುಣಗೊಳಿಸಬಹುದು ಎಂದು ಭಾವಿಸುತ್ತೇನೆ, ಅದು ನಿಜವಾಗಿಯೂ ವಿಶೇಷವಾದದ್ದು," ಎಂದು ವಿರಾಟ್ ಕೊಹ್ಲಿ ಹೇಳಿದರು.
"ಎಲ್ಲರಿಗೂ ತಿಳಿದಿರುವಂತೆ, ನಾನು ಯಾವಾಗಲೂ ಇಲ್ಲಿಯೇ (ಆರ್‌ಸಿಬಿ) ಇರುತ್ತೇನೆ. ಮೊದಲ ಬಾರಿಗೆ (ಐಪಿಎಲ್) ಟ್ರೋಪಿ ಗೆಲ್ಲುವ ತಂಡದ ಭಾಗವಾಗಲು ಪ್ರಯತ್ನಿಸುತ್ತೇನೆ. ನಾನು ಅಭಿಮಾನಿಗಳಿಗೆ, ಫ್ರಾಂಚೈಸಿಗಾಗಿ ನನ್ನ ಸಂಪೂರ್ಣ ಪ್ರಯತ್ನ ಮಾಡುತ್ತೇನೆ. ಐಪಿಎಲ್ ಗೆಲ್ಲುವುದು ಹೇಗೆ ಎಂದು ತಿಳಿದುಕೊಳ್ಳುವುದು ನನ್ನ ಹಲವು ವರ್ಷಗಳ ಕನಸು," ಎಂದು ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ನಲ್ಲಿ ವಿರಾಟ್ ಕೊಹ್ಲಿ ಹೇಳಿದರು.
ಆರ್‌ಸಿಬಿ ತಂಡವು 2023ರ ನಿರಾಶಾದಾಯಕ ಆವೃತ್ತಿಯಿಂದ ಪುಟಿದೇಳಲು ಮತ್ತು ಮಾರ್ಚ್ 22ರಂದು ಚೆಪಾಕ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್‌ಸಿಬಿ 2024ರ ಐಪಿಎಲ್ ಆರಂಭಿಕ ಪಂದ್ಯದಲ್ಲಿ ಗೆಲುವಿನೊಂದಿಗೆ ಪ್ರಾರಂಭಿಸಲು ನೋಡುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications