ಮಾರ್ಚ್ 29ರ ಶುಕ್ರವಾರ ಸಂಜೆ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಐಪಿಎಲ್ 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ಪಂದ್ಯದಲ್ಲಿ ತಮ್ಮ ಸತತ ಎರಡನೇ ಅರ್ಧಶತಕ ಬಾರಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಾಗಿ ತಮ್ಮ ಅದ್ಭುತ ಫಾರ್ಮ್ ಮುಂದುವರೆಸಿದರು.
ಆದಾಗ್ಯೂ, ವಿರಾಟ್ ಕೊಹ್ಲಿಯ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ, ಆರ್‌ಸಿಬಿ ತಂಡದ ಕಳಪೆ ಬೌಲಿಂಗ್‌ನಿಂದಾಗಿ ತನ್ನ ಗೆಲುವಿನ ರನ್‌ಗಳನ್ನು ರಕ್ಷಿಸಿಕೊಳ್ಳಲು ವಿಫಲವಾಯಿತು. ಮಹತ್ವದ ಪಂದ್ಯವನ್ನು ಏಳು ವಿಕೆಟ್‌ಗಳಿಂದ ಸೋತಿತು.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ತಮ್ಮದೇ ಮೈದಾನದಲ್ಲಿ ಆರ್‌ಸಿಬಿ 7 ವಿಕೆಟ್‌ಗಳ ಹೀನಾಯ ಸೋಲು ಕಂಡಿತು. ಈ ಮೂಲಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2015ರಿಂದ ಸತತ 6ನೇ ಗೆಲುವನ್ನು ದಾಖಲಿಸುವ ಮೂಲಕ ಆರ್‌ಸಿಬಿಯ ತವರಿನ ಅಂಗಳದಲ್ಲಿ ಕೆಕೆಆರ್ ತನ್ನ ಪ್ರಾಬಲ್ಯವನ್ನು ವಿಸ್ತರಿಸಿತು.

ಇನ್ನು ಪಂದ್ಯದ ಮುಕ್ತಾಯದ ನಂತರ, ಕೆಕೆಆರ್ ತಂಡದ ಸ್ಟಾರ್ ಯುವ ಬ್ಯಾಟರ್ ರಿಂಕು ಸಿಂಗ್ ಅವರು ವಿರಾಟ್ ಕೊಹ್ಲಿಯಿಂದ ವಿಶೇಷ ಬ್ಯಾಟ್ ಅನ್ನು ಉಡುಗೊರೆಯಾಗಿ ಪಡೆದರು. ಆರ್‌ಸಿಬಿ ದಿಗ್ಗಜನೊಂದಿಗೆ ಸಹೋದರ ಕ್ಷಣವನ್ನು ಹಂಚಿಕೊಂಡರು.
ಭಾರತದ ಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ ಅವರು ರಿಂಕು ಸಿಂಗ್‌ಗೆ ಅವರ ಕೌಶಲ್ಯಗಳನ್ನು ಉತ್ತಮಗೊಳಿಸಲು ಕೆಲವು ಅಮೂಲ್ಯವಾದ ಬ್ಯಾಟಿಂಗ್ ಸಲಹೆಗಳನ್ನು ನೀಡಿದರು ಮತ್ತು ಮನ ಗೆಲ್ಲುವ ಗೆಸ್ಚರ್‌ನಲ್ಲಿ ಅವರಿಗೆ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದರು.
ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ರಿಂಕು ಸಿಂಗ್ ಅನುಭವಿ ಬ್ಯಾಟರ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಭಾರತೀಯ ಲೆಜೆಂಡ್ ವಿರಾಟ್ ಕೊಹ್ಲಿಯೊಂದಿಗಿನ ತಮ್ಮ ಚಿತ್ರವನ್ನು ಹಂಚಿಕೊಂಡಿದ್ದು, "ಸಲಹೆಗಾಗಿ ಮತ್ತು ಬ್ಯಾಟ್ ನೀಡಿದ್ದಕ್ಕಾಗಿ ಧನ್ಯವಾದಗಳು ವಿರಾಟ್ ಕೊಹ್ಲಿ ಭಯ್ಯಾ," ಎಂದು ಬರೆದುಕೊಂಡಿದ್ದಾರೆ.

ಆರ್‌ಸಿಬಿ ತಂಡದ ಪರ ಬ್ಯಾಟಿಂಗ್ ಆರಂಭಿಸುತ್ತಿರುವ ವಿರಾಟ್ ಕೊಹ್ಲಿ ಪ್ರಸಕ್ತ ಐಪಿಎಲ್ 2024ರಲ್ಲಿ ಅಸಾಧಾರಣ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. 90.50ರ ಸರಾಸರಿಯಲ್ಲಿ ಮತ್ತು 141.41ರ ಸ್ಟ್ರೈಕ್ ರೇಟ್‌ನಲ್ಲಿ ಎರಡು ಅರ್ಧಶತಕಗಳು ಸೇರಿದಂತೆ 181 ರನ್ ಗಳಿಸಿದ್ದಾರೆ.
ಇನ್ನು ಕೆಕೆಆರ್ ತಂಡದ ಸ್ಫೋಟಕ ಬ್ಯಾಟರ್ ರಿಂಕು ಸಿಂಗ್ ಅವರು ಪಂದ್ಯಾವಳಿಯಲ್ಲಿ ಸಿಕ್ಕಿರುವ ಸೀಮಿತ ಅವಕಾಶಗಳಲ್ಲಿ ತಮ್ಮ ಅದ್ಭುತವಾದ ಫಿನಿಶಿಂಗ್ ಆಟವನ್ನು ಪ್ರದರ್ಶಿಸಿದ್ದಾರೆ.
ಶ್ರೇಯಸ್ ಅಯ್ಯರ್ ನಾಯಕತ್ವದ ಕೆಕೆಆರ್ ತಂಡವು ಆರ್‌ಸಿಬಿ ವಿರುದ್ಧದ ಭಾರೀ ಅಂತರದ ಗೆಲುವಿನೊಂದಿಗೆ, ಹತ್ತು ತಂಡಗಳ ಐಪಿಎಲ್ 2024ರ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
ಕೆಕೆಆರ್ ತಂಡ ಏಪ್ರಿಲ್ 3ರಂದು ವಿಶಾಖಪಟ್ಟಣದಲ್ಲಿ ಗುಂಪು-ಹಂತದ ತಮ್ಮ ಮೂರನೇ ಪಂದ್ಯದಲ್ಲಿ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.