ಭಾನುವಾರ, ಮಾರ್ಚ್ 17ರಂದು ನವದೆಹಲಿಯಲ್ಲಿ ನಡೆದ 2024ರ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟ್ರೋಫಿ ಗೆಲ್ಲಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ತಂಡವನ್ನು ಸ್ಮೃತಿ ಮಂಧಾನ ಯಶಸ್ವಿಯಾಗಿ ಮುನ್ನಡೆಸಿದರು.
ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಮಹಿಳಾ ತಂಡವು 8 ವಿಕೆಟ್‌ಗಳಿಂದ ಮೆಗ್ ಲ್ಯಾನಿಂಗ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿತು.

ಈ ಮೂಲಕ ಆರ್‌ಸಿಬಿ ಫ್ರಾಂಚೈಸಿಯ 16 ವರ್ಷಗಳ ಟ್ರೋಫಿ ಬರವನ್ನು ಮಹಿಳಾ ತಂಡ ಕೊನೆಗೊಳಿಸಿತು. ಮಾರ್ಚ್ 19ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ನಲ್ಲಿ ಸ್ಮೃತಿ ಮಂಧಾನ ಪಡೆ ಟ್ರೋಫಿಯೊಂದಿಗೆ ಹಾಜರಾಗಲಿದೆ.
ಆರ್‌ಸಿಬಿ ಮಹಿಳಾ ತಂಡದ ಪ್ರಶಸ್ತಿ ಗೆಲುವಿನ ನಂತರ, ವಿರಾಟ್ ಕೊಹ್ಲಿ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ರೋಫಿಯನ್ನು ಗೆಲ್ಲಬಹುದೇ ಎಂಬುದರತ್ತ ಗಮನ ಹರಿಸಲಾಗಿದೆ.
ಇನ್ನು ತನ್ನನ್ನು ಭಾರತದ ಸೂಪರ್‌ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ ಹೋಲಿಸುವುದು ನನಗೆ ಇಷ್ಟವಿಲ್ಲ ಎಂದು ಸ್ಮೃತಿ ಮಂಧಾನ ಹೇಳಿದರು. ವಿರಾಟ್ ಕೊಹ್ಲಿಯನ್ನು "ಸ್ಫೂರ್ತಿ' ಎಂದು ಕರೆದರು ಮತ್ತು ಕಳೆದ 16 ವರ್ಷಗಳಲ್ಲಿ ಅವರ ವೃತ್ತಿಜೀವನದಲ್ಲಿ ಹೆಚ್ಚಿನ ಎತ್ತರವನ್ನು ತಲುಪಿದ್ದಕ್ಕಾಗಿ ಕಿಂಗ್ ಕೊಹ್ಲಿಯನ್ನು ಸ್ಮೃತಿ ಮಂಧಾನ ಶ್ಲಾಘಿಸಿದರು.

"ಪ್ರಶಸ್ತಿ ಒಂದು ವಿಷಯ, ಆದರೆ ಇನ್ನೊಂದು ಜೆರ್ಸಿ ನಂ.18 ಭಾರತ ತಂಡಕ್ಕೆ ಸಾಕಷ್ಟು ಸಾಧಿಸಿದೆ ಮತ್ತು ಅದು ದೊಡ್ಡ ವಿಷಯವಾಗಿದೆ. ಹಾಗಾಗಿ, ನನ್ನ ವೃತ್ತಿಜೀವನ ಎಲ್ಲಿದೆ ಮತ್ತು ಅವರು ಈಗಾಗಲೇ ಏನು ಸಾಧಿಸಿದ್ದಾರೆ ಎಂಬುದಕ್ಕೆ ಹೋಲಿಕೆ ಸರಿಯಲ್ಲ," ಎಂದು ಸ್ಮೃತಿ ಮಂಧಾನ ಸುದ್ದಿಗಾರರಿಗೆ ತಿಳಿಸಿದರು.
"ನಾನು ಹೋಲಿಕೆ ಮಾಡಿಕೊಳ್ಲಲು ಇಷ್ಟಪಡುವುದಿಲ್ಲ. ಏಕೆಂದರೆ ಅವನು ಸಾಧಿಸಿರುವುದು ಅದ್ಭುತವಾಗಿದೆ. ಅವರು ಸ್ಫೂರ್ತಿದಾಯಕ ವ್ಯಕ್ತಿಯಾಗಿದ್ದಾರೆ. ಪ್ರಶಸ್ತಿಯು ಬಹಳಷ್ಟು ವಿಷಯಗಳನ್ನು ವ್ಯಾಖ್ಯಾನಿಸುವುದಿಲ್ಲ. ನಾವೆಲ್ಲರೂ ಕೊಹ್ಲಿಯನ್ನು ಗೌರವಿಸುತ್ತೇವೆ ಮತ್ತು ಭಾರತೀಯ ಕ್ರಿಕೆಟ್‌ನಲ್ಲಿರುವ ಗೌರವ ವಿರಾಟ್‌ಗೆ ಸರಿಯಾಗಿರಬೇಕು ಎಂದು ನಾನು ಭಾವಿಸುತ್ತೇನೆ," ಎಂದು ಆರ್‌ಸಿಬಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧಾನ ಹೇಳಿದರು.
ಭಾರತ ಪುರುಷರ ತಂಡದ ಸ್ಟಾರ್ ವಿರಾಟ್ ಕೊಹ್ಲಿ ಮತ್ತು ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಸ್ಮೃತಿ ಮಂಧಾನ ಇಬ್ಬರೂ ನಂಬರ್ 18 ಜೆರ್ಸಿ ಧರಿಸುತ್ತಾರೆ.
ಈ ಹಿಂದೆ ಆರ್‌ಸಿಬಿ ಬೋಲ್ಡ್ ಡೈರೀಸ್‌ನಲ್ಲಿ, ಸ್ಮೃತಿ ಮಂಧಾನ ಅವರು ತಮ್ಮ ಬೆನ್ನಿಗೆ ನಂ.18 ಜೆರ್ಸಿಯನ್ನು ಏಕೆ ಧರಿಸುತ್ತಾರೆ ಎಂಬುದನ್ನು ಬಹಿರಂಗಪಡಿಸಿದರು. ಜೆರ್ಸಿ ಸಂಖ್ಯೆಯು ತಾನು ಮತ್ತು ಕೊಹ್ಲಿ ಆಡುವ ಕ್ರಿಕೆಟ್ ಶೈಲಿಯನ್ನು ವ್ಯಾಖ್ಯಾನಿಸುವುದಿಲ್ಲ ಎಂದು ಅವರು ಹೇಳಿದರು.
"ಈಗಾಗಿ, ನನಗೆ ಬೇರೆ ಏನೂ ಇಲ್ಲ. ನಾನು ಅದನ್ನು ನಿಜವಾಗಿಯೂ 18 ಮತ್ತು 18 ಎಂದು ಕರೆಯುತ್ತೇನೆ. ಜೆರ್ಸಿ ಸಂಖ್ಯೆಯು ಕೇವಲ ವೈಯಕ್ತಿಕ ಆಯ್ಕೆಯಾಗಿದೆ ಮತ್ತು ಅವನು ತನ್ನ ಕ್ರಿಕೆಟ್ ಅನ್ನು ಹೇಗೆ ಆಡುತ್ತಾನೆ ಮತ್ತು ನಾನು ನನ್ನದನ್ನು ಹೇಗೆ ಆಡುತ್ತೇನೆ ಎಂಬುದನ್ನು ಇದು ವ್ಯಾಖ್ಯಾನಿಸುವುದಿಲ್ಲ," ಎಂದು ಸ್ಮೃತಿ ಮಂಧಾನ ಅಭಿಪ್ರಾಯಪಟ್ಟರು.
ಇನ್ನು ವಿರಾಟ್ ಕೊಹ್ಲಿ ವಿಷಯಕ್ಕೆ ಬಂದರೆ, ಭಾನುವಾರ ಲಂಡನ್‌ನಿಂದ ಭಾರತಕ್ಕೆ ಬಂದ ಅವರು, ಸೋಮವಾರ ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಆರ್‌ಸಿಬಿ ಶಿಬಿರ ಸೇರಿಕೊಂಡು ಅಭ್ಯಾಸ ಆರಂಭಿಸಿದರು.
ಮಾರ್ಚ್ 22ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಆರ್‌ಸಿಬಿ ಹಣಾಹಣಿ ನಡೆಸುವಾಗ ವಿರಾಟ್ ಕೊಹ್ಲಿ ಎರಡು ತಿಂಗಳ ನಂತರ ಕ್ರಿಕೆಟ್‌ಗೆ ಪುನರಾಗಮನ ಮಾಡಲಿದ್ದಾರೆ.