IPL 2024: KKR vs SRH, RCB vs RR ಪ್ಲೇಆಫ್‌ಗಳು ಮಳೆಯಿಂದ ರದ್ದಾದರೆ ಮುಂದೇನು?; ಮೀಸಲು ದಿನವಿದೆಯೇ?
2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯು ಮುಕ್ತಾಯ ಹಂತಕ್ಕೆ ತಲುಪಿದ್ದು, ಅಂಕಪಟ್ಟಿಯ ಅಗ್ರ 4 ತಂಡಗಳು ಪ್ಲೇಆಫ್‌ನಲ್ಲಿ ಮುಖಾಮುಖಿಯಾಗುತ್ತಿವೆ ಮತ್ತು ರೋಚಕ ಪಂದ್ಯಗಳ ಭರವಸೆಗೆ ವೇದಿಕೆ ಸಿದ್ಧವಾಗಿದೆ.
ಮೇ 26ರಂದು ಚೆನ್ನೈನಲ್ಲಿ ನಡೆಯುವ ಫೈನಲ್‌ಗೆ ನೇರ ಅರ್ಹತೆ ಪಡೆಯುವ ಆಶಯದೊಂದಿಗೆ, ಮಂಗಳವಾರ, ಮೇ 21ರಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.

ಒಂದು ದಿನದ ಬಳಿಕ, ಮೇ 22ರಂದು ಅದೇ ಸ್ಥಳದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಹೈ-ವೋಲ್ಟೇಜ್ ಎಲಿಮಿನೇಟರ್ ಪಂದ್ಯದಲ್ಲಿ ಸೆಣಸಾಡಲಿವೆ.
ಐಪಿಎಲ್ 2024ರ ಕ್ವಾಲಿಫೈಯರ್ 1ರ ಪಂದ್ಯದ ವಿಜೇತ ತಂಡವು ನೇರವಾಗಿ ಫೈನಲ್‌ನಲ್ಲಿ ಸ್ಥಾನವನ್ನು ಕಾಯ್ದಿರಿಸುತ್ತದೆ. ಆದರೆ ಸೋತ ತಂಡ ಕ್ವಾಲಿಫೈಯರ್ 2ಗೆ ಹೋಗಲಿದ್ದು, ಅಲ್ಲಿ ಎಲಿಮಿನೇಟರ್ ಪಂದ್ಯದ ವಿಜೇತ ತಂಡವನ್ನು ಎದುರಿಸಲಿದೆ.

ಐಪಿಎಲ್‌ನ ಅಂತಿಮ ವಾರವು ಕೆಲವು ರೋಮಾಂಚನಕಾರಿ ಕ್ರಿಕೆಟ್ ಪಂದ್ಯಗಳಿಗೆ ಸಾಕ್ಷಿಯಾಗಲಿದೆ. ಆದರೆ ಶ್ರೀಮಂತ ಟಿ20 ಲೀಗ್‌ನಲ್ಲಿ ಕೊನೆಯ ಕೆಲವು ಗುಂಪು ಹಂತದ ಪಂದ್ಯಗಳು ಹೇಗೆ ಸಾಗಿವೆ ಎಂಬುದನ್ನು ಪರಿಗಣಿಸಿದರೆ, ಹವಾಮಾನ ವೈಪರಿತ್ಯ ಮತ್ತು ಮಳೆ ಭೀತಿಯೂ ಎದುರಾಗಿದೆ.
ಪ್ರಸಕ್ತ ಐಪಿಎಲ್‌ನಲ್ಲಿ ಕೊನೆಯ ಮೂರು ಪಂದ್ಯಗಳು ಮಳೆಯಿಂದ ರದ್ದಾಗಿವೆ ಮತ್ತು ಪ್ಲೇಆಫ್ ಪಂದ್ಯಗಳಿಗೆ ಸಂಬಂಧಿಸಿದಂತೆ ಕ್ರಿಕೆಟ್ ಅಭಿಮಾನಿಗಳು ಕೆಲವು ಯೋಚನೆಗಳನ್ನು ಹೊಂದಿದ್ದಾರೆ.
ಮಳೆ ಬಂದು ಪಂದ್ಯಗಳು ರದ್ದಾದರೆ ಮುಂದೇನು ಅಥವಾ ಮೀಸಲು ದಿನ ಹೊಂದಿವೆಯೇ ಎಂದು ಎಣಿಸುತ್ತಿದ್ದಾರೆ. ಆದರೆ, ಒಳ್ಳೆಯ ಸುದ್ದಿ ಏನೆಂದರೆ, ಈ ಐಪಿಎಲ್ 2024ರ ಪ್ಲೇಆಫ್ ಹಂತದ ಎಲ್ಲಾ 4 ಪಂದ್ಯಗಳಿಗೆ ಮೀಸಲು ದಿನ ಇದೆ.
ಪ್ಲೇಆಫ್ ಪಂದ್ಯಗಳಲ್ಲಿ ಮಳೆಯಾದರೆ ಏನಾಗುತ್ತದೆ?
ಐಪಿಎಲ್ 2024ರ ಪಂದ್ಯದ ಆಟದ ಪರಿಸ್ಥಿತಿಗಳಲ್ಲಿ ನಿಯಮ 13.7.3ರ ಪ್ರಕಾರ, ಮಳೆಯ ವಿಳಂಬದ ಕಾರಣ ಪಂದ್ಯವನ್ನು ಮುಗಿಸಲು ಹೆಚ್ಚುವರಿ 120 ನಿಮಿಷಗಳು ಅಥವಾ ಎರಡು ಗಂಟೆಗಳ ಕಾಲ ಲಭ್ಯವಿದೆ. ಲೀಗ್ ಹಂತದ ಪಂದ್ಯಗಳಿಗೂ ಈ ನಿಯಮ ಜಾರಿಯಲ್ಲಿತ್ತು. ಆದರೆ, ಪ್ಲೇಆಫ್‌ಗಳಲ್ಲಿ ಮೀಸಲು ದಿನದ ಆಯ್ಕೆಯು ಲಭ್ಯವಿದೆ.
ನಿಗದಿಯಾದ ದಿನದಂದು ಅರ್ಧ ಪಂದ್ಯ ಮುಗಿದಿದ್ದು, ಆಗ ಮಳೆ ಬಂದು ಆಟ ನಿಂತರೆ, ಎಲ್ಲಿಗೆ ಪಂದ್ಯ ನಿಂತಿರುತ್ತದೋ ಅಲ್ಲಿಂದಲೇ ಮೀಸಲು ದಿನದಂದು ಶುರುವಾಗುತ್ತದೆ.
ನಿಗದಿತ ದಿನದಂದು ಮಳೆ ಬಂದು ಪಂದ್ಯ ನಡೆಯಲು ಸಾಧ್ಯವಾಗದಿದ್ದರೆ, ಮೀಸಲು ದಿನದಂದು ಹೊಸ ಪಂದ್ಯ ಅಂದರೆ, ಮೊದಲ ಎಸೆತದಿಂದಲೇ ಆರಂಭವಾಗುತ್ತದೆ.
ಮೀಸಲು ದಿನವೂ ಮಳೆ ಬಂದು ಪ್ಲೇಆಫ್ ಪಂದ್ಯ ರದ್ದಾದರೆ ಮತ್ತು ಕನಿಷ್ಠ 5 ಓವರ್‌ಗಳ ಆಟವೂ ನಡೆಯಲು ಸಾಧ್ಯವಾಗದಿದ್ದರೆ, ಸೂಪರ್ ಓವರ್ ಆಡಿಸಲು ಅವಕಾಶ ಇದೆಯೇ ಎಂದು ನೋಡಲಾಗುತ್ತದೆ. ಆಗ ಆ ಫಲಿತಾಂಶದಿಂದ ಮುಂದಿನ ಹಂತಕ್ಕೆ ಹೋಗುವ ತಂಡಗಳನ್ನು ನಿರ್ಧರಿಸಲಾಗುತ್ತದೆ.
ಇನ್ನು ಕನಿಷ್ಠ ಸೂಪರ್ ಓವರ್ ಕೂಡ ಆಡಿಸಲು ಸಾಧ್ಯವಾಗದಂತೆ ಮಳೆ ಅಡ್ಡಿಪಡಿಸಿದರೆ, ಆಗ ಅಂಕಪಟ್ಟಿ ಮುನ್ನೆಲೆಗೆ ಬರುತ್ತದೆ. ಅಂಕಪಟ್ಟಿಯಲ್ಲಿ ಹೆಚ್ಚು ಅಂಕ ಮತ್ತು ಅಂಕಗಳು ಸಮಾನವಾಗಿದ್ದರೆ ಹೆಚ್ಚಿನ ನೆಟ್ ರನ್ ರೇಟ್ ಹೊಂದಿದ ತಂಡ ವಿಜೇತ ಎಂದು ಘೋಷಿಸಲಾಗುತ್ತದೆ.
ಉದಾಹರಣೆಗೆ, ಕ್ವಾಲಿಫೈಯರ್ 1 ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ, ಲೀಗ್‌ನಲ್ಲಿ ಉತ್ತಮ ರನ್ ರೇಟ್ ಹೊಂದಿದ ತಂಡವು ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಸೋತ ತಂಡ ಕ್ವಾಲಿಫೈಯರ್ 2 ಪಂದ್ಯವನ್ನು ಆಡುತ್ತದೆ.
ಆ ಸಂದರ್ಭದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಫೈನಲ್‌ಗೆ ಅರ್ಹತೆ ಪಡೆಯುತ್ತದೆ ಮತ್ತು ಹೈದರಾಬಾದ್ ಸನ್ ರೈಸರ್ಸ್ ಕ್ವಾಲಿಫೈಯರ್ 2 ಪಂದ್ಯಕ್ಕಾಗಿ ಚೆನ್ನೈಗೆ ಪ್ರಯಾಣಿಸಲಿದೆ.
ಐಪಿಎಲ್‌ನ ಹಿಂದಿನ ಆವೃತ್ತಿಗಳಿಗಿಂತ ಭಿನ್ನವಾಗಿ, ಮೇ 26ರಂದು ನಡೆಯಲಿರುವ ಫೈನಲ್ ಸೇರಿದಂತೆ ಈ ಋತುವಿನ ಎಲ್ಲಾ ಪ್ಲೇಆಫ್ ಪಂದ್ಯಗಳಿಗೆ ಮೀಸಲು ದಿನ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications