ಭಾರತ ಹಾಗೂ ಆರ್‌ಸಿಬಿ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ತಂಡದ ಸೀತಾ-ಗೀತಾ ಕುರಿತ ಕೆಲವು ಕುತೂಹಲಕಾರಿ ಅಂಶಗಳನ್ನು ಬಹಿರಂಗಪಡಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ಯುವ ಆಟಗಾರರಾದ ಇಶಾನ್ ಕಿಶನ್ ಮತ್ತು ಶುಭ್ಮನ್ ಗಿಲ್ ಮೈದಾನದ ಒಳಗೆ ಮತ್ತು ಹೊರಗೆ ಅನನ್ಯ ಬಾಂಧವ್ಯ ಹೊಂದಿದ್ದಾರೆ ಮತ್ತು ಅವರ ಗೆಳೆತನಕ್ಕೆ ಯಾವುದೇ ಪರಿಚಯ ನೀಡುವ ಅಗತ್ಯವಿಲ್ಲ.

ವಿಕೆಟ್‌ಕೀಪರ್-ಬ್ಯಾಟರ್ ಇಶಾನ್ ಕಿಶನ್ ಮತ್ತು ಸ್ಫೋಟಕ ಆರಂಭಿಕ ಶುಭ್ಮನ್ ಗಿಲ್ ಅವರು ಟೀಮ್ ಇಂಡಿಯಾದೊಂದಿಗೆ ಪ್ರಯಾಣಿಸುವಾಗ, ವಿಶೇಷವಾಗಿ ದೀರ್ಘ ಪ್ರವಾಸದ ಸಂದರ್ಭಗಳಲ್ಲಿ ಎಲ್ಲರೂ ಫೋನ್‌ಗಳಲ್ಲಿ ಬ್ಯುಸಿಯಾಗಿದ್ದರೆ, ಇವರು ಮಾತ್ರ ಪರಸ್ಪರ ಆನಂದಿಸುತ್ತಿರುತ್ತಾರೆ.
ಇಶಾನ್ ಕಿಶನ್ ಮತ್ತು ಶುಭ್ಮನ್ ಗಿಲ್ ಇಬ್ಬರೂ ಕಳೆದ ಎರಡ್ಮೂರು ವರ್ಷಗಳಿಂದ ಭಾರತ ತಂಡದ ಭಾಗವಾಗಿದ್ದಾರೆ. ಇದೀಗ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಗಿಲ್ ಮತ್ತು ಕಿಶನ್ ಅವರ ಗೆಳೆತನದ ಬಗ್ಗೆ ಮಾತನಾಡಿದ್ದು, ಇಬ್ಬರನ್ನು ಒಂದೇ ಅವಳಿ-ಜವಳಿ ಎಂದು ಲೇಬಲ್ ಮಾಡಿದ್ದಾರೆ.

ಊಟದ ಸಮಯವಾಗಲಿ ಅಥವಾ ತಂಡದ ಚರ್ಚೆಯಾಗಲಿ ಇಬ್ಬರೂ ಪರಸ್ಪರರ ಜೊತೆಯಲ್ಲಿ ಆನಂದಿಸುವುದರಿಂದ, ಇಬ್ಬರನ್ನು ಪರಸ್ಪರ ಬೇರ್ಪಡಿಸುವುದು ಕಷ್ಟ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
"ಸೀತಾ ಮತ್ತು ಗೀತಾ (ಇಶಾನ್ ಕಿಶನ್ ಮತ್ತು ಶುಭ್ಮನ್ ಗಿಲ್) ತುಂಬಾ ಆನಂದಿಸುತ್ತಾರೆ. ನನಗೂ ಏನಾಗುತ್ತಿದೆ ಎಂಬುದರ ಸುಳಿವು ಇಲ್ಲ. ಹೆಚ್ಚು ಹೇಳಲು ಸಾಧ್ಯವಿಲ್ಲ, ಆದರೆ ಈ ಯುವಕರು ಪ್ರವಾಸದ ಸಮಯದಲ್ಲಿ ಒಬ್ಬಂಟಿಯಾಗಿರಲು ಸಾಧ್ಯವಿಲ್ಲ. ನಾವು ಆಹಾರಕ್ಕಾಗಿ ಹೊರಗೆ ಬಂದರೆ, ಅವರು ಒಟ್ಟಿಗೆ ಬರುತ್ತಾರೆ. ಚರ್ಚೆಯ ವೇಳೆ ಅವರು ಯಾವಾಗಲೂ ಒಟ್ಟಿಗೆ ಇರುತ್ತಾರೆ. ಅವರು ಒಬ್ಬಂಟಿಯಾಗಿರುವುದನ್ನು ನಾನು ಮಾತ್ರ ನೋಡಿಲ್ಲ. ಅವರಿಬ್ಬರು ಉತ್ತಮ ಸ್ನೇಹಿತರು," ಎಂದು ಕಾರ್ಯಕ್ರಮವೊಂದರಲ್ಲಿ ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ.

ಶುಭ್ಮನ್ ಗಿಲ್ ಮತ್ತು ಇಶಾನ್ ಕಿಶನ್ ಇಬ್ಬರೂ ಪ್ರಸ್ತುತ ಐಪಿಎಲ್ 2024ರ ಋತುವಿನಲ್ಲಿ ಬೇರೆ ತಂಡಗಳಿಗೆ ಆಡುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ನಿರ್ಗಮನದ ನಂತರ ಶುಭ್ಮನ್ ಗಿಲ್ ಅವರು ಗುಜರಾತ್ ಟೈಟನ್ಸ್ ತಂಡವನ್ನು ಮುನ್ನಡೆಸುತ್ತಿದ್ದರೆ, ಇಶಾನ್ ಕಿಶನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ವಿಕೆಟ್ ಕೀಪರ್-ಬ್ಯಾಟರ್ ಆಗಿ ಆಡುತ್ತಿದ್ದಾರೆ.
ಬುಧವಾರ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್ 2024ರಲ್ಲಿ ಮೊದಲ ಸೋಲು ಅನುಭವಿಸಿದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ನಾಯಕ ಶುಭ್ಮನ್ ಗಿಲ್ 72 ರನ್ ಗಳಿಸಿದರು. ಕಳೆದ ವಾರ ಪಂಜಾಬ್ ಕಿಂಗ್ಸ್ ವಿರುದ್ಧದ ತನ್ನ ಶತಕವನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದ ಶುಭ್ಮನ್ ಗಿಲ್ ಇದೀಗ ಸತತ ಅರ್ಧಶತಕ ಬಾರಿಸಿದ್ದಾರೆ.
ಮತ್ತೊಂದೆಡೆ, ಇಶಾನ್ ಕಿಶನ್ ಈ ಆವೃತ್ತಿಯಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಕೇವಲ 92 ರನ್ ಗಳಿಸಿದ್ದು, ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಅವರ ಫಾರ್ಮ್ ಅನ್ನು ಇನ್ನೂ ಕಂಡುಕೊಂಡಿಲ್ಲ
ಜಾರ್ಖಂಡ್‌ಗಾಗಿ ದೇಶೀಯ ಪಂದ್ಯಗಳನ್ನು ಆಡದಿರಲು ನಿರ್ಧರಿಸಿದ ನಂತರ ವಿಕೆಟ ಕೀಪರ್-ಬ್ಯಾಟರ್ ಇತ್ತೀಚೆಗೆ ತನ್ನ ಬಿಸಿಸಿಐ ಒಪ್ಪಂದವನ್ನು ಕಳೆದುಕೊಂಡರು. ಮುಂಬರುವ 2024ರ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಈ ಐಪಿಎಲ್‌ನಲ್ಲಿ ದೊಡ್ಡ ಇನ್ನಿಂಗ್ಸ್‌ಗಳನ್ನು ಆಡಬೇಕಿದೆ.
ಇನ್ನು ವಿರಾಟ್ ಕೊಹ್ಲಿ ಕುರಿತು ಹೇಳುವುದಾದರೆ, ಈಗಾಗಲೇ ತಮ್ಮ ಹೆಸರಿಗೆ ಶತಕದೊಂದಿಗೆ ಐಪಿಎಲ್ 2024ರಲ್ಲಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆರ್‌ಸಿಬಿ ಪರ ಆಡುತ್ತಿರುವ ವಿರಾಟ್ ಕೊಹ್ಲಿ ಆಡಿದ 5 ಪಂದ್ಯಗಳಲ್ಲಿ 105.33ರ ಸರಾಸರಿಯಲ್ಲಿ 316 ರನ್ ಗಳಿಸಿದ್ದಾರೆ.
ಆದರೆ, ಆರ್‌ಸಿಬಿ ತಂಡ ತನ್ನ ಮೊದಲ ಐದು ಪಂದ್ಯಗಳಲ್ಲಿ ನಾಲ್ಕು ಸೋತಿದ್ದು, ಒಂದರಲ್ಲಿ ಗೆಲುವು ಸಾಧಿಸಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಗುರುವಾರ, ಏಪ್ರಿಲ್ 11ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆರ್‌ಸಿಬಿ ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.