ಈಗ ಕಾಲ ಬದಲಾಗಿದೆ. ಕ್ರಿಕೆಟ್ ಸಹ ಬದಾಲಗಿದೆ. ವರ್ಷದಲ್ಲಿ ಅದೆಷ್ಟೋ ಸೂಪರ್ ಓವರ್‌ಗಳು ಅಭಿಮಾನಿಗಳನ್ನು ರಂಜಿಸುತ್ತವೆ. ಅದರಲ್ಲಿ ಹಲವು ಫ್ಯಾನ್ಸ್ ಮನದಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಇನ್ನು ಹಲವು ಮರೆಯಾಗುತ್ತವೆ. ಐಪಿಎಲ್‌ನಲ್ಲಿ ಸೂಪರ್ ಓವರ್‌ಗಳ ಸಂಖ್ಯೆ ಏನು ಕಡಿಮೆ ಇಲ್ಲ.
ಐಪಿಎಲ್‌ನಲ್ಲಿ 15ಕ್ಕೂ ಹೆಚ್ಚು ಸೂಪರ್ ಓವರ್‌ಗಳು ಅಭಿಮಾನಿಗಳನ್ನು ರಂಜಿಸಿವೆ. ಆದರೆ, ಅದೇ ಐಪಿಎಲ್ ಇತಿಹಾಸದಲ್ಲಿ ಮೊದಲ ಸೂಪರ್ ಓವರ್ ಬೌಲ್ ಮಾಡಿದ ಬೌಲರ್ ಯಾರು ಎಂಬ ಪ್ರಶ್ನೆ ಕೇಳಿದರೆ ತಲೆ ಕೆರೆದುಕೊಳ್ಳುತ್ತಾ ಕುಳಿತು ಬಿಡಬೇಕು. ಇದಕ್ಕೆ ಉತ್ತರ ಇಲ್ಲಿದೆ.

ಐಪಿಎಲ್ 2008 ರಲ್ಲಿ ಪ್ರಾರಂಭವಾಯಿತು. ಲೀಗ್‌ನ ಮೊದಲ ಸೂಪರ್ ಓವರ್ 2009 ರಲ್ಲಿ ನಡೆಯಿತು. ಐಪಿಎಲ್‌ನ ಮೊದಲ ಸೂಪರ್ ಓವರ್ ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯಿತು. ನಂತರ ರಾಜಸ್ಥಾನ ತಂಡದ ನಾಯಕ ಶೇನ್ ವಾರ್ನ್ ಸೂಪರ್ ಓವರ್‌ನಲ್ಲಿ ಯುವ ಕಮ್ರಾನ್ ಖಾನ್‌ಗೆ ಚೆಂಡನ್ನು ನೀಡಿದರು.
ರಾಜಸ್ಥಾನ ತಂಡದಲ್ಲಿ ಆಗ ಭಾರತದ ಮುನಾಫ್ ಪಟೇಲ್, ರವೀಂದ್ರ ಜಡೇಜಾ, ಇಂಗ್ಲೆಂಡ್‌ನ ಡಿಮಿಟ್ರಿ ಮಸ್ಕರೇನ್ಹಸ್ ಮತ್ತು ನಾಯಕ ಶೇನ್ ವಾರ್ನ್ ಸ್ವತಃ ರಾಜಸ್ಥಾನ ತಂಡದಲ್ಲಿದ್ದರು, ಆದರೆ ಅವರು ಸೂಪರ್ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿಯನ್ನು ಯುವ ಕಮ್ರಾನ್‌ಗೆ ವಹಿಸಿದರು.
18ರ ಹರೆಯದ ಕಮ್ರಾನ್ ಖಾನ್ ಅವರ ಮುಂದೆ ಸೂಪರ್ ಓವರ್‌ನಲ್ಲಿ ಬ್ರೆಂಡನ್ ಮೆಕಲಮ್ ಮತ್ತು ಕ್ರಿಸ್ ಗೇಲ್ ಅವರಂತಹ ವಿಶ್ವದ ದಿಗ್ಗಜ ಆಟಗಾರರು ಇದ್ದರು. ಈ ಪಂದ್ಯದಲ್ಲಿ ಕಮ್ರಾನ್ ಬೌಲಿಂಗ್ ಮಾಡಿದ ರೀತಿ, ನಾಯಕನಿಗೆ ಅವರ ಮೇಲೆ ನಂಬಿಕೆ ಬರುವುದು ಸಹಜ. ಈ ಎಡಗೈ ವೇಗದ ಬೌಲರ್ ಪಂದ್ಯದಲ್ಲಿ ನಾಲ್ಕು ಓವರ್‌ಗಳಲ್ಲಿ ಕೇವಲ 18 ರನ್ ನೀಡಿ ಮೂರು ವಿಕೆಟ್ ಪಡೆದಿದ್ದರು. ಈ ಪಂದ್ಯದಲ್ಲಿ ಕಮ್ರಾನ್ ಸೌರವ್ ಗಂಗೂಲಿ, ಲಕ್ಷ್ಮಿ ರತನ್ ಶುಕ್ಲಾ ಮತ್ತು ಸಂಜಯ್ ಬಂಗಾರ್ ಅವರನ್ನು ಔಟ್ ಮಾಡಿದ್ದರು.

ಕಮ್ರಾನ್ ಅವರ ಓವರ್‌ನಲ್ಲಿ ಕೆಕೆಆರ್ ಒಟ್ಟು 15 ರನ್ ಗಳಿಸಿತು. ಕ್ರಿಸ್ ಗೇಲ್ ಮೂರು ಬೌಂಡರಿಗಳನ್ನು ಬಾರಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ರಾಜಸ್ಥಾನ ಗೆಲ್ಲಲು 6 ಎಸೆತಗಳಲ್ಲಿ 16 ರನ್ ಗಳಿಸಬೇಕಿತ್ತು. ಈ ಜವಾಬ್ದಾರಿಯನ್ನು ಯುವ ಯೂಸುಫ್ ಪಠಾಣ್‌ಗೆ ನೀಡಿದರು. ಪಠಾಣ್ ಕೂಡ ನಾಯಕನನ್ನು ನಿರಾಸೆಗೊಳಿಸಲಿಲ್ಲ ಮತ್ತು ತಮ್ಮ ತಂಡವನ್ನು ಸ್ಮರಣೀಯ ಗೆಲುವಿನತ್ತ ಮುನ್ನಡೆಸಿದರು.
ಬಡ ಕುಟುಂಬಕ್ಕೆ ಸೇರಿದ ಕಮ್ರಾನ್ ಖಾನ್ ಗೆ ಐಪಿಎಲ್ ಆಡುವುದು ಕನಸು. ಕಮ್ರಾನ್ ಅವರು ತಮ್ಮ ಮೊದಲ ಸೀಸನ್‌ನಲ್ಲಿಯೇ ದೊಡ್ಡ ಆಟಗಾರರನ್ನು ಔಟ್ ಮಾಡುವ ಮೂಲಕ ಗಮನ ಸೆಳೆದಿದ್ದರು. ಬಳಿಕ ಈ ಆಟಗಾರ ಕಣ್ಮರೆಯಾದರು.
ಒಂದು ಕಾಲದಲ್ಲಿ ಕಮ್ರಾನ್ ಭಾರತೀಯ ಕ್ರಿಕೆಟ್‌ನ ಮುಂದಿನ ಸೂಪರ್‌ಸ್ಟಾರ್ ಎಂದು ಕರೆಯಲ್ಪಟ್ಟರು. ಕಮ್ರಾನ್ ಐಪಿಎಲ್‌ನಲ್ಲಿ ಕೇವಲ 9 ಪಂದ್ಯಗಳನ್ನು ಆಡಿದರು. ಕಮ್ರಾನ್ 2011 ರಲ್ಲಿ ಐಪಿಎಲ್‌ನಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಅಂದಿನಿಂದ ಅವರು ಐಪಿಎಲ್‌ನಿಂದ ದೂರ ಉಳಿದಿದ್ದಾರೆ. ಕಮ್ರಾನ್ ಐಪಿಎಲ್‌ನಿಂದ ಏಕೆ ದೂರ ಉಳಿದರು ಎಂಬುದು ತಿಳಿದಿಲ್ಲ.