ಸನ್‌ರೈಸರ್ಸ್ ಹೈದರಾಬಾದ್ ತಂಡ ಈ ಬಾರಿ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿಯುವ ಕನಸಿನಲ್ಲಿದೆ. ಕಳೆದ ಕೆಲವು ಆವೃತ್ತಿಗಳಲ್ಲಿ ಹೈದರಾಬಾದ್ ತಂಡದ ಪ್ರದರ್ಶನ ಕಳಪೆ ಆಗಿತ್ತು. ತಂಡ ಪ್ಲೇ ಆಫ್ ಪ್ರವೇಶಿಸಲು ಸಹ ಸಾಧ್ಯವಾಗಿರಲಿಲ್ಲ. ಈ ಬಾರಿ ತನ್ನ ಹಳೆಯ ಖದರ್‌ಗೆ ಆರೆಂಜ್ ಆರ್ಮಿ ಮರಳುತ್ತಾ ಎಂಬ ಚಿಂತೆ ಕಾಡುತ್ತಿದೆ.
ಟೂರ್ನಿ ಆರಂಭಕ್ಕೂ ಮುನ್ನವೇ ಎಸ್‌ಆರ್‌ಎಚ್ ಬಹು ಸುದ್ದಿಯಲ್ಲಿದೆ. ಒಮ್ಮೆ ನಾಯಕನನ್ನು ಬದಲಾವಣೆ ಮಾಡಿ ಸುದ್ದಿಗೆ ಆಹಾರವಾದರೆ, ಮತ್ತೊಮ್ಮೆ ಕೋಚ್ ಚೇಂಜ್ ಮಾಡಿ ಸುದ್ದಿಯಲ್ಲಿದೆ. ಏನಾದ್ರೂ ಆಗಲಿ ಈ ಬಾರಿ ಐಪಿಎಲ್ ಮುಕುಟವನ್ನು ತಮ್ಮ ತಂಡಕ್ಕೆ ತೊಡಿಸಬೇಕು ಎಂದು ಮ್ಯಾನೇಜ್ಮೆಂಟ್ ಪ್ಲ್ಯಾನ್ ಮಾಡಿಕೊಂಡಂತೆ ಕಾಣುತ್ತಿದೆ. ಇದಕ್ಕೆ ಪುಷ್ಠಿಯಾಗಿ ಹರಾಜಿನಲ್ಲಿ ಸ್ಟಾರ್ ಆಟಗಾರ ವಿಶ್ವಕಪ್ ವಿಜೇತ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ತಂಡಕ್ಕೆ ಭಾರೀ ಮೊತ್ತ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಈ ಸ್ಟಾರ್ ಪ್ಲೇಯರ್ ತಂಡವನ್ನು ಚಾಂಪಿಯನ್ ಪಟ್ಟಕ್ಕೆ ಏರಿಸುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.

ಸನ್‌ರೈಸರ್ಸ್ ಹೈದರಾಬಾದ್ ತಂಡವು ಇಲ್ಲಿಯವರೆಗೆ ಅಂದರೆ 2016 ರಲ್ಲಿ ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಐಪಿಎಲ್ ಟ್ರೋಫಿಯನ್ನು ಗೆದ್ದಿದೆ. ನಂತರ ವಾರ್ನರ್ ಅವರ ಕಳಪೆ ಫಾರ್ಮ್‌ನಿಂದಾಗಿ ಅವರಿಂದ ನಾಯಕತ್ವ ಕಸಿದುಕೊಂಡು ತಂಡದಿಂದ ಕೈ ಬಿಡಲಾಯಿತು. ಈ ಬಾರಿ ಏಡನ್ ಮಾರ್ಕ್ರಾಮ್ ಬದಲಿಗೆ ಪ್ಯಾಟ್ ಕಮ್ಮಿನ್ಸ್ ಅವರನ್ನು ನೂತನ ನಾಯಕರನ್ನಾಗಿ ಮಾಡಲಾಗಿದೆ. ಕಮ್ಮಿನ್ಸ್ ಅವರನ್ನು ಭಾರಿ ಬೆಲೆಗೆ ಖರೀದಿಸಿದಾಗಲೇ ಇವರು ತಂಡವನ್ನು ಮುನ್ನಡೆಸುತ್ತಾರೆ ಎಂಬ ಊಹಾಪೋಹಗಳು ಆರಂಭವಾಗಿದ್ದವು. ಈಗ ಇದು ನಿಜವಾಗಿದೆ.
ಪ್ಯಾಟ್ ಕಮ್ಮಿನ್ಸ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್, 2023 ರಲ್ಲಿ ಏಕದಿನ ವಿಶ್ವಕಪ್ ಗೆದ್ದ ನಾಯಕ. ಹೀಗಾಗಿ ಅವರನ್ನು ವಿಶ್ವದ ಶ್ರೇಷ್ಠ ನಾಯಕರ ಸಾಲಿನಲ್ಲಿ ನಿಲ್ಲಿಸಲಾಗುತ್ತಿದೆ. SRH ತಂಡವು 2020 ರಲ್ಲಿ ಕೊನೆಯ ಬಾರಿಗೆ ಪ್ಲೇಆಫ್ ತಲುಪಿತು. ಹತ್ತು ತಂಡಗಳಲ್ಲಿ ಅಗ್ರ 4ರಲ್ಲಿ ಸ್ಥಾನ ಪಡೆಯುವುದು ಸುಲಭದ ಕೆಲಸವಲ್ಲ, ಇದು ಕಮ್ಮಿನ್ಸ್‌ಗೂ ತಿಳಿದಿದೆ.

ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ ಎಸ್‌ಆರ್‌ಎಚ್‌ನ ಮೊದಲ ಪಂದ್ಯ ಮಾರ್ಚ್ 23 ರಂದು ಕೆಕೆಆರ್ ವಿರುದ್ಧ ನಡೆಯಲಿದೆ. ಈ ಪಂದ್ಯ ಕೋಲ್ಕತ್ತಾದಲ್ಲಿ ನಡೆಯಲಿದೆ. ಅಂದರೆ ಮೊದಲ ಪಂದ್ಯದಿಂದಲೇ ಪ್ಯಾಟ್ ಕಮಿನ್ಸ್ ಪರೀಕ್ಷೆ ಆರಂಭವಾಗಲಿದೆ. ಕಮ್ಮಿನ್ಸ್ ಅವರ ಮೇಲೆ ಒತ್ತಡವಿರುತ್ತದೆ. ಪ್ಯಾಟ್ ಕಮಿನ್ಸ್ ಈ ಹಿಂದೆ 2022 ರಲ್ಲಿ ಕೆಕೆಆರ್ ಪರ ಆಡುತ್ತಿದ್ದರು. ಆದರೆ ಅವರು 2023 ರ ಐಪಿಎಲ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಒಂದು ವರ್ಷದ ಬಿಡುವಿನ ನಂತರ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
ಪ್ಯಾಟ್ ಕಮ್ಮಿನ್ಸ್ ಇದುವರೆಗೆ 130, ಟಿ20 ಪಂದ್ಯಗಳಲ್ಲಿ 145 ವಿಕೆಟ್‌ಗಳನ್ನು ಪಡೆದಿದ್ದಾರೆ. ಅದೇ ಸಮಯದಲ್ಲಿ, ಅವರು ಮೂರು ಅರ್ಧ ಶತಕಗಳನ್ನು ಸಹ ಗಳಿಸಿದ್ದಾರೆ. ಪ್ಯಾಟ್ ಕಮ್ಮಿನ್ಸ್ ಅವರನ್ನು ವೇಗದ ಬೌಲರ್ ಎಂದು ಪರಿಗಣಿಸಲಾಗಿದ್ದರೂ ಸಹ, ಅವರು ತಮ್ಮ ತಂಡಕ್ಕೆ ಬ್ಯಾಟ್‌ನೊಂದಿಗೆ ಕೊಡುಗೆ ನೀಡಿದ್ದಾರೆ.
ತಮ್ಮ ಅನುಭವವನ್ನು ಬಳಸಿಕೊಂಡು ಪ್ಯಾಟ್ ಕಮಿನ್ಸ್ ಆಡುವ ಸಾಧ್ಯತೆ ಇದೆ. ಅಂದಾಗ ಮಾತ್ರ ಎಂಟು ವರ್ಷದ ಪ್ರಶಸ್ತಿ ಗೆಲುವಿನ ಬರಕ್ಕೆ ಬ್ರೇಕ್ ಬೀಳಬಹುದು. ಅಲ್ಲದೆ ತಂಡವನ್ನು ಉತ್ತಮವಾಗಿ ಮುನ್ನಡೆಸುವ ಅಗತ್ಯವೂ ಇದೆ. ಎಲ್ಲ ಆಟಗಾರರನ್ನು ವಿಶ್ವಾಸಕ್ಕೆ ಪಡೆದು ಆಡಿದಲ್ಲಿ ಗೆಲುವಿನ ಸಿಹಿ ಸಿಗುತ್ತದೆ.