ಮುಂಬೈ ಇಂಡಿಯನ್ಸ್ ಪ್ರಸಕ್ತ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಪ್ರಶಸ್ತಿ ಗೆಲ್ಲುವ ಆಸೆಯನ್ನು ಹೊಂದಿದೆ. ಕಳೆದ ಮೂರು ಆವೃತ್ತಿಗಳಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದ್ದ ಮುಂಬೈ, ನವ ಉತ್ಸಾಹದಿಂದ ಕಣಕ್ಕೆ ಇಳಿಯಲಿದೆ. ಈಗಾಗಲೇ ಐದು ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ಮುಂಬೈ, ಮತ್ತೊಂದು ಬಾರಿ ಚಾಂಪಿಯನ್ ಆಗುವ ಕನಸು ಕಾಣುತ್ತಿದೆ.
ಮುಂಬೈ ಇಂಡಿಯನ್ಸ್ 2020ರಲ್ಲಿ ಕೊನೆಯ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಕಳೆದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮಾ ನಾಯಕತ್ವದಲ್ಲಿ ಪ್ಲೇ ಆಫ್ ಪ್ರವೇಶಿಸಿತ್ತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋತಿತ್ತು.

ಈ ಕಾರಣಗಳಿಗಾಗಿ, 2024 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದ ಜವಾಬ್ದಾರಿಯನ್ನು ಹಾರ್ದಿಕ್ ಪಾಂಡ್ಯ ಅವರಿಗೆ ನೀಡಿದೆ. ಹೊಸ ನಾಯಕ ಹೇಗೆ ತಂಡವನ್ನು ಮುನ್ನಡೆಸಲಿದ್ದಾರೆ ಎಂಬುದು ರೋಚಕತೆ ಹೆಚ್ಚಿಸಿದೆ.
ಮುಂಬೈ ಬ್ಯಾಟಿಂಗ್ ಬಲಿಷ್ಠವಾಗಿದೆ. ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಓಪನರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಇಬ್ಬರು ಸ್ಟಾರ್ ಆಟಗಾರರು ತಂಡಕ್ಕೆ ಬಿಗ್ ಇನ್ನಿಂಗ್ಸ್ ಕಟ್ಟುವ ಕ್ಷಮತೆಯನ್ನು ಹೊಂದಿದ್ದಾರೆ. ರೋಹಿತ್ ಬಿಗ್ ಶಾಟ್‌ಗಳ ಮೂಲಕ ರನ್ ರೇಟ್ ಹಿಗ್ಗಿಸುತ್ತಾ ಸಾಗಿದರೆ, ಇಶಾನ್ ಕಿಶನ್ ಜವಾಬ್ದಾರಿಯುತ ಆಟವನ್ನು ಆಡಬೇಕಿದೆ. ಅಂದಾಗ ಮಾತ್ರ ದೊಡ್ಡ ಮೊತ್ತದ ಕನಸು ನನಸಾಗಲಿದೆ.

ಮಿಡ್ಲ್ ಆರ್ಡರ್‌ನಲ್ಲಿ ತಿಲಕ್ ವರ್ಮಾ ಅವರು ಕಳೆದ ಎರಡು ಋತುಗಳಲ್ಲಿ 300 ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ಭರವಸೆ ಮೂಡಿಸಿದ್ದಾರೆ. ಅವರನ್ನು ಹೊರತುಪಡಿಸಿ, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್ ಮತ್ತು ಹಾರ್ದಿಕ್ ಪಾಂಡ್ಯ ರೂಪದಲ್ಲಿ ತಂಡವು ಅಂತರರಾಷ್ಟ್ರೀಯ ಮಟ್ಟದ ಬಲಿಷ್ಠ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ.
ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಗಾಯದ ಕಾರಣ ಐಪಿಎಲ್ 2023 ರಲ್ಲಿ ಒಂದೇ ಒಂದು ಪಂದ್ಯವನ್ನು ಆಡಿರಲಿಲ್ಲ. ಆದರೆ ಈ ಬಾರಿ ಅಂಗಳಕ್ಕೆ ಇಳಿಯಲಿದ್ದಾರೆ. ಇವರ ನಿಖರ್ ಯಾರ್ಕರ್‌ಗಳಿಗೆ ಉತ್ತರಿಸಲು ಸ್ಟಾರ್ ಬ್ಯಾಟರ್‌ಗಳು ಹೆಣಗಾಡುತ್ತಾರೆ.

ಪಿಯೂಷ್ ಚಾವ್ಲಾ ಅನುಭವ ತಂಡಕ್ಕೆ ನೆರವಾಗಲಿದೆ. ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಜೆರಾಲ್ಡ್ ಕೊಯೆಟ್ಜಿ ಮತ್ತು ವೆಸ್ಟ್ ಇಂಡೀಸ್‌ನ ರೊಮಾರಿಯೊ ಶೆಫರ್ಡ್ ಎದುರಾಳಿಗಳನ್ನು ಕಾಡಲು ಸಿದ್ಧರಾಗಿದ್ದಾರೆ. ಈ ಎಲ್ಲ ಆಟಗಾರರು ಸಂಘಟಿತ ಆಟವನ್ನು ನೀಡಿದಲ್ಲಿ ಗೆಲುವಿನ ಕನಸು ನನಸಾಗುತ್ತದೆ.