ಐಪಿಎಲ್ 2025 ರ 16ನೇ ಪಂದ್ಯದಲ್ಲಿ ಶುಕ್ರವಾರ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್‌ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ಉಭಯ ತಂಡಗಳ ಪಂದ್ಯಕ್ಕೆ ಲಕ್ನೋದ ಏಕಾನಾ ಕ್ರೀಡಾಂಗಣ ಆತಿಥ್ಯವಹಿಸಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿರುವ ಲಕ್ನೋ ಸೂಪರ್‌ಜೈಂಟ್ಸ್ ತಂಡ ಆನೆ ಬಲ ಬಂದಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕಾಗಿ ಗುರುವಾರ ರಾತ್ರಿ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ಸ್ಟಾರ್ ವೇಗದ ಬೌಲರ್ ಸೇರಿಕೊಂಡಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಆಕಾಶ್‌ದೀಪ್ ತಮ್ಮ ಹೊಸ ಫ್ರಾಂಚೈಸಿ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಗಾಯದಿಂದ ಹೊರಗುಳಿದಿದ್ದ ಆಕಾಶ್‌ದೀಪ್ ಚೇತರಿಸಿಕೊಂಡಿದ್ದು, ಲಕ್ನೋ ಪರ ಆಡಲು ತುಂಬಾ ಉತ್ಸುಕರಾಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಏಕಾನಾ ಕ್ರೀಡಾಂಗಣದಲ್ಲಿ ಮಾಧ್ಯಮಗಳೊಂದಿಗೆ ಆಕಾಶ್‌ದೀಪ್ ಮಾತನಾಡಿದ್ದಾರೆ.

ಗಾಯದಿಂದಾಗಿ ತಂಡದೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗದಿದ್ದರೂ, ತಂಡದ ಮ್ಯಾನೇಜ್ಮೆಂಟ್ ಅನ್ನು ಭೇಟಿಯಾದಾಗಲೆಲ್ಲಾ ನನಗೆ ತುಂಬಾ ಒಳ್ಳೆಯ ಭಾವನೆ ಮೂಡಿತು ಎಂದು ಆಕಾಶ್‌ದೀಪ್ ಹೇಳಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ನಂತರ ಲಕ್ನೋ ನನ್ನ ಎರಡನೇ ಐಪಿಎಲ್ ತಂಡ. ಈ ತಂಡಕ್ಕಾಗಿ ಆಡಲು ಸಜ್ಜಾಗಿದ್ದೇನೆ. ನಾನು ಈಗ ಶೇ. 100 ರಷ್ಟು ಫಿಟ್ ಆಗಿದ್ದೇನೆ. ಮುಂಬೈ ವಿರುದ್ಧ ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ ಎಂದು ಆಕಾಶ್‌ದೀಪ್ ತಿಳಿಸಿದ್ದಾರೆ.
ಲಕ್ನೋ ತಂಡದ ಮಾರ್ಗದರ್ಶಕರಾಗಿ, ಜಹೀರ್ ಖಾನ್ ಅವರಿಂದ ಕಲಿಯುವುದು ಬಹಳಷ್ಟಿದೆ. ಅವರು ಒಬ್ಬ ಅದ್ಭುತ ಬೌಲರ್ ಆಗಿದ್ದರು. ಮುಂದಿನ ಎರಡು ತಿಂಗಳುಗಳು ನನಗೆ ಬಹಳ ಮುಖ್ಯ. ನಾನು ಅವರಿಂದ ಬೌಲಿಂಗ್ ತಂತ್ರಗಳನ್ನು ಕಲಿಯುತ್ತೇನೆ. ಅದು ನನ್ನ ವೃತ್ತಿಜೀವನಕ್ಕೆ ಮುಖ್ಯವಾಗುತ್ತದೆ. ಜಹೀರ್ ಅವರಂತಹ ಸ್ಟಾರ್ ಆಟಗಾರನೊಂದಿಗೆ ಎಲ್‌ಎಸ್‌ಜಿ ತಂಡದೊಂದಿಗೆ ಸಂಬಂಧ ಹೊಂದಲು ನನಗೆ ಹೆಮ್ಮೆಯ ವಿಷಯವಾಗಿದೆ ಎಂದು ಆಕಾಶ್‌ದೀಪ್ ಹೇಳಿದ್ದಾರೆ.
ಎನ್‌ಸಿಎಯಲ್ಲಿ ಗಾಯದಿಂದ ಚೇತರಿಸಿಕೊಳ್ಳುವ ಪ್ರಕ್ರಿಯೆಯು ತುಂಬಾ ವಿಭಿನ್ನವಾಗಿದೆ ಎಂದು ಆಕಾಶ್‌ದೀಪ್ ಹೇಳಿದ್ದಾರೆ. ಏಪ್ರಿಲ್ 2 ರಂದು ಲಕ್ನೋ ತಂಡವನ್ನು ಸೇರಲು ನನಗೆ ಸೂಚನೆ ಸಿಗುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಮಯಾಂಕ್ ಯಾದವ್ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ಆದರೆ ಅವರು ಕೂಡ ಶೀಘ್ರದಲ್ಲೇ ತಂಡವನ್ನು ಸೇರಬಹುದು ಎಂದು ಹೇಳಬಲ್ಲೆ ಎಂದು ತನ್ನ ಸಹಾ ಆಟಗಾರನ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಮಾತನಾಡಿರುವ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಕೋಚ್ ಕೀರನ್ ಪೊಲಾರ್ಡ್, ತಂಡದ ಮ್ಯಾನೇಜ್ಮೆಂಟ್ ರೋಹಿತ್ ಶರ್ಮಾ ಫಾರ್ಮ್ ಬಗ್ಗೆ ಸ್ವಲ್ಪವೂ ಚಿಂತಿಸುತ್ತಿಲ್ಲ. ಅವರು ತುಂಬಾ ದೊಡ್ಡ ಆಟಗಾರ ಮತ್ತು ಯಾವುದೇ ಪಂದ್ಯದಲ್ಲೂ ಮತ್ತೆ ಫಾರ್ಮ್‌ಗೆ ಮರಳಬಹುದು ಎಂದು ಹೇಳಿದ್ದಾರೆ.