ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ 2025ಕ್ಕೆ ಎಲ್ಲಾ ಫ್ರಾಂಚೈಸಿ ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಅಕ್ಟೋಬರ್ 31ರ ಒಳಗೆ ಐಪಿಎಲ್ ಫ್ರಾಂಚೈಸಿ ತಂಡಗಳ ಮಾಲೀಕರು ತಾವು ಉಳಿಸಿಕೊಂಡ ಮತ್ತು ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಬೇಕಾಗಿದೆ.
ಇದರ ಮಧ್ಯೆ ತಂಡಗಳು ತಮ್ಮ ಕೋಚಿಂಗ್ ಸ್ಟಾಫ್ ಅನ್ನು ಬಲಿಷ್ಠಗೊಳಿಸಲು ಮಹತ್ವದ ಹೆಜ್ಜೆಗಳನ್ನು ಇಡುತ್ತಿವೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊಸ ಅಪ್ಡೇಟ್ ಹೊರ ಬಿದ್ದಿದೆ. ಡೆಲ್ಲಿ ಕ್ಯಾಪಿಟಲ್ಸ್ 2025ರ ಐಪಿಎಲ್ ಟೂರ್ನಿಗೂ ಮೊದಲು ತನ್ನ ಹೊಸ ಕೋಚಿಂಗ್ ಸಿಬ್ಬಂದಿಯನ್ನು ನೇಮಿಸಿದೆ.

ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿ ರಿಕ್ಕಿ ಪಾಂಟಿಂಗ್ ಕಾಣಿಸಿಕೊಂಡಿದ್ದರು. 2024ರ ಐಪಿಎಲ್ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಂಜಾಬ್ ಕಿಂಗ್ಸ್ ತಂಡ ಸೇರಿದ್ದಾರೆ. ರಿಕ್ಕಿ ಪಾಂಟಿಂಗ್ ಸ್ಥಾನಕ್ಕೆ ಭಾರತದ ಮಾಜಿ ಕ್ರಿಕೆಟಿಗ ಹೇಮಂಗ್ ಬದಾನಿಯನ್ನು ಹೆಡ್ ಕೋಚ್ ಆಗಿ ನೇಮಕ ಮಾಡಿಕೊಳ್ಳಲಾಗಿದೆ. ಮತ್ತೊರ್ವ ಮಾಜಿ ಟೀಮ್ ಇಂಡಿಯಾ ಬ್ಯಾಟರ್ ವೇಣುಗೋಪಾಲ್ ರಾವ್ ಅವರನ್ನು ಕ್ರಿಕೆಟ್ ನಿರ್ದೇಶಕರನ್ನಾಗಿ ನೇಮಿಸಿಲಾಗಿದೆ. ಈ ಇಬ್ಬರು ದಿಗ್ಗಜರ ಮಾರ್ಗದರ್ಶನದಲ್ಲಿ ನಾಯಕ ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಭಾರತ ತಂಡದ ಮಾಜಿ ಕ್ರಿಕೆಟಿಗ ಹೇಮಂಗ್ ಬದಾನಿ. ಭಾರತವನ್ನು ನಾಲ್ಕು ಟೆಸ್ಟ್ ಹಾಗೂ 40 ಏಕದಿನ ಪಂದ್ಯಗಳಲ್ಲಿ ಬದಾನಿ ಪ್ರತಿನಿಧಿಸಿದ್ದಾರೆ. ಅಲ್ಲದೆ, ವಿವಿಧ ಫ್ರಾಂಚೈಸಿ ಕ್ರಿಕೆಟ್ ಲೀಗ್‌ಗಳಲ್ಲಿ ತರಬೇತಿ ನೀಡಿದ ಅನುಭವ ಹೊಂದಿದ್ದಾರೆ. 2021 ರಿಂದ 2023 ರವರೆಗೆ, ಅವರು ಸನ್‌ರೈಸರ್ಸ್ ಹೈದರಾಬಾದ್‌ನೊಂದಿಗೆ ಫೀಲ್ಡಿಂಗ್ ಕೋಚ್ ಆಗಿ ಮತ್ತು ನಂತರ ಬ್ಯಾಟಿಂಗ್ ಕೋಚ್ ಆಗಿ ಕೆಲಸ ಮಾಡಿದ್ದಾರೆ.
ಹೇಮಂಗ್ ಬದಾನಿ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಜಾಫ್ನಾ ಕಿಂಗ್ಸ್ ತಂಡದ ಕೋಚ್ ಆಗಿ ಸತತ ಎರಡು ಪ್ರಶಸ್ತಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಉದ್ಘಾಟನಾ ಎಸ್‌ಎ20 ಲೀಗ್‌ನಲ್ಲಿ ಚಾಂಪಿಯನ್ ಆದ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದರು. ಇತ್ತೀಚೆಗೆ ಅವರು ಐಎಲ್‌ಟಿ20 ಲೀಗ್‌ನಲ್ಲಿ ಫೈನಲ್ ತಲುಪಿದ ದುಬೈ ಕ್ಯಾಪಿಟಲ್ಸ್‌ನ ಮುಖ್ಯ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಈಗ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಐಪಿಎಲ್ ಚಾಂಪಿಯನ್ ಮಾಡುವ ಕನಸು ಕಂಡಿದ್ದಾರೆ.
ಭಾರತ ಪರ 16 ಏಕದಿನ ಪಂದ್ಯಗಳನ್ನು ಆಡಿರುವ ರಾವ್, 2009ರಲ್ಲಿ ಐಪಿಎಲ್ ಚಾಂಪಿಯ್ ಆದ ಡೆಕ್ಕನ್ ಚಾರ್ಜರ್ಸ್ ತಂಡದ ಬ್ಯಾಟಿಂಗ್ ಭಾಗವಾಗಿದ್ದರು. ಅವರು ಡೆಲ್ಲಿ ಡೇರ್‌ಡೆವಿಲ್ಸ್ (ಈಗ ಡೆಲ್ಲಿ ಕ್ಯಾಪಿಟಲ್ಸ್) ತಂಡದ ಪರ ಮೂರು ಆವೃತ್ತಿಗಳಲ್ಲಿ ಆಡಿದ್ದಾರೆ. ದುಬೈ ಕ್ಯಾಪಿಟಲ್ಸ್‌ನೊಂದಿಗೆ ಸಂಬಂಧ ಹೊಂದಿದ್ದು, ಅವರು ಆರಂಭಿಕ ಆವೃತ್ತಿಗಳಲ್ಲಿ ಮಾರ್ಗದರ್ಶಕರಾಗಿ ಮತ್ತು ನಂತರ ಕ್ರಿಕೆಟ್ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ಅನುಭವಿದೆ.