ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ರಸಕ್ತ ಆವೃತ್ತಿಯ ನಾಲ್ಕನೇ ಪಂದ್ಯ ವಿಶಾಖಪಟ್ಟಣಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಕಾದಾಟ ನಡೆಸಲಿವೆ. ಇಬ್ಬರು ಹೊಸ ನಾಯಕರ ನಡುವಿನ ಕಾದಾಟ ನಿಜಕ್ಕೂ ರೋಚಕತೆ ಹುಟ್ಟಿಸಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಟೂರ್ನಿಯಲ್ಲಿ ಜಯದ ಶುಭಾರಂಭ ಮಾಡುವ ಕನಸನ್ನು ಎರಡೂ ತಂಡಗಳು ಹೊಂದಿವೆ.
ಡೆಲ್ಲಿಗೆ ಇದು ತವರು ಅಂಗಳವಾಗಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಉಭಯ ತಂಡಗಳು ಬಲಿಷ್ಠವಾಗಿವೆ. ಡೆಲ್ಲಿ ತಂಡದ ಪರ ಹಲವು ವರ್ಷಗಳ ಪರ ಆಡಿದ್ದ ರಿಷಭ್ ಪಂತ್ ಈಗ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಡೆಲ್ಲಿ ತಂಡವನ್ನು ಅಕ್ಷರ್ ಪಟೇಲ್ ಮುನ್ನಡೆಸುತ್ತಿದ್ದಾರೆ. ಈ ಎರಡೂ ತಂಡಗಳು ಈಗಾಗಲೇ 5 5 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಈ ವೇಳೆ ಎಲ್‌ಎಸ್‌ಜಿ 3, ಡೆಲ್ಲಿ 2 ಪಂದ್ಯಗಳನ್ನು ಗೆದ್ದಿವೆ.

ವಿಶಾಖಪಟ್ಟಣಂನ ಪಿಚ್ ಕಪ್ಪು ಮಣ್ಣಿನಿಂದ ಕುಡಿದೆ. ಇಲ್ಲಿ ಉತ್ತಮ ಕ್ರಿಕೆಟ್ ನಡೆಯುತ್ತದೆ. ಆರಂಭದಲ್ಲಿ ಮೇಲುಗೈ ಸಾಧಿಸುವ ವೇಗಿಗಳಿಗೆ ನಂತರ, ನೆರವು ಕಡಿಮೆ. ಸ್ಪಿನ್ ಬೌಲರ್‌ಗಳು ಸಹ ಈ ಪಿಚ್‌ನಲ್ಲಿ ಸಹಾಯ ಪಡೆಯಲಿದ್ದಾರೆ. ಈ ಪಿಚ್‌ನಲ್ಲಿ ಟಾಸ್ ಗೆದ್ದವರು ಫೀಲ್ಡಿಂಗ್ ಮಾಡಲು ಮುಂದಾಗುತ್ತಾರೆ. ಇಲ್ಲಿಯವರೆಗೆ ಈ ಮೈದಾನದಲ್ಲಿ 15 ಐಪಿಎಲ್ ಪಂದ್ಯಗಳನ್ನು ಆಡಲಾಗಿದ್ದು, ಅದರಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ತಂಡವು 7 ಬಾರಿ ಗೆದ್ದಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡ 8 ಬಾರಿ ಗೆದ್ದಿದೆ. ಈ ಮೈದಾನದಲ್ಲಿ ಈವರೆಗೆ ಡೆಲ್ಲಿ 7 ಪಂದ್ಯಗಳನ್ನ ಆಡಿದ್ದು, 3 ರಲ್ಲಿ ಗೆದ್ದಿದ್ದು, 4 ರಲ್ಲಿ ಸೋತಿದೆ. ಎಲ್‌ಎಸ್‌ಜಿ ಈ ಅಂಗಳದಲ್ಲಿ ಒಂದೇ ಒಂದು ಪಂದ್ಯವನ್ನು ಆಡಿಲ್ಲ.
ಡೆಲ್ಲಿ ತಂಡದಲ್ಲಿ ದೇಶೀಯ ಹಾಗೂ ವಿದೇಶಿ ಆಟಗಾರರ ಉತ್ತಮ ಸಂಯೋಜನೆ ಕಾಣುತ್ತಿದೆ. ತಂಡಕ್ಕೆ ಫಾಫ್ ಡುಪ್ಲೇಸಿಸ್ ಅವರ ಆಗಮನದಿಂದ ಬ್ಯಾಟಿಂಗ್ ವಿಭಾಗಕ್ಕೆ ಬಲ ಸಿಕ್ಕಿದೆ. ಇನ್ನು ದೇಶೀಯ ಸರ್ಕಿಟ್‌ನಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಕರುಣ್ ನಾಯರ್ ಅವರು ಸಹ ತಂಡಕ್ಕೆ ನೆರವಾಗಬಲ್ಲ ಆಟಗಾರ. ಮಧ್ಯಮ ಕ್ರಮಾಂಕವನ್ನು ಹೊಂದಿದೆ, ಇದರಲ್ಲಿ ರಾಹುಲ್, ಟ್ರಿಸ್ಟಾನ್ ಸ್ಟಬ್ಸ್, ಸಮೀರ್ ರಿಜ್ವಿ ಮತ್ತು ಅಶುತೋಷ್ ಶರ್ಮಾ ಕೂಡ ಸೇರಿದ್ದಾರೆ. ಇನ್ನು ಮಿಚೆಲ್ ಸ್ಟಾರ್ಕ್ ಆಗಮನದಿಂದ ನಿಶ್ಚಿತವಾಗಿ ವೇಗದ ಬೌಲಿಂಗ್ ವಿಭಾಗ ಬಲಗೊಳ್ಳಲಿದೆ. ಇನ್ನು ಸ್ಪಿನ್ ವಿಭಾಗದಲ್ಲಿ ಅಕ್ಷರ್ ಮತ್ತು ಕುಲದೀಪ್ ಯಾದವ್ ಎದುರಾಳಿಗಳನ್ನು ಕಾಡಬಲ್ಲರು.
ಡೆಲ್ಲಿ ಕ್ಯಾಪಿಟಲ್ಸ್: ಜ್ಯಾಕ್ ಫ್ರೇಸರ್ ಮೆಕ್‌ಗುರ್ಕ್, ಫಾಫ್ ಡು ಪ್ಲೆಸಿಸ್, ಅಭಿಷೇಕ್ ಪೊರೆಲ್, ಕೆಎಲ್ ರಾಹುಲ್, ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಶುತೋಷ್ ಶರ್ಮಾ, ಮಿಚೆಲ್ ಸ್ಟಾರ್ಕ್, ಕುಲದೀಪ್ ಯಾದವ್, ಮುಖೇಶ್ ಕುಮಾರ್, ಟಿ. ನಟರಾಜನ್.

ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಬಾರಿ ನವ ಉತ್ಸಾಹದಿಂದ ಕಣಕ್ಕೆ ಇಳಿಯಲಿದೆ. ಈ ಬಾರಿ ರಿಷಭ್ ಪಂತ್ ನಿಶ್ಚಿತವಾಗಿ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ್ ಪೂರನ್ ಸ್ಫೋಟಕ ಬ್ಯಾಟಿಂಗ್ ನಡೆಸಬಲ್ಲರು. ಡೇವಿಡ್ ಮಿಲ್ಲರ್ ಮತ್ತು ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್ ತಂಡಕ್ಕೆ ತಮ್ಮ ಅನುಭವ ಧಾರೆ ಎರೆಯಲಿದ್ದಾರೆ. ಆಯುಷ್ ಬದೋನಿ, ಅಬ್ದುಲ್ ಸಮದ್ ಮತ್ತು ಶಹಬಾಜ್ ಅಹ್ಮದ್ ಮೇಲೂ ಎಲ್ಲರ ಕಣ್ಣುಗಳು ನೆಟ್ಟಿರಲಿವೆ. ಶಮರ್ ಜೋಸೆಫ್, ಆಕಾಶ್ ಸಿಂಗ್ ವೇಗದ ಬೌಲರ್‌ಗಳ ರೂಪದಲ್ಲಿ ಕಾಣಿಸಿಕೊಂಡರೆ, ರವಿ ಬಿಷ್ಣೋಯ್ ಸ್ಪಿನ್ ಜಾದು ನಡೆಸಲಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್: ಮಿಚೆಲ್ ಮಾರ್ಷ್, ಆರ್ಯನ್ ಜುಯಾಲ್, ರಿಷಭ್ ಪಂತ್ (ನಾಯಕ), ನಿಕೋಲಸ್ ಪೂರನ್, ಆಯುಷ್ ಬಡೋನಿ, ಡೇವಿಡ್ ಮಿಲ್ಲರ್, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಆಕಾಶ್ ಸಿಂಗ್, ಶಮರ್ ಜೋಸೆಫ್.