ಸುಮಾರು 60 ದಿನಗಳ ಕಾಲ ಸಂಜೆ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣ ಬಡಿಸಿದ್ದ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಇಂದು ತೆರೆ ಬೀಳಲಿದೆ. 18ನೇ ಆವೃತ್ತಿಯ ಐಪಿಎಲ್ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಕಾದಾಟ ನಡೆಸಲಿವೆ. ಉಭಯ ತಂಡಗಳು ಸತತ 17 ವರ್ಷ ಕಠಿಣ ತಪ್ಪಸ್ಸನ್ನೇ ಮಾಡಿದ್ದು, ಟ್ರೋಫಿಗೆ ಮುತ್ತಿಡುವ ಕನಸು ಕಾಣುತ್ತಿವೆ. ಇಬ್ಬರಲ್ಲಿ ಒಬ್ಬರ 17 ವರ್ಷಗಳ ವನವಾಸಕ್ಕೆ ಇಂದು ತೆರೆ ಬೀಳಲಿದೆ. ಟ್ರೋಫಿಯ ಮೇಲೆ ಯಾವ ತಂಡದ ಹೆಸರು ಮುದ್ರಣವಾಗಲಿದೆ ಎಂಬುದು ಸದ್ಯ ಕುತೂಹಲ ಮೂಡಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಮಣಿಸಿ, ಫೈನಲ್‌ಗೆ ಪ್ರವೇಶಿಸಿತ್ತು. ಇನ್ನು ಪಂಜಾಬ್ ಕಿಂಗ್ಸ್ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ಜೂನ್ 3 ರಂದು ನವ ಇತಿಹಾಸ ನಿರ್ಮಾಣವಾಗಲಿದೆ. ಐಪಿಎಲ್‌ಗೆ ಮತ್ತೊಬ್ಬ ಅಧಿಪತಿ ಸಿಗಲಿದ್ದಾರೆ. ಈ ಬಾರಿಯ ಚಾಂಪಿಯನ್ ಯಾರು ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ.

ಉಭಯ ತಂಡಗಳು ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ್ದು ಫೈನಲ್‌ಗೆ ಪ್ರವೇಶ ಪಡೆದಿವೆ. ಎರಡೂ ತಂಡಗಳು ಸಂಘಟಿತ ಆಟದ ಮೇಲೆ ಹೆಚ್ಚಿನ ಒತ್ತನ್ನು ಇಟ್ಟುಕೊಂಡಿವೆ. ಅಂಕಿ ಅಂಶಗಳು ಏನೇ ಕಥೆಯನ್ನು ಹೇಳಿದ್ರೂ ಸಹ ಇಂದು ಯಾವ ತಂಡದ ದಿನವಾಗಿರಲಿದೆ ಎಂಬುದೇ ದೊಡ್ಡ ಪ್ರಶ್ನೆ. ಫೈನಲ್ ಪಂದ್ಯವನ್ನು ಆರ್‌ಸಿಬಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಆರ್‌ಸಿಬಿ ಲೀಗ್ ಹಂತದಲ್ಲಿ ನೀಡಿರುವ ಪ್ರದರ್ಶನ ಅಭಿಮಾನಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಹೀಗಾಗಿ ಫೈನಲ್ ಪಂದ್ಯ ರೋಚಕತೆ ಹೆಚ್ಚಿಸಿದೆ.
ಐಪಿಎಲ್ ಇತಿಹಾಸದಲ್ಲಿ ಒಮ್ಮೆಯೂ ಟ್ರೋಫಿ ಗೆಲ್ಲದ ತಂಡ ಆರ್‌ಸಿಬಿ. ಈ ಬಾರಿ ಟ್ರೋಫಿ ಗೆಲ್ಲಲು ಆರ್‌ಸಿಬಿ ಸುವರ್ಣ ಅವಕಾಶ. ಅಲ್ಲದೆ 18ನೇ ಆವೃತ್ತಿಯ ಐಪಿಎಲ್ ಗೆದ್ದು, ವಿರಾಟ್ ಕೊಹ್ಲಿ ಅವರ ಆಸೆ ಈಡೇರಿಸುವ ಆಸೆ ಆರ್‌ಸಿಬಿ ತಂಡದ್ದಾಗಿದೆ. ಆರ್‌ಸಿಬಿ ತಂಡದ ಬ್ಯಾಟಿಂಗ್ ಬಲಾಢ್ಯವಾಗಿದೆ. ಇಷ್ಟು ಆವೃತ್ತಿಗಳಲ್ಲಿ ಇದ್ದ ಹಾಗೆ ಒಬ್ಬನ ಮೇಲೆ ಈ ಬಾರಿ ಬ್ಯಾಟಿಂಗ್ ಕ್ರಮಾಂಕದ ಒತ್ತಡ ಇಲ್ಲ. ಸಂಘಟಿತ ಆಟದ ಪ್ರದರ್ಶನ ಆರ್‌ಸಿಬಿ ಅಭಿಮಾನಿಗಳಲ್ಲಿ ನವ ಉತ್ಸಾಹ ತುಂಬಿದೆ.
ನಾಲ್ಕನೇ ಬಾರಿಗೆ ಆರ್‌ಸಿಬಿ ಪರ ಐಪಿಎಲ್ ಫೈನಲ್‌ನಲ್ಲಿ ಕಣಕ್ಕೆ ಇಳಿಯಲಿರುವ ವಿರಾಟ್ ಕೊಹ್ಲಿ ಅವರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಆರಂಭಿಕರಾಗಿ ಉತ್ತಮ ಅಡಿಪಾಯ ಹಾಕಿಕೊಡುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಬಹುದು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಮಯಾಂಕ್ ಅಗರ್ವಾಲ್, ರಜತ್ ಪಾಟಿದಾರ್, ಜಿತೇಶ್ ಶರ್ಮಾ, ರೋಮಾರಿಯೊ ಶೆಫರ್ಡ್, ಲಿಯಾಮ್ ಲಿವಿಂಗ್‌ಸ್ಟೋನ್ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕು. ಅಂದಾಗ ಮಾತ್ರ ಮಾಯಾ ಜಿಂಕೆಯಂತೆ 17 ವರ್ಷ ಕಾಡಿದ ಐಪಿಎಲ್ ಟ್ರೋಫಿಯನ್ನು ಎತ್ತಬಹುದಾಗಿದೆ.
ವಿರಾಟ್ ಕೊಹ್ಲಿ, 614 ರನ್, 8 ಅರ್ಧಶತಕ
ಫಿಲ್ ಸಾಲ್ಟ್, 387 ರನ್, 4 ಅರ್ಧಶತಕ
ರಜತ್ ಪಾಟಿದಾರ್, 286 ರನ್, 2 ಅರ್ಧಶತಕ
ಜಿತೇಶ್ ಶರ್ಮಾ, 237 ರನ್, 1 ಅರ್ಧಶತಕ
ಟೀಮ್ ಡೇವಿಡ್, 187 ರನ್, 1 ಅರ್ಧಶತಕ
ಆರ್‌ಸಿಬಿ ತಂಡದ ಬೌಲಿಂಗ್ ಸಹ ಬಲಾಢ್ಯವಾಗಿದೆ. ಪವರ್ ಪ್ಲೇನಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಯಶ್ ದಯಾಳ್ ತಮ್ಮ ಸ್ವಿಂಗ್ ಮೂಲಕ ಎದುರಾಳಿ ಬ್ಯಾಟರ್‌ಗಳಿಗೆ ಕಾಟ ನೀಡಬೇಕಿದೆ. ಇನ್ನು ಪವರ್ ಪ್ಲೇ ಕೊನೆಯ ಓವರ್‌ಗಳಲ್ಲಿ ಬೌಲ್ ಮಾಡುವ ಜೋಶ್ ಹ್ಯಾಜಲ್‌ವುಡ್ ಆರ್‌ಸಿಬಿ ತಂಡದ ಬ್ರಹ್ಮಾಸ್ತ್ರ. ಇವರು ಪಂದ್ಯದ ಯಾವುದೇ ಸನ್ನಿವೇಶದಲ್ಲಿ ಬಿಗುವಿನ ದಾಳಿ ನಡೆಸಬಲ್ಲರು. ಇನ್ನು ಸ್ಪಿನ್ ಬೌಲರ್ ರೂಪದಲ್ಲಿ ಕಾಣಿಸಿಕೊಳ್ಳುವ ಕೃನಾಲ್ ಪಾಂಡ್ಯ, ಸುಯೇಶ್ ಶರ್ಮಾ ತಮ್ಮ ಪಿರ್ಕಿ ಕಮಾಲ್ ಕೊನೆಯ ಬಾರಿಗೆ ತೋರಿಸಬೇಕಿದೆ. ರೋಮಾರಿಯೋ ಸಹ ಮಧ್ಯದಲ್ಲಿ ಬೌಲಿಂಗ್ ಮಾಡಿ ಎದುರಾಳಿಗಳನ್ನು ಕಾಡಬಲ್ಲರು.
ಜೋಶ್ ಹ್ಯಾಜಲ್‌ವುಡ್, 21 ವಿಕೆಟ್
ಕೃನಾಲ್ ಪಾಂಡ್ಯ, 15 ವಿಕೆಟ್
ಭುವನೇಶ್ವರ್ ಕುಮಾರ್, 15 ವಿಕೆಟ್
ಯಶ್ ದಯಾಳ್, 12 ವಿಕೆಟ್
ಸುಯೇಶ್ ಶರ್ಮಾ, 8 ವಿಕೆಟ್

ಆರ್‌ಸಿಬಿ ಸಂಭಾವ್ಯ ತಂಡ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್/ಟಿಮ್ ಡೇವಿಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹ್ಯಾಜಲ್‌ವುಡ್.
ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಪ್ರಸಕ್ತ ಲೀಗ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿದ್ದಾರೆ. ಇವರು ಮುಂಬೈ ಇಂಡಿಯನ್ಸ್ ವಿರುದ್ಧ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆಡಿದ ಆಟ ಎಲ್ಲರ ಚಿತ್ತ ಕದ್ದಿದೆ. ಆರಂಭಿಕರಾಗಿ ಯುವ ಆಟಗಾರರಾದ ಪ್ರಿಯಾಂಶ್ ಆರ್ಯ, ಪ್ರಭಾಸಿಮ್ರಾನ್ ಸಿಂಗ್ ಪವರ್ ಫುಲ್ ಆಟವನ್ನು ಆಡಬೇಕಿದೆ. ಜೋಶ್ ಇಂಗ್ಲಿಷ್, ಶ್ರೇಯಸ್ ಅಯ್ಯರ್, ನೆಹಾಲ್ ವಧೇರಾ, ಶಶಾಂಕ್ ಸಿಂಗ್ ಎದುರಾಳಿ ಬೌಲರ್‌ಗಳನ್ನು ಕಾಡಬಲ್ಲರು. ಪಂಜಾಬ್ ಬೌಲಿಂಗ್ ವಿಭಾಗವನ್ನು ಅರ್ಷದೀಪ್ ಮುನ್ನಡೆಸಲಿದ್ದಾರೆ. ಇವರಿಗೆ ಕನ್ನಡಿಗ ವಿಜಯ್‌ಕುಮಾರ್ ವೈಶಾಖ್, ಕೈಲ್ ಜೈಮಿಸನ್ ಉತ್ತಮ ಸಾಥ್ ನೀಡಬೇಕಿದೆ. ಇನ್ನು ಸ್ಪಿನ್ ಬೌಲರ್ ಯುಜುವೇಂದ್ರ ಚಹಾಲ್ ಎದುರಾಳಿಗಳನ್ನು ಕಾಡಬಲ್ಲರು.

ಪಂಜಾಬ್ ಸಂಭಾವ್ಯ ತಂಡ: ಪ್ರಿಯಾಂಶ್ ಆರ್ಯ, ಪ್ರಭಾಸಿಮ್ರಾನ್ ಸಿಂಗ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಅಜ್ಮತುಲ್ಲಾ ಒಮರ್ಜಾಯ್, ವಿಜಯ್‌ಕುಮಾರ್ ವೈಶಾಕ್, ಕೈಲ್ ಜೈಮಿಸನ್, ಚಾಹಲ್/ಹರ್‌ಪ್ರೀತ್ ಬ್ರಾರ್.