ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025ರ ಆವೃತ್ತಿಗೆ ಫ್ರಾಂಚೈಸಿಗಳು ಭರ್ಜರಿ ತಯಾರಿ ನಡೆಸುತ್ತಿವೆ. ಈ ಆವೃತ್ತಿಗೂ ಮೊದಲು ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ಪ್ರತಿ ಫ್ರಾಂಚೈಸಿ ತಂಡ ನಾಲ್ವರು ಆಟಗಾರರನ್ನು ಉಳಿಸಿಕೊಂಡು ಉಳಿದವರನ್ನು ರಿಲೀಸ್ ಮಾಡಬೇಕಿದೆ.
ಐಪಿಎಲ್‌ನಲ್ಲಿ ಅತಿಹೆಚ್ಚು ಕ್ರೇಜ್ ಹೊಂದಿರುವ ರಾಯಲ್ ಜಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಯಾವ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಲಿದೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಆರ್ ಸಿಬಿ ಪಾಳಯದಲ್ಲಿ ಸ್ಟಾರ್ ಆಟಗಾರರಿದ್ದು, ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಎಂಬ ಚರ್ಚೆ ನಡೆಯುತ್ತಿದೆ.

ಆರ್‌ಸಿಬಿ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಫ್ರಾಂಚೈಸಿ ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಇನ್ನುಳಿದ ಇಬ್ಬರು ಆಟಗಾರರು ಯಾರು ಎಂಬುದು ಇನ್ನು ತಿಳಿದು ಬಂದಿಲ್ಲ. ಇದರ ಬೆನ್ನಲ್ಲೇ 'ಕೆಜಿಎಫ್ ಶೋ' ಅಂತ್ಯವಾಗುವ ಸಾಧ್ಯತೆಗಳಿವೆ.
ಕನ್ನಡ ಚಿತ್ರರಂಗನ್ನು ವಿಶ್ವಕ್ಕೆ ಪರಿಚಯಿಸಿದ ಸಿನಿಮಾ ಕೆಜಿಎಫ್. ರಾಕಿಂಗ್ ಸ್ಟಾರ್ ಯಶ್ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಈ ಸಿನಿಮಾ ಚಾಪ್ಟರ್-1 ಮತ್ತು ಚಾಪ್ಟರ್-2 ಗಳಲ್ಲಿ ತೆರೆಕಂಡಿತ್ತು. ಭಾರತದ ಬಾಕ್ಸ್ ಆಫೀಸ್‌ನಲ್ಲಿ ಸಾವಿರಾರು ಕೋಟಿ ಗಳಿಸಿ ದಾಖಲೆ ಸೃಷ್ಟಿಸಿತ್ತು. ಈ ಎರಡು ಚಾಪ್ಟರ್‌ಗಳಿಗೆ ಕೆಜಿಎಫ್ ಅಧ್ಯಾಯ ಮುಗಿದಿಲ್ಲ. ಮುಂದಿನ ದಿನಗಳಲ್ಲಿ ಪಾರ್ಟ್ ಥ್ರೀ ಕೂಡ ಬರುವ ನಿರೀಕ್ಷೆಯಿದೆ. ಆದರೆ, ಐಪಿಎಲ್‌ನಲ್ಲಿ ಮಾತ್ರ ಕೆಜಿಎಫ್ ಚಾಪ್ಟರ್ ಮುಗಿಯುವುದು ಪಕ್ಕ ಎನ್ನಲಾಗುತ್ತಿದೆ.
ಐಪಿಎಲ್‌ನಲ್ಲಿ ಕೆಜಿಎಪ್ ಎಂದರೆ, ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಫಾಪ್ ಡು ಪ್ಲೆಸಿಸ್. ಈ ತ್ರಿಮೂರ್ತಿಗಳು ಆರ್‌ಸಿಬಿ ತಂಡದ ಸ್ಟಾರ್ ಆಟಗಾರರಾಗಿದ್ದಾರೆ. ಈ ಮೂವರು ಮೈದಾನದಲ್ಲಿ ಸಿಡಿದೆದ್ದರೆ ಬೌಲರ್‌ಗಳಿಗೆ ನಡುಕ ಹುಟ್ಟಿಸುವುದು ಫಿಕ್ಸ್. ಆದರೆ ಮುಂಬರುವ 2025ರ ಐಪಿಎಲ್ ಆವೃತ್ತಿಯಲ್ಲಿ ಮೂವರು ಬೇರೆ ಬೇರೆಯಾಗಲಿದ್ದಾರೆ. ಕೆಜಿಎಫ್‌ನಲ್ಲಿ ಕೆ ಮಾತ್ರ ಉಳಿಯಲಿದೆ.
ಈ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಗ್ಲೆನ್ ಮ್ಯಾಕ್ಸ್‌ವೆಲ್ ಕಳಪೆ ಪ್ರದರ್ಶನ ನೀಡಿ ವಿಲನ್ ಆಗಿದ್ದರು. ತಂಡಕ್ಕೆ ಆಸರೆಯಾಗಬೇಕಿದ್ದ ಅವರು ರನ್ ಗಳಿಸಲು ಪರದಾಟ ನಡೆಸಿದ್ದರು. ಅವರು ಆಡಿದ 10 ಪಂದ್ಯಗಳಲ್ಲಿ ಕೇವಲ 52 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಹೀಗಾಗಿ ಆರ್‌ಸಿಬಿ ತಂಡದಿಂದ ಗ್ಲೆನ್ ಮ್ಯಾಕ್ಸ್‌ವೆಲ್ ರಿಲೀಸ್ ಆಗುವುದು ಫಿಕ್ಸ್.
2021ರ ಐಪಿಎಲ್‌ಗೂ ಮುನ್ನ ನಡೆದ ಹರಾಜಿನಲ್ಲಿ ಮ್ಯಾಕ್ಸಿ ಅವರಿಗೆ ಆರ್‌ಸಿಬಿ 14.25 ಕೋಟಿ ನೀಡಿ ಖರೀದಿಸಿತ್ತು. ಆರ್‌ಸಿಬಿ ತನ್ನ ಮೊದಲ ಆವೃತ್ತಿಯಲ್ಲಿ ಅಬ್ಬರ ತೋರಿದ ಅವರು 513 ರನ್ ಬಾರಿಸಿದ್ದರು. ನಂತರದ ಎರಡು ಆವೃತ್ತಿಗಳಲ್ಲಿಯೂ ಅಮೋಘ ಆಟವಾಡುವ ಮೂಲಕ ಸೈ ಎನಿಸಿಕೊಂಡಿದ್ದರು.
ಆದರೆ ಈ ಬಾರಿ ಮಾತ್ರ ಫಾರ್ಮ್ ಕಳೆದುಕೊಂಡು ಆರ್‌ಸಿಬಿ ಕಪ್ ಗೆಲ್ಲುವ ಕನಸಿಗೆ ಅಡ್ಡಿಯಾಗಿದ್ದರು. ಈಗ ಮ್ಯಾಕ್ಸ್‌ವೆಲ್ ಅವರ ಸ್ಥಾನಕ್ಕೆ ಇಂಗ್ಲೆಂಡ್ ಆಲ್‌ರೌಂಡರ್ ವಿಲ್ ಜ್ಯಾಕ್ ಅವರನ್ನು ಉಳಿಸಿಕೊಳ್ಳುವುದು ಆರ್‌ಸಿಬಿ ಮಾಸ್ಟರ್ ಪ್ಲ್ಯಾನ್ ಆಗಿದೆ.
ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ತಂಡದಿಂದ ರಿಲೀಸ್ ಆಗುವ ಮೊದಲ ಆಟಗಾರನಾಗಿದ್ದಾರೆ. 2022 ಆವೃತ್ತಿಯಲ್ಲಿ ಆರ್‌ಸಿಬಿ ಬಂದ ಅವರು ಕಳೆದ ಮೂರು ವರ್ಷಗಳು ತಂಡದ ನಾಯಕನ ಜವಾಬ್ದಾರಿ ಹೊತ್ತಿದ್ದರು. ಆರಂಭಿಕರಾಗಿ ಉತ್ತಮ ರನ್ ಕಲೆ ಹಾಕುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು.
ಈಗ ಫಾಪ್ ಅವರಿಗೆ 39 ವರ್ಷ ವಯಸ್ಸಾಗಿದ್ದು, ಮುಂದಿನ ಋತುವಿನಲ್ಲಿ ಅವರನ್ನು ಆಡಿಸುವುದು ಅನುಮಾನ ಎನ್ನಲಾಗುತ್ತಿದೆ. ಫಾಪ್ ರಿಲೀಸ್ ಮಾಡಿ ಅವರ ಸ್ಥಾನಕ್ಕೆ ಯುವ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ ಕ್ಯಾಮೆರಾನ್ ಗ್ರೀನ್ ಅವರನ್ನು ಉಳಿಸಿಕೊಳ್ಳಲು ಸಿದ್ಧತೆ ನಡೆದಿದೆ.