IPL 2025 SRH vs RR: ಇಶಾನ್ ಕಿಶನ್ ಶತಕ: ದಾಖಲೆ ಬರೆದ ಸನ್‌ರೈಸರ್ಸ್ ಹೈದರಾಬಾದ್
ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಐಪಿಎಲ್ ನಲ್ಲಿ ಇಶಾನ್ ಕಿಶನ್ ತಮ್ಮನ್ನು ಖರೀದಿಸಿ, ಫ್ರಾಂಚೈಸಿ ಮುಖದಲ್ಲಿ ಮಂದಹಾಸ ಮೂಡಿಸಿದೆ. 18ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಸನ್ ತಂಡ ಅಮೋಘ ಬ್ಯಾಟಿಂಗ್ ನಡೆಸಿ ಅಬ್ಬರಿಸಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಎರಡನೇ ಗರಿಷ್ಠ ರನ್ ದಾಖಲಿಸಿದ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ.
ಮುಂಬೈ ಇಂಡಿಯನ್ಸ್ ತಂಡದಿಂದ ಕೈ ಬಿಡಲಾಗಿದ್ದ ಇಶಾನ್ ಕಿಶನ್ ಅವರನ್ನು 11.25 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತು. ಇವರು ತಮ್ಮ ಮೇಲೆ ಹೈದರಾಬಾದ್ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದರು. ಇವರು 47 ಎಸೆತಗಳಲ್ಲಿ 11 ಬೌಂಡರಿ, 6 ಸಿಕ್ಸರ್ ಸಹಾಯದಿಂದ ಅಜೇಯ 106 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 286 ರನ್‌ಗಳ ದಾಖಲೆ ಮೊತ್ತವನ್ನು ಸೇರಿಸಿತು. ಇದು ಐಪಿಎಲ್‌ನಲ್ಲಿ ದಾಖಲಾದ ಎರಡನೇ ಅತಿ ಗರಿಷ್ಠ ರನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಐಪಿಎಲ್‌ನಲ್ಲಿ ಗರಿಷ್ಠ ರನ್ ಕಲೆ ಹಾಕಿದ ಕೀರ್ತಿ ಸನ್ ತಂಡದ್ದಾಗಿದೆ. ಹೈದರಾಬಾದ್ ತಂಡ ಕಳೆದ ಬಾರಿಯ ಐಪಿಎಲ್‌ನಲ್ಲಿ ಬೆಂಗಳೂರು ವಿರುದ್ಧ 287 ರನ್‌ಗಳ ದಾಖಲೆಯ ರನ್ ಕಲೆ ಹಾಕಿತ್ತು.
ಐಪಿಎಲ್‌ನಲ್ಲಿ ದಾಖಲಾದ ಗರಿಷ್ಟ ರನ್
| ತಂಡ | ರನ್ | ಎದುದಾಳಿ |
|---|---|---|
| ಎಸ್‌ಆರ್‌ಎಚ್ | 287/3 | ಆರ್‌ಸಿಬಿ |
| ಎಸ್‌ಆರ್‌ಎಚ್ | 286/6 | ಆರ್‌ಆರ್ |
| ಎಸ್‌ಆರ್‌ಎಚ್ | 277/3 | ಮುಂಬೈ |
| ಕೆಕೆಆರ್ | 272/7 | ಡಿಸಿ |
| ಎಸ್‌ಆರ್‌ಎಚ್ | 266/7 | ಡಿಸಿ |
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ಅಬ್ಬರದ ಆರಂಭವನ್ನು ಮಾಡಿತು. ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ತಂಡಕ್ಕೆ ಅಬ್ಬರದ ಓಪನಿಂಗ್ ನೀಡಿದರು. ಈ ಜೋಡಿಯನ್ನು ಕಟ್ಟಿ ಹಾಕಲು ರಾಜಸ್ಥಾನ ಆರಂಭದಲ್ಲಿ ಹಿಂದೆ ಬಿದ್ದಿತು. ಈ ಜೋಡಿ 3.1 ಓವರ್‌ಗಳಲ್ಲಿ 45 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಅಭಿಷೇಕ್ ಶರ್ಮಾ 11 ಎಸೆತಗಳಲ್ಲಿ 5 ಬೌಂಡರಿ ಸೇರಿದಂತೆ 24 ರನ್ ಸಿಡಿಸಿ ಔಟ್ ಆದರು.
ಟ್ರಾವಿಸ್ ಹೆಡ್ ಅರ್ಧಶತಕ
ಎರಡನೇ ವಿಕೆಟ್‌ಗೆ ಆರಂಭಿಕ ಟ್ರಾವಿಸ್ ಹೆಡ್ ಅವರನ್ನು ಸೇರಿಸಿಕೊಂಡ ಇಶಾನ್ ಕಿಶನ್ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಮಿಡ್ಲ್ ಓವರ್‌ಗಳಲ್ಲಿ ವಿಕೆಟ್ ಬೀಳದಂತೆ ಕಾಯ್ದುಕೊಂಡ ಜೋಡಿ ಆರ್ಭಟಿಸಿತು. ಈ ಜೋಡಿ 39 ಎಸೆತಗಳಲ್ಲಿ 85 ರನ್ ಸಿಡಿಸಿ ಅಬ್ಬರಿಸಿತು. ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್ ತಮ್ಮ ನೈಜ್ಯ ಆಟವನ್ನು ಆಡಿದರು. ಇವರು 9 ಬೌಂಡರಿ, 3 ಸಿಕ್ಸರ್ ಸಹಾಯದಿಂದ 67 ರನ್ ಬಾರಿಸಿ, ತುಷಾರ್ ದೇಶಪಾಂಡೆ ತೋಡಿದ ಖೆಡ್ಡಾಗೆ ಬಲಿಯಾದರು.
ಮೂರನೇ ವಿಕೆಟ್‌ಗೆ ಇಶಾನ್ ಕಿಶನ್ ಜೊತೆ ಸೇರಿಕೊಂಡ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಟಾಪ್ ಆರ್ಡರ್ ಬ್ಯಾಟರ್‌ಗಳು ಹಾಕಿಕೊಟ್ಟ ರನ್ ಸರಾಸರಿಯಲ್ಲಿ ರನ್ ಕಲೆ ಹಾಕುತ್ತಾ ಸಾಗಿದರು. ಈ ಜೋಡಿ 29 ಎಸೆತಗಳಲ್ಲಿ 72 ರನ್ ಸೇರಿಸಿ ಆರ್ಭಟಿಸಿತು. ನಿತೀಶ್ ಕುಮಾರ್ ರೆಡ್ಡಿ 15 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 30 ರನ್ ಬಾರಿಸಿದರು.
ನಾಲ್ಕನೇ ವಿಕೆಟ್‌ಗೂ ಇಶಾನ್ ಕಿಶನ್ ಹಾಗೂ ಹ್ಯಾನ್ರಿಕ್ ಕ್ಲಾಸೆನ್ ಜೋಡಿ 25 ಎಸೆತಗಳಲ್ಲಿ 56 ರನ್ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿತು. ಇದೇ ವೇಳೆ ಕ್ಲಾಸೇನ್ 34 ರನ್ ಬಾರಿಸಿ ಔಟ್ ಆದರು.
ವಿಶ್ವ ದಾಖಲೆ
ಸನ್‌ರೈಸರ್ಸ್ ಹೈದರಾಬಾದ್ ತಂಡವು ಈಗ ವಿಶ್ವದಾದ್ಯಂತ ಟಿ20 ಪಂದ್ಯದಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ಹಿರಿಮೆಯನ್ನು ತನ್ನದಾಗಿಸಿಕೊಂಡಿದೆ. ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್ ಒಟ್ಟು 34 ಬೌಂಡರಿಗಳನ್ನು ಬಾರಿಸಿ ದಾಖಲೆ ಸೃಷ್ಟಿಸಿದೆ. ಇದಕ್ಕೂ ಮೊದಲು 2023 ರಲ್ಲಿ ಮಿಡ್ಲ್‌ಸೆಕ್ಸ್ ಮತ್ತು ಸರ್ರೆ ನಡುವಿನ ಟಿ20 ಪಂದ್ಯದಲ್ಲಿ 33 ಬೌಂಡರಿ ದಾಖಲಾಗಿತ್ತು. ಈಗ ಸನ್ ತಂಡ ಈ ದಾಖಲೆಯನ್ನು ಅಳಿಸಿ ಹಾಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications