ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿ ನಂತರ, ಈಗ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಕ್ರೇಜ್ ಭಾರತದಲ್ಲಿ ಹೆಚ್ಚಾಗುತ್ತಿದೆ. ಐಪಿಎಲ್ 2025ರ ಟೂರ್ನಿಗೆ 9 ತಂಡಗಳ ನಾಯಕರನ್ನು ಘೋಷಿಸಲಾಗಿದೆ. ಆದರೆ ಇದೀಗ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ನಾಯಕತ್ವಕ್ಕಾಗಿ ಪ್ರಬಲ ಪೈಪೋಟಿ ನಡೆಯುತ್ತಿದೆ. ಶೀಘ್ರದಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನನ್ನು ಘೋಷಿಸಲಾಗುವುದು. ಐಪಿಎಲ್ 2025ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವಕ್ಕಾಗಿ ಆಲ್‌ರೌಂಡರ್ ಅಕ್ಸರ್ ಪಟೇಲ್ ಮತ್ತು ಅನುಭವಿ ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ಇಬ್ಬರೂ ಪ್ರಬಲ ಸ್ಪರ್ಧಿಗಳಾಗಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವದ ರೇಸ್‌ನಲ್ಲಿ ಅಕ್ಷರ್ ಪಟೇಲ್ ಮುಂದಿರುವಂತೆ ಕಾಣುತ್ತಿದೆ. ಚಾಂಪಿಯನ್ಸ್ ಟ್ರೋಫಿ ಮುಗಿಯುವವರೆಗೆ ಕಾಯುತ್ತಿದ್ದ ಡೆಲ್ಲಿ ಫ್ರಾಂಚೈಸಿ ಮುಂದಿನ ಕೆಲವು ದಿನಗಳಲ್ಲಿ ತಮ್ಮ ಹೊಸ ನಾಯಕನ ಹೆಸರನ್ನು ಘೋಷಿಸುವ ನಿರೀಕ್ಷೆಯಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡವು ತನ್ನ ಮೊದಲ ಎರಡು ಪಂದ್ಯಗಳಿಗಾಗಿ ವಿಶಾಖಪಟ್ಟಣಕ್ಕೆ ತೆರಳುವ ಮೊದಲು ದೆಹಲಿಯಲ್ಲಿ ಒಂದು ಸಣ್ಣ ತರಬೇತಿ ಮತ್ತು ಅಭ್ಯಾಸ ಶಿಬಿರವನ್ನು ನಡೆಸಲಿದೆ. ಮಾರ್ಚ್ 17 ಮತ್ತು 18 ರಂದು ವಿಶಾಖಪಟ್ಟಣದಲ್ಲಿ ಅಕ್ಸರ್ ಪಟೇಲ್, ಕೆಎಲ್ ರಾಹುಲ್, ಕುಲದೀಪ್ ಯಾದವ್, ದಕ್ಷಿಣ ಆಫ್ರಿಕಾದ ಟ್ರಿಸ್ಟಾನ್ ಸ್ಟಬ್ಸ್, ಆಸ್ಟ್ರೇಲಿಯಾದ ಆಟಗಾರರಾದ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಮತ್ತು ಮಿಚೆಲ್ ಸ್ಟಾರ್ಕ್ ಸೇರಿಕೊಳ್ಳಲಿದ್ದಾರೆ.
ಪತ್ನಿ ಅತಿಯಾ ಶೆಟ್ಟಿ ಗರ್ಭಿಣಿಯಾಗಿರುವುದರಿಂದ ಕೆಎಲ್ ರಾಹುಲ್ ಒಂದು ಅಥವಾ ಎರಡು ಐಪಿಎಲ್ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಇದು ಅವರ ಮೊದಲ ಮಗುವಿನ ಸಂಭವನೀಯ ಜನನ ದಿನಾಂಕವನ್ನು ಅವಲಂಬಿಸಿರುತ್ತದೆ. ಡೆಲ್ಲಿ ಕ್ಯಾಪಿಟಲ್ಸ್ ಜೊತೆಗಿನ ಏಳನೇ ಸೀಸನ್‌ನಲ್ಲಿರುವ ಅಕ್ಷರ್ ಪಟೇಲ್ ಅವರು ರಾಹುಲ್‌ಗಿಂತ ತಂಡವನ್ನು ಮುನ್ನಡೆಸುವ ಸಾಧ್ಯತೆ ಹೆಚ್ಚು. ರಾಹುಲ್ ಮೊದಲ ಬಾರಿಗೆ ಡೆಲ್ಲಿ ತಂಡವನ್ನು ಸೇರಿದಿದ್ದಾರೆ. ಆದರೆ, ರಾಹುಲ್ ಕಳೆದ ಕೆಲವು ವರ್ಷಗಳಿಂದ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳನ್ನು ಮುನ್ನಡೆಸಿದ ಅನುಭವವನ್ನು ಹೊಂದಿದೆ.
ಅಕ್ಸರ್ ಪಟೇಲ್ 150 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಅವರು ಸುಮಾರು 131 ಸ್ಟ್ರೈಕ್ ರೇಟ್‌ನಲ್ಲಿ 1653 ರನ್ ಗಳಿಸಿದ್ದು, 7.28 ಎಕಾನಮಿ ರೇಟ್‌ನಲ್ಲಿ 123 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಅದ್ಬುತ ಅನುಭವದಿಂದ ಅವರಿಗೆ ಡೆಲ್ಲಿ ತಂಡದ ನಾಯಕತ್ವ ಸಿಗಬಹುದು. ಕೆಎಲ್ ರಾಹುಲ್ ನಾಯಕತ್ವದಲ್ಲಿ ಲಕ್ನೋ ತಂಡ ಪ್ಲೇಆಫ್ ತಲುಪಿತು. ಆದರೆ ಐಪಿಎಲ್ ಸಮಯದಲ್ಲಿ ಅವರು ಗಾಯದ ಸಮಸ್ಯೆಗಳನ್ನು ಎದುರಿಸಿದರು. ಇದು ರಾಹುಲ್ ಅವರಿಗೆ ಸ್ವಲ್ಪ ಹಿನ್ನಡೆ ತರಿಸಬಹುದು ಎಂದು ವರದಿಗಳು ಹೇಳುತ್ತಿವೆ.