ಐಪಿಎಲ್ 2025 ರಲ್ಲಿ ಗುರವಾರ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ಹೀನಾಯವಾಗಿ ಸೋಲಿಸಿತು. ಡೆಲ್ಲಿ ಪರ ಏಕಾಂಗಿಯಾಗಿ ಆಡುವ ಮೂಲಕ ಕೆಎಲ್ ರಾಹುಲ್ ಗೆಲುವಿನ ರೂವಾರಿಯಾದರು. ಡೆಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಇನ್ನಿಂಗ್ಸ್ ಜವಾಬ್ದಾರಿ ವಹಿಸಿಕೊಂಡ ಕೆಎಲ್ ರಾಹಲ್ ಸ್ಪೋಟಕ ಬ್ಯಾಟಿಂಗ್ ಮಾಡಿ ತಂಡವನ್ನಿ ಗೆಲುವಿನತ್ತ ಕೊಂಡೊಯ್ದರು. ಡೆಲ್ಲಿ ತಂಡಕ್ಕೆ ಈ ರೀತಿ ಗೆಲುವು ತಂದುಕೊಟ್ಟ ನಂತರ ಕೆಎಲ್ ರಾಹುಲ್ ಆಚರಿಸಿದ ರೀತಿ ಬಹಳಷ್ಟು ಚರ್ಚೆಯಾಗುತ್ತಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆರ್‍ಸಿಬಿ ತಂಡ ನಿಗದಿಯ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕೆ ಪ್ರತಿಯಾಗಿ ಡೆಲ್ಲಿ ಕ್ಯಾಪಿಟಲ್ಸ್ 17.5 ಓವರ್‍ಗಳಲ್ಲಿ ಕೇವಲ 4 ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ತಲುಪಿತು. ಈ ಗೆಲುವಿನಲ್ಲಿ ಕೆಎಲ್ ರಾಹುಲ್ ಅವರ ಇನ್ನಿಂಗ್ಸ್ ಮರೆಯುವಂತಿಲ್ಲ.

ಚೇಸಿಂಗ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ಒಂದು ಹಂತದಲ್ಲಿ 10 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತು. ಫಾಫ್ ಡು ಪ್ಲೆಸಿಸ್ ಮತ್ತು ಜೇಕ್ ಫ್ರೇಸರ್ ಮೆಕ್‌ಗರ್ಕ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಇದಾದ ಬಳಿಕವೂ ಡೆಲ್ಲಿ ಕೇವಲ 30 ರನ್‌ಗಳಿಗೆ 32 ವಿಕೆಟ್ ಕಳೆದುಕೊಂಡಿತು. ಸಂಕಷ್ಟಕ್ಕೆ ಸಿಲುಕಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೈಯಿಂದ ಪಂದ್ಯ ಜಾರಿ ಹೋಗುವಂತಿತ್ತು. ಆದರೆ ಕೆಎಲ್ ರಾಹುಲ್ ಕೊನೆವರೆಗೂ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಕೆಎಲ್ ರಾಹುಲ್ ಕೇವಲ 53 ಎಸೆತಗಳಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್ ನೆರವಿನಿಂದ ಅಜೇಯ 93 ರನ್ ಬಾರಿಸಿದರು. ಇದಾದ ನಂತರ ಅವರ ಸಂಭ್ರಮಾಚರಣೆ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಎಲ್ಲರ ಗಮನ ಸೆಳೆಯಿತು. ನಾನು ಈ ನೆಲದವನು ಮತ್ತು ಈ ಮೈದಾನದ ಬಗ್ಗೆ ನನಗೆ ಹೆಚ್ಚು ತಿಳಿದಿದೆ ಎಂದು ರಾಹುಲ್ ಹೇಳುತ್ತಿರುವಂತರ ತೋರುತ್ತಿತ್ತು.
ಪಂದ್ಯದ ಬಳಿಕ ಮಾತನಾಡಿರುವ ಕೆಎಲ್ ರಾಹುಲ್ ತಮ್ಮ ಸಂಭ್ರಮಾಚರಣೆ ಬಗ್ಗೆ ಹೇಳಿದ್ದಾರೆ. ಈ ವಿಡಿಯೋ ಅನ್ನು ಡೆಲ್ಲಿ ಕ್ಯಾಪಿಟಲ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಮೊದಲ ವಿಡಿಯೋದಲ್ಲಿ ""ಯೇ ಮೇರಾ ಗ್ರೌಂಡ್ ಹೈ (ಇದು ನನ್ನ ಮೈದಾನ)' ಎಂದು ರಾಹುಲ್ ಹೇಳಿದ್ದಾರೆ. ಇದಾದ ನಂತರ ಮತ್ತೊಂದು ವಿಡಿಯೋದಲ್ಲಿ ಕೆ.ಎಲ್ ರಾಹುಲ್ ಸಂಭ್ರಮಾಚರಣೆಗೆ ರಿಷಬ್ ಶೆಟ್ಟಿಯ ಕ್ಲಾಸಿಕ್ ಚಿತ್ರ "ಕಾಂತಾರ" ಸಿನಿಮಾ ಕಾರಣ ಎನ್ನುವ ವಿಚಾರವನ್ನು ಹೇಳಿದ್ದಾರೆ.
'ಇದು ನನಗೆ ವಿಶೇಷ ಸ್ಥಳ. ಈ ಆಚರಣೆ ನನ್ನ ನೆಚ್ಚಿನ ಚಿತ್ರಗಳಲ್ಲಿ ಒಂದಾದ ಕಾಂತಾರದಿಂದ ಬಂದಿದೆ. ಹೌದು, ಈ ಮೈದಾನ, ಈ ಮನೆ, ಈ ಟರ್ಫ್ ನಾನು ಬೆಳೆದ ಸ್ಥಳ ಮತ್ತು ಇದು ನನ್ನದು ಎಂಬುದನ್ನು ನೆನಪಿಸುತ್ತದೆ' ಎಂದು ಕೆಎಲ್ ರಾಹುಲ್ ತಮ್ಮ ಸಂಭ್ರಮಾಚರಣೆಯ ಹಿಂದಿನ ಕಥೆಯನ್ನು ತಿಳಿಸಿದ್ದಾರೆ.