ಐಪಿಎಲ್ 2025 ರ 24 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್‌ಗಳಿಂದ ಸೋಲಿಸಿತು. ಗುರುವಾರ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಎಲ್ ರಾಹುಲ್ ಭರ್ಜರಿ ಇನ್ನಿಂಗ್ಸ್ ಆಡಿದರು. ತಾನು ಆಡಿದ ಮೈದಾನದಲ್ಲಿ ಕೆಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಏಕಾಂಗಿ ನಿಂತು ಡೆಲ್ಲಿ ತಂಡಕ್ಕೆ ಪಂದ್ಯವನ್ನು ಗೆಲ್ಲಿಸಿ ಕೊಟ್ಟರು.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ನಾಯಕನ ಭರವಸೆ ಉಳಿಸಿಕೊಂಡ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿ ಆರ್‌ಸಿಬಿ ಕಟ್ಟಿ ಹಾಕಿದರು. ಪರಿಣಾಮ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್ 163 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡ 17.5 ಓವರ್‍ಗಳಲ್ಲಿ ಕೇವಲ 4 ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ತಲುಪಿತು. ಈ ಮೂಲಕ ಐಪಿಎಲ್ 2025 ರಲ್ಲಿ ಸತತ ನಾಲ್ಕನೇ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಅಬ್ಬರವನ್ನು ಮರೆಯುವಂತಿಲ್ಲ.

ಆರ್‌ಸಿಬಿ ನೀಡಿದ 164 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡವು ಸತತ ಮೂರು ಆರಂಭಿಕ ಹೊಡೆತಗಳನ್ನು ಎದುರಿಸಿತು. ಅನುಭವಿ ಬ್ಯಾಟರ್ ಫಾಫ್ ಡು ಪ್ಲೆಸಿಸ್ ಎರಡನೇ ಓವರ್‌ನ ಕೊನೆಯ ಎಸೆತದಲ್ಲಿ ಔಟಾದರು. ಡು ಪ್ಲೆಸಿಸ್ 7 ಎಸೆತಗಳಲ್ಲಿ 2 ರನ್ ಗಳಿಸಿದಾಗ ಯಶ್ ದಯಾಳ್ ಔಟ್ ಮಾಡಿದರು. ನಂತರ, ಜೇಕ್ ಫ್ರೇಸರ್ ಮೆಕ್‌ಗರ್ಕ್ ಮುಂದಿನ ಎಸೆತದಲ್ಲೇ ಔಟಾದರು. ಭುವನೇಶ್ವರ್ ಕುಮಾರ್ ಎಸೆದ ಮೂರನೇ ಓವರ್‌ನ ಮೊದಲ ಎಸೆತದಲ್ಲಿ ಜಿತೇಶ್ ಶರ್ಮಾ ಅವರಿಗೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಮರಳಿದರು.
ಮೆಕ್‌ಗರ್ಕ್ ಅವರು 6 ಎಸೆತಗಳಲ್ಲಿ ಕೇವಲ 7 ರನ್ ಗಳಿಸಲು ಸಾಧ್ಯವಾಯಿತು. ಅಭಿಷೇಕ್ ಪೊರೆಲ್ ಕೂಡ 6 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿ ಐದನೇ ಓವರ್‌ನಲ್ಲಿ ಭುವನೇಶ್ವರ್ ಎಸೆತದಲ್ಲಿ ಜಿತೇಶ್‌ಗೆ ಕ್ಯಾಚ್ ನೀಡಿದರು.ಈ ಹಂತದಲ್ಲಿ ಕೆಎಲ್ ರಾಹುಲ್ ಜೊತೆಗೂಡಿ ನಾಯಕ ಅಕ್ಸರ್ ಪಟೇಲ್ ಇನ್ನಿಂಗ್ಸ್ ನಿಭಾಯಿಸಿ ತಂಡವನ್ನು 8.4 ಓವರ್ ಗಳಲ್ಲಿ 58 ರನ್ ಗಳಿಗೆ ಕೊಂಡೊಯ್ದರು.
ಸುಯಾಶ್ ಶರ್ಮಾ ಬೌಲಿಂಗ್‌ನಲ್ಲಿ ಅಕ್ಸರ್ 11 ಎಸೆತಗಳಲ್ಲಿ 15 ರನ್ ಗಳಿಸಿ ಟಿಮ್ ಡೇವಿಡ್‌ಗೆ ಕ್ಯಾಚ್ ನೀಡಿದರು. ಇಂತಹ ಸಂದರ್ಭದಲ್ಲಿ ಡೆಲ್ಲಿ ತಂಡಕ್ಕೆ ಕೆಎಲ್ ರಾಹುಲ್ ಆಧಾರ ಸ್ತಂಭವಾಗಿ ನಿಂತರು. ಆರ್‍ಸಿಬಿ ಪಂದ್ಯದ ಮೇಲೆ ಹಿಡಿತ ಸಾಧಿಸಿದಾಗ, ಕೆಎಲ್ ರಾಹುಲ್ ಒಂದು ತುದಿಯಲ್ಲಿ ನಿಂತು ಅಂತಿಮವಾಗಿ ತಂಡವನ್ನು ಗೆಲುವಿನತ್ತ ಕೊಂಡೆಯ್ದರು.
ತವರಿನಲ್ಲಿ ಅಂಗಳದಲ್ಲಿ ಕ್ಲಾಸಿಕ್ ಬ್ಯಾಟಿಂಗ್ ಮಾಡಿದ ರಾಹುಲ್ ಆರ್‍ಸಿಬಿ ಬೌಲರ್‍ಗಳನ್ನು ಕಾಡಿದರು. ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಆರ್‍ಸಿಬಿ ಫ್ರಾಂಚೈಸಿ ತನ್ನನ್ನು ಕಡೆಗಣಿಸಿದಕ್ಕಾಗಿ ರಾಹುಲ್ ಅಮೋಘ ಇನ್ನಿಂಗ್ಸ್ ಆಡುವ ಮೂಲಕ ತಕ್ಕ ಉತ್ತರ ನೀಡಿದರು. ಅವರು ಕೇವಲ 53 ಎಸೆತಗಳಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್ ನೆರವಿನಿಂದ ಅಜೇಯ 93 ರನ್ ಬಾರಿಸಿದರು. ಈ ಮೂಲಕ ಡೆಲ್ಲಿ ತಂಡದ ಗೆಲುವಿನ ಹೀರೋ ಎನಿಸಿಕೊಂಡರು.
ಡೆಲ್ಲಿ ತಂಡಕ್ಕೆ ಗೆಲುವ ತಂದು ಕೊಟ್ಟ ನಂತರ ಕೆಎಲ್ ರಾಹುಲ್ ಸಂಭ್ರಮಾಚರಣೆ ಎಲ್ಲರ ಗಮನ ಸೆಳೆಯಿತು. ಸಿಕ್ಸರ್ ಬಾರಿಸುವ ಮೂಲಕ ಪಂದ್ಯವನ್ನು ಫಿನಿಶ್ ಮಾಡಿದ ಕೆಎಲ್ ರಾಹುಲ್ ವೃತ್ತ ಬರೆದು ಇಲ್ಲಿರುವುದೆಲ್ಲಾ ನಂದೆ ಎನ್ನುವ ಅಣುಕು ಪ್ರದರ್ಶನ ಮಾಡಿದರು. ಅಲ್ಲದೆ, ಇದು ನನ್ನ ಮನೆ, ನನ್ನ ತವರು ಮೈದಾನ. ಈ ಪಿಚ್ ಬಗ್ಗೆ ಎಲ್ಲರಿಗಿಂತ ನಂಗೆ ಚೆನ್ನಾಗಿ ಗೊತ್ತಿದೆ. ನಾನು ಇಲ್ಲೇ ಆಡಿ ಬೆಳೆದೋನು ಎಂಬ ಅರ್ಥದಲ್ಲಿ ಆಕ್ಷನ್ ಮಾಡಿ ತೋರಿಸಿದರು.