ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ತಂಡ ಒಟ್ಟು ಐದು ಬಾರಿ ಚಾಂಂಪಿಯನ್ ಆಗಿದೆ. 2020ರ ನಂತರ ನಾಲ್ಕು ವರ್ಷಗಳಿಂದ ಮುಂಬೈ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಇದಕ್ಕೆ ಹಲವು ಕಾರಣಗಳಿವೆ. ಆದರೆ ಕಳೆದ ವರ್ಷ ಮುಂಬೈ ಪಾಳಯದಿಂದ ಸಂಘಟಿತ ಪ್ರದರ್ಶನ ಕಂಡು ಬಂದಿರಲಿಲ್ಲ. ಹೀಗಾಗಿ ಮುಂಬೈ ಪ್ಲೇ ಆಪ್ ತಲುಪಲು ಸಾಧ್ಯವಾಗಿರಲಿಲ್ಲ.
ಇದೀಗ ಮುಂಬರುವ ಐಪಿಎಲ್ 2025ರಲ್ಲಿ ಬಲಿಷ್ಠ ತಂಡವನ್ನು ಕಟ್ಟಲು ಮುಂಬೈ ಇಂಡಿಯನ್ಸ್ ಹಲವು ಮಹತ್ವದ ಹೆಜ್ಜೆಯನ್ನು ಇಡುತ್ತಿದೆ. ಮುಂಬೈ ಇಂಡಿಯನ್ಸ್ ತನ್ನ ಬೌಲಿಂಗ್ ಕೋಚ್ ಆಗಿ ಪರಾಸ್ ಮಾಂಬ್ರೆ ಅವರನ್ನು ನೇಮಕ ಮಾಡಿದೆ. ಹೆಡ್ ಕೋಚ್ ಮಹೇಲಾ ಜಯವರ್ಧನೆ ಅವರ ನೇತೃತ್ವದ ಕೋಚಿಂಗ್ ಸ್ಟಾಫ್ ಭಾಗವಾಗಿ ಪ್ರಸ್ತುತ ಬೌಲಿಂಗ್ ಕೋಚ್ ಲಸಿತ್ ಮಾಲಿಂಗ ಅವರೊಂದಿಗೆ ಮಾಂಬ್ರೆ ಕೆಲಸ ಮಾಡಲಿದ್ದಾರೆ. ಈ ಇಬ್ಬರು ಚಾಂಪಿಯನ್ ಬೌಲಿಂಗ್ ಕೋಚ್ ಮೇಲೆ ಭಾರೀ ನಿರೀಕ್ಷೆಗಳಿವೆ.

ಮುಂಬೈ ಫ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಪರಾಸ್ ಮಾಂಬ್ರೆ ಅವರು ಬೌಲಿಂಗ್ ಕೋಚ್ ಆಗಿ ನೇಮಕಕೊಂಡಿರುವುದನ್ನು ಖಚಿತಪಡಿಸಿದೆ. '2021ರ ನವೆಂಬರ್ ತಿಂಗಳಿಂದ 2024ರ ಜೂನ್ ವರಗೆ ಟಿ20 ವಿಶ್ವಕಪ್ ಗೆಲ್ಲುವವರೆಗೆ ಭಾರತ ತಂಡದ ಬೌಲಿಂಗ್ ಕೋಚ್ ಆಗಿದ್ದ ಮಾಂಬ್ರೆ, ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಅವರ ಅಡಿಯಲ್ಲಿ ಕೋಚಿಂಗ್ ತಂಡದ ಭಾಗವಾಗಿ ತಂಡವನ್ನು ಸೇರಿಕೊಂಡಿದ್ದಾರೆ. ಪ್ರಸ್ತುತ ಬೌಲಿಂಗ್ ಕೋಚ್ ಲಸಿತ್ ಮಾಲಿಂಗ ಅವರೊಂದಿಗೆ ಕೆಲಸ ಮಾಡಲಿದ್ದಾರೆ ಎಂದು ತನ್ನ ಪ್ರಕಟಣೆಯಲ್ಲಿ ಫ್ರಾಂಚೈಸಿ ತಿಳಿಸಿದೆ.
ಮುಂಬೈ ಇಂಡಿಯನ್ಸ್‌ನಲ್ಲಿ ಪಾರಸ್ ಮಾಂಬ್ರೆ ಅವರಿಗೆ ಇದು ಎರಡನೇ ಅವಧಿಯಾಗಿದೆ. ಮಾಂಬ್ರೆ 1996 ರಿಂದ 1998 ರವರೆಗೆ ಭಾರತಕ್ಕಾಗಿ 2 ಟೆಸ್ಟ್ ಮತ್ತು 3 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆದರೆ ಅವರು ಮುಂಬೈನೊಂದಿಗೆ ಅದ್ಭುತ ದೇಶೀಯ ಕ್ರಿಕೆಟ್ ವೃತ್ತಿಜೀವನವನ್ನು ಹೊಂದಿದ್ದು, ಐದು ಬಾರಿ ರಣಜಿ ಚಾಂಪಿಯನ್ಸ್ ಆಗಿದ್ದಾರೆ.
ಪರಾಸ್ ಮಾಂಬ್ರೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಿಂದ (ಎನ್‌ಸಿಎ) 3ನೇ ಹಂತದ ಕೋಚಿಂಗ್ ಡಿಪ್ಲೊಮಾವನ್ನು ಹೊಂದಿದ್ದಾರೆ. ಅವರು ಟೀಮ್ ಇಂಡಿಯಾ ಸೇರುವ ಮೊದಲು ದೇಶೀಯ ಕ್ರಿಕೆಟ್‌ನಲ್ಲಿ ಮಹಾರಾಷ್ಟ್ರ, ಬರೋಡಾ, ವಿದರ್ಭ (2016-17) ಮತ್ತು ಬಂಗಾಳದ ತರಬೇತುದಾರರಾಗಿ ಕೆಲಸ ಮಾಡಿದ್ದರು. ಮಾಂಬ್ರೆ ಈ ಹಿಂದೆ ಭಾರತ ಎ ಮತ್ತು ಅಂಡರ್-19 ತಂಡಗಳ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಇದಾದ ನಂತರ ಅವರು ರಾಹುಲ್ ದ್ರಾವಿಡ್ ನೇತೃತ್ವದ ಕೋಚಿಂಗ್ ಸಿಬ್ಬಂದಿಯ ವಿಶ್ವಾಸಾರ್ಹ ಸದಸ್ಯರಲ್ಲಿ ಒಬ್ಬರಾಗಿದ್ದರು.
ಇತ್ತೀಚೆಗೆ ಮುಂಬೈ ಇಂಡಿಯನ್ಸ್ ತಮ್ಮ ಹೆಡ್‌ಕೋಚ್ ಮಾರ್ಕ್ ಬೌಚರ್ ಅವರನ್ನು ವಜಾಗೊಳಿಸಿತ್ತು. ಮಾರ್ಕ್ ಬೌಚರ್ ಬದಲಿಗೆ ಶ್ರೀಲಂಕಾದ ಮಾಜಿ ದಿಗ್ಗಜ ಬ್ಯಾಟರ್ ಮಹೇಲಾ ಜಯವರ್ಧನೆ ಅವರನ್ನು ಕೋಚ್ ಆಗಿ ನೇಮಿಸಲಾಗಿತ್ತು. ಜಯವರ್ಧನೆ ಈ ಹಿಂದೆ 2017 ರಿಂದ 2022 ರವರೆಗೆ ಮುಂಬೈ ತಂಡದ ಕೋಚ್ ಆಗಿದ್ದರು. ಈ ಅವಧಿಯಲ್ಲಿ ಮುಂಬೈ 3 ಬಾರಿ ಚಾಂಪಿಯನ್ ಆಗಿತ್ತು.