ಇಂಡಿಯನ್ ಪ್ರೀಮಿಯರ್ ಲೀಗ್ ರೋಚಕತೆ ದಿನ ಕಳೆದಂತೆ ಹೆಚ್ಚಾಗುತ್ತಲೆ ಇದೆ. ಈ ವೇಳೆ ಎಲ್ಲ ತಂಡಗಳು ಪ್ಲೇ ಆಫ್ ಮೇಲೆ ಚಿತ್ತ ನೆಟ್ಟಿವೆ. ಇನ್ನು ಹಲವು ತಂಡಗಳು ತಮ್ಮ ಗೆಲುವಿನ ಲಯವನ್ನು ಕಂಡುಕೊಳ್ಳಲು ಹೆಣಗಾಟ ನಡೆಸಿದ್ದಾರೆ. ಈ ಎಲ್ಲ ತಂಡಗಳು ಪ್ಲೇ ಆಫ್ ಪ್ರವೇಶಿಸುವ ಲೆಕ್ಕಾಚಾರವನ್ನು ಕಾಣುತ್ತಿವೆ. ಈ ವೇಳೆ ಹಲವು ತಂಡಗಳು ಒಂದು ಕಾಲು ಪ್ಲೇ ಆಫ್‌ಗೆ ಇಟ್ಟು ಆಗಿವೆ. ಇನ್ನು ಹಲವು ತಂಡಗಳು ಲೆಕ್ಕಾಚಾರ ಆರಂಭಿಸಿವೆ.
ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಒಟ್ಟು 47 ಪಂದ್ಯಗಳು ಮುಗಿದಿವೆ (ಏ.29ರ ವರೆಗಿನ ಮಾಹಿತಿ). ಈ ವೇಳೆ ಆರ್‌ಸಿಬಿ ಅಮೋಘ ಪ್ರದರ್ಶನ ನೀಡುತ್ತಿದ್ದು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನ ಕಾಯ್ದುಕೊಂಡಿದೆ. ಆರ್‌ಸಿಬಿ ಇನ್ನು ಟೂರ್ನಿಯಲ್ಲಿ ನಾಲ್ಕು ಪಂದ್ಯಗಳನ್ನು ಆಡಬೇಕಿದೆ. ಈ ವೇಳೆ ಆರ್‌ಸಿಬಿ ಇನ್ನು ಒಂದು ಪಂದ್ಯವನ್ನು ಗೆದ್ರೂ ಸಗ ಪ್ಲೇ ಆಫ್‌ಗೆ ಸಲುಭವಾಗಿ ತಲುಪಬಹುದು.

ಆರ್‌ಸಿಬಿ ಪ್ಲೇ ಆಫ್‌ಗೆ ಪ್ರವೇಶಿಸುವ ಚಾನ್ಸ್ ಹೆಚ್ಚಿದೆ. ಇನ್ನು ಉಳಿದಿರುವ ನಾಲ್ಕು ಪಂದ್ಯಗಳಲ್ಲಿ ಎರಡರಿಂದ ಮೂರು ಪಂದ್ಯಗಳನ್ನು ಗೆದ್ದಲ್ಲಿ ಅಂಕ ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಲ್ಲಿ ಒಂದನ್ನು ಪಡೆಯಬಹುದಾಗಿದೆ. ಈ ಸ್ಥಾನವನ್ನು ಪಡೆದಿದ್ದೇ ಆದಲ್ಲಿ ಹೆಚ್ಚಿನ ಪ್ರಯೋಜನಗಳು ಸಿಗಲಿವೆ. ಇನ್ನು ಬೇರೆ ತಂಡಗಳದ್ದ ಕಥೆ ಏನು ಎಂಬ ಬಗ್ಗೆ ವರದಿ ಇಲ್ಲಿದೆ.
ಹಾರ್ದಿಕ್ ಪಾಂಡ್ಯ ಮುಂದಾಳತ್ವದ ಮುಂಬೈ ಇಂಡಿಯನ್ಸ್ ಆರಂಭದಲ್ಲಿ ಸೋಲುಗಳನ್ನು ಕಂಡಿದ್ದು, ಈಗ ಸಾಲು ಸಾಲು ಗೆಲುವು ದಾಖಲಿಸಿದ್ದು ಎಲ್ಲರ ಗಮನ ಸೆಳೆದಿದೆ. ಅಲ್ಲದೆ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ತಂಡ ಈಗ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ ಎಂದರೆ ಆ ತಂಡದ ಸ್ಥಿರ ಪ್ರದರ್ಶನ ಕಾರಣ. ಈ ತಂಡಕ್ಕೂ ಇನ್ನು 4 ಪಂದ್ಯಗಳು ಆಡಲು ಸಿಗಲಿದ್ದು, ಈ ವೇಳೆ ಎರಡು ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದ್ರೂ, ಮುಂದಿನ ಹಂತಕ್ಕೆ ಸುಲಭಾಗಿ ಪ್ರವೇಶಿಸಲಿವೆ. ಇನ್ನು ಮುಂಬೈ 75ರಷ್ಟು ಪ್ಲೇ ಆಫ್‌ಗೆ ಪ್ರವೇಶಿಸಬಹುದಾಗಿದೆ.
ಪ್ರಸಕ್ತ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನಿಡುತ್ತಿರುವ ತಂಡಗಳಲ್ಲಿ ಗುಜರಾತ್ ಟೈಟಾನ್ಸ್ ತಂಡವೂ ಒಂದು. ಈ ತಂಡವು ಆಡಿದ 9 ಪಂದ್ಯಗಳಲ್ಲಿ 6 ಜಯ ಸಾಧಿಸಿದ್ದು 12 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಈ ತಂಡಕ್ಕೆ ಇನ್ನು ಐಪಿಎಲ್‌ನಲ್ಲಿ 5 ಪಂದ್ಯಗಳು ಆಡಲು ಸಿಗಲಿದ್ದು, ಈ ವೇಳೆ ಗುಜರಾತ್ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ರೂ ಸಹ ಸುಲಭವಾಗಿ ಮುಂದಿನ ಹಂತವನ್ನು ಪ್ರವೇಶಿಸಬಹುದಾಗಿದೆ.
ಈ ಬಾರಿಯ ಐಪಿಎಲ್ ಟ್ರೋಫಿಯನ್ನು ಗೆಲ್ಲಬಹುದಾದ ನೆಚ್ಚಿನ ತಂಡಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೂ ಸ್ಥಾನ. ಈ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದ್ದು, ಪಂದ್ಯದ ಗತಿಯನ್ನು ಯಾವುದೇ ಕ್ಷಣದಲ್ಲಿ ಬದಲಾಯಿಸ ಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಈ ಲೀಗ್‌ನಲ್ಲಿ ಈ ತಂಡ ಸೋಲುವ ಪಂದ್ಯಗಳನ್ನು ಗೆದ್ದು ಅಬ್ಬರಿಸಿದೆ. ಡೆಲ್ಲಿ ಆಡಿದ 9 ಪಂದ್ಯಗಳಲ್ಲಿ 6 ಜಯ, 3 ಸೋಲು ಕಂಡಿದ್ದು 12 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಈ ತಂಡಕ್ಕೂ ಪ್ಲೇ ಆಫ್‌ಗೆ ಪ್ರವೇಶಿಸುವ ಹೆಚ್ಚಿನ ಅವಕಾಶಗಳು ಇವೆ. ಡೆಲ್ಲಿ ಇನ್ನು ಲೀಗ್ ಹಂತದಲ್ಲಿ 5 ಪಂದ್ಯಗಳನ್ನು ಆಡಲಿದ್ದು ಈ ವೇಳೆ ಕನಿಷ್ಠ 2 ಪಂದ್ಯಗಳನ್ನು ಗೆದ್ದರೂ ಮುಂದಿನ ಹಂತವನ್ನು ಪ್ರವೇಶಿಸುವುದು ಖಚಿತ.

ಸದ್ಯ ಅಂಕ ಪಟ್ಟಿಯಲ್ಲಿ ಅಗ್ರ ನಾಲ್ಕು ಸ್ಥಾನಗಳನ್ನು ಪಡೆದಿರುವ ತಂಡಗಳಿಗೆ ಪ್ಲೇ ಆಫ್ ಪ್ರವೇಶಿಸುವ ಚಾನ್ಸ್ ಹೆಚ್ಚಿದೆ. ಆದರೆ ಐದರಿಂದ ಏಳು ಸ್ಥಾನಗಳಲ್ಲಿರುವ ತಂಡಗಳು ಸಹ ಪ್ಲೇ ಆಫ್ ತಲುಪವ ಕನಸು ಕಾಣುತ್ತಿವೆ. ಆದರೆ ಹಾದಿ ಮಾತ್ರ ತುಂಬ ಕಷ್ಟದ್ದಾಗಿದೆ. ಅದೃಷ್ಟ ಯಾರ ಕೈ ಹಿಡಿಯುತ್ತದೋ ಅವರು ಮುಂದಿನ ಹಂತವನ್ನು ಪ್ರವೇಶಿಸಲಿದ್ದಾರೆ.
ಯುವ ಹಾಗೂ ಅನುಭವಿ ಆಟಗಾರರಿಂದ ಕೂಡಿರುವ ಪಂಜಾಬ್ ಕಿಂಗ್ಸ್ ಸಹ ಪ್ಲೇ ಆಫ್ ಮೇಲೆ ಒಂದು ಕಣ್ಣು ನೆಟ್ಟಿದೆ. ಶ್ರೇಯಸ್ ಅಯ್ಯರ್ ಮುನ್ನಡೆಯ ಪಂಜಾಬ್ ಮುಂದಿನ ಹಂತವನ್ನು ಪ್ರವೇಶಿಸುವ ಅವಕಾಶವೂ ಅಂಕ ಪಟ್ಟಿಯಲ್ಲಿ ಕೆಳಗಿರುವ ತಂಡಗಳಲ್ಲಿ ಹೆಚ್ಚಾಗಿವೆ. ಪಂಜಾಬ್ ಇನ್ನು 5 ಪಂದ್ಯಗಳನ್ನು ಆಡಬೇಕಿದ್ದು ಈ ವೇಳೆ 3 ಪಂದ್ಯಗಳಲ್ಲಿ ಜಯ ಸಾಧಿಸಿದ್ರೂ ಮುಂದಿನ ಹಂತ ಪ್ರವೇಶಿಸಬಹುದು. ಪಂಜಾಬ್ ಮುಂದಿನ ಐದು ಪಂದ್ಯಗಳಲ್ಲಿ ಎರಡು ಪಂದ್ಯಗಳು ಅಂಕ ಪಟ್ಟಿಯಲ್ಲಿ ಟಾಪ್ ನಾಲ್ಕರಲ್ಲಿ ಇರುವ ತಂಡಗಳ ವಿರುದ್ಧವೇ ಇದೆ. ಹೀಗಾಗಿ ತನ್ನ ಸ್ಥಿರ ಪ್ರದರ್ಶನವನ್ನು ನೀಡಿದ್ದೇ ಆದಲ್ಲಿ ಗೆಲುವು ಸಾಧಿಸಬಹುದು. ಪಂಜಾಬ್ ಮುಂದಿನ ಹಾದಿ ಕೊಂಚ ಕಠಿಣ.
ಹೆಸರಾಂತ ಆಟಗಾರರನ್ನೇ ತನ್ನ ಒಡಲಿಲ್ಲ ಇಟ್ಟುಕೊಂಡಿರುವ ಲಕ್ನೋ ಸೂಪರ್ ಜೈಂಟ್ಸ್ ಆಡಿರುವ 10 ಪಂದ್ಯಗಳಲ್ಲಿ 5 ಜಯ, 5 ಸೋಲು ಕಂಡಿದ್ದು ನಿರಾಸೆ ಅನುಭವಿಸಿದೆ. ಈ ಲೀಗ್‌ನಲ್ಲಿ ಎಲ್‌ಎಸ್‌ಜಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರ ಹಿಂದೆ ದುಬಾರಿ ಆಟಗಾರ ರಿಷಭ್ ಪಂತ್ ಅವರ ಕಳಪೆ ಫಾರ್ಮ್ ಎದ್ದು ಕಾಣುತ್ತಿದೆ. ಇವರು ಮುಂದಿನ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನವನ್ನು ನೀಡಿದ್ದೇ ಆದಲ್ಲಿ ಪ್ಲೇ ಆಫ್ ಪ್ರವೇಶಿಸುವ ಆಸೆಯನ್ನು ಕಾಣಬಹುದು. ಆದರೆ ಲಕ್ನೋ ಮುಂದಿನ ಪಂದ್ಯಗಳಲ್ಲಿ ಗುಜರಾತ್, ಆರ್‌ಸಿಬಿ, ಮುಂಬೈ ಅಂತಹ ಬಲಿಷ್ಠ ತಂಡಗಳ ವಿರುದ್ಧ ಆಡಲಿದೆ. ಎಲ್‌ಎಸ್‌ಜಿ ಉಳಿದ 4 ಪಂದ್ಯಗಳಲ್ಲಿ 3 ಜಯ ಸಾಧಿಸಿದರೂ ಸುಲಭವಾಗಿ ಮುಂದಿನ ಹಂತವನ್ನು ಪ್ರವೇಶಿಸಬಹುದು. ಇದಕ್ಕಾಗಿ ಇವರು ಸಂಘಟಿತ ಆಟದ ಪ್ರದರ್ಶನ ನೀಡುವ ಅನಿವಾರ್ಯತೆ ಇದೆ.
ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಹಾಲಿ ರನ್ನರ್ ಅಪ್ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಂದಿನ ಹಂತವನ್ನು ಪ್ರವೇಶಿಸುವುದು ಅವರ ಪ್ರದರ್ಶನದ ಮೇಲೆ ನಿಂತಿದೆ. ಈ ಎರಡೂ ತಂಡಗಳು ತಲಾ 9 ಪಂದ್ಯಗಳನ್ನು ಆಡಿದ್ದು ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದ್ದು 6 ಅಂಕಗಳನ್ನು ಕಲೆ ಹಾಕಿವೆ. ಉಭಯ ತಂಡಗಳು ಇನ್ನು 5 ಪಂದ್ಯಗಳನ್ನು ಆಡುವುದು ಬಾಕಿ ಇವೆ. ಈ ವೇಳೆ ಈ ಐದು ಪಂದ್ಯಗಳನ್ನು ಗೆದ್ದಲ್ಲಿ ಪ್ಲೇ ಆಫ್ ಕನಸು ಕಾಣಬಹುದಾಗಿದೆ. ಆದರೆ ಇದರ ಪೂರ್ಣ ಲೆಕ್ಕಾಚಾರಗಳು ತಂಡ ನೀಡುವ ಫಲಿತಾಂಶದ ಮೇಲೆ ನಿಂತಿದೆ.
ಆರ್‌ಆರ್ ತಂಡಕ್ಕೆ ಪ್ಲೇ ಆಫ್ ಪ್ರವೇಶಿಸುವ ಆಸೆ ಮುಚ್ಚಿದೆ ಎಂದು ಹೇಳಲು ಅಸಾಧ್ಯ. ಆದರೆ ರಾಜಸ್ಥಾನ ಮುಂದಿನ 4 ಪಂದ್ಯಗಳಲ್ಲಿ ನಾಲ್ಕನ್ನೂ ಗೆದ್ದಲ್ಲಿ 14 ಅಂಕಗಳನ್ನು ಕಲೆ ಹಾಕುತ್ತದೆ. ಆಗ ರನ್ ರೇಟ್ ಆಧಾರದ ಮೇಲೆ ಮುಂದಿನ ಹಂತದ ಪ್ರವೇಶದ ಲೆಕ್ಕಾಚಾರವನ್ನು ಆರಂಭಿಸಬಹುದು. ಹೀಗಾಗಿ ರಾಜಸ್ಥಾನ ಮುಂದಿನ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡುವುದು ಅನಿವಾರ್ಯ. ಇನ್ನು ಆಡಿರುವ 9 ಪಂದ್ಯಗಳಲ್ಲಿ 2 ಜಯ ಸಾಧಿಸಿರುವ ಸಿಎಸ್‌ಕೆ ಈಗಾಗಲೇ ಪ್ಲೇ ಆಫ್ ರೇಸ್‌ನಿಂದ ದೂರ ಸರಿದಿದೆ.