ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಟೂರ್ನಿ ಮಾರ್ಚ್‌ನಲ್ಲಿ ಪ್ರಾರಂಭವಾಗಲಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಉತ್ಸಾಹ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರ ನಡುವೆ ಐಪಿಎಲ್ 2025ರ ಟೂರ್ನಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ 8ನೇ ಹೊಸ ನಾಯಕನ ಅಧಿಕೃತ ಘೋಷಣೆ ಆಗಿದೆ. ಫಾಫ್ ಡು ಪ್ಲೆಸಿಸ್ ಬಿಡುಗಡೆಯಾದ ನಂತರ ಆರ್‌ಸಿಬಿ ಹೊಸ ನಾಯಕನ ಹುಡುಕಾಟದಲ್ಲಿತ್ತು. ಇದೀಗ ಆರ್‌ಸಿಬಿ ತಂಡಕ್ಕೆ ರಜತ್ ಪಾಟಿದಾರ್ ಹೊಸ ನಾಯಕನಾಗಿ ನೇಮಕಗೊಂಡಿದ್ದಾರೆ.
ರಜತ್ ಪಾಟಿದಾರ್ ಕಳೆದೆ ಹಲವು ವರ್ಷಗಳಿಂದ ಆರ್‌ಸಿಬಿ ಪರ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ತಂಡ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ನೆರವಾಗಿದ್ದಾರೆ. ಪಾಟಿದಾರ್ ನಾಯಕನಾಗಿ ನೇಮಕಗೊಳ್ಳುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳಲ್ಲಿ ಸಂಭ್ರಮಾಚರಣೆ ಮನೆ ಮಾಡಿದೆ.

31 ವರ್ಷದ ರಜತ್ ಪಟಿದಾರ್ 2021 ರಿಂದ ಆರ್‌ಸಿಬಿ ತಂಡದಲ್ಲಿದ್ದಾರೆ. ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ, ಪಾಟಿದಾರ್ ಅವರನ್ನು ಆರ್‌ಸಿಬಿ ತಂಡವು 11 ಕೋಟಿ ರೂ. ನೀಡುವ ಮೂಲಕ ಬೃಹತ್ ಮೊತ್ತಕ್ಕೆ ಉಳಿಸಿಕೊಂಡಿತು.
ದೇಶೀಯ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶ ತಂಡವನ್ನು ರಜತ್ ಪಾಟಿದಾರ್ ಮುನ್ನಡೆಸುತ್ತಿದ್ದಾರೆ. ರಜತ್ ಪಟಿದಾರ್ ನಾಯಕತ್ವದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಇತ್ತೀಚೆಗೆ, ಅವರ ನಾಯಕತ್ವದಲ್ಲಿ, ರಜತ್ ಪಟಿದಾರ್ ಮಧ್ಯಪ್ರದೇಶ ತಂಡವನ್ನು ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯ ಫೈನಲ್‌ಗೆ ಮುನ್ನಡೆಸಿದರು.
ಸೈಯದ್ ಮುಷ್ತಾಕ್ ಅಲಿ 2024ರ ಟಿ20 ಟ್ರೋಫಿಯಲ್ಲಿ 10 ಪಂದ್ಯಗಳಲ್ಲಿ ರಜತ್ ಪಾಟಿದಾರ್ 61.14 ರ ಸರಾಸರಿಯಲ್ಲಿ 428 ರನ್ ಗಳಿಸಿದ್ದರು. ಈ ವೇಳೆ ರಜತ್ ಪಾಟಿದಾರ್ 5 ಅರ್ಧಶತಕಗಳನ್ನು ಬಾರಿಸಿದ್ದರು. ಟೂರ್ನಿಯುದ್ದಕ್ಕೂ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದ ಪಾಟಿದಾರ್ 31 ಸಿಕ್ಸರ್‌ಗಳು ಮತ್ತು 32 ಬೌಂಡರಿಗಳನ್ನು ಸಿಡಿಸಿದ್ದರು. ಈಗ ಮಾಜಿ ನಾಯಕ ವಿರಾಟ್ ಕೊಹ್ಲಿ ಬೆಂಬಲದೊಂದಿಗೆ ಪಾಟಿದಾರ್ ಹೇಗೆ ತಂಡದ ನಾಯಕತ್ವ ನಿರ್ವಹಿಸಲಿದ್ದಾರೆ ಎಂಬುದು ಆರ್‌ಸಿಬಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ರಜತ್ ಪಾಟಿದಾರ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಇದುವರೆಗೆ 27 ಪಂದ್ಯಗಳನ್ನು ಆಡಿದ್ದಾರೆ. ಪಾಟಿದಾರ್ 27 ಐಪಿಎಲ್ ಪಂದ್ಯಗಳಲ್ಲಿ 34.74 ಸರಾಸರಿಯಲ್ಲಿ 799 ರನ್ ಗಳಿಸಿದ್ದಾರೆ. ಅವರು ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಒಂದು ಶತಕ ಮತ್ತು 7 ಅರ್ಧಶತಕಗಳನ್ನು ಹೊಂದಿದ್ದಾರೆ.
ರಜತ್ ಪಾಟಿದಾರ್ 68 ಪ್ರಥಮ ದರ್ಜೆ ಪಂದ್ಯಗಳಲ್ಲಿ 4738 ರನ್ ಗಳಿಸಿದ್ದು, ಇದರಲ್ಲಿ 13 ಶತಕಗಳು ಮತ್ತು 24 ಅರ್ಧಶತಕಗಳು ಸೇರಿವೆ. ಇನ್ನೂ 64 ಲಿಸ್ಟ್-ಎ ಪಂದ್ಯಗಳಲ್ಲಿ 2211 ರನ್ ಕಲೆ ಹಾಕಿದ್ದಾರೆ. ತಮ್ಮ ಲಿಸ್ಟ್-ಎ ವೃತ್ತಿಜೀವನದಲ್ಲಿ ಪಟಿದಾರ್ 4 ಶತಕಗಳು ಮತ್ತು 13 ಅರ್ಧಶತಕಗಳನ್ನು ಸಿಡಿಸಿದ್ದಾರೆ. ರಜತ್ ಪಾಟಿದಾರ್ ಒಟ್ಟಾರೆ 75 ಟಿ20 ಪಂದ್ಯಗಳಲ್ಲಿ 2463 ರನ್ ಗಳಿಸಿದ್ದಾರೆ, ಇದರಲ್ಲಿ 1 ಶತಕ ಮತ್ತು 24 ಅರ್ಧಶತಕಗಳು ಸೇರಿವೆ.
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರ, ಲಿಯಾಮ್ ಲಿವಿಂಗ್‌ಸ್ಟೋನ್, ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ಜಾಕೋಬ್ ಬೆಥೆಲ್, ರೊಮಾರಿಯೊ ಶೆಫರ್ಡ್, ಸ್ವಪ್ನಿಲ್ ಸಿಂಗ್, ಮನೋಜ್ ಭಾನಗೆ, ಜೋಶ್ ಹ್ಯಾಜಲ್‌ವುಡ್, ಭುವನೇಶ್ವರ್ ಕುಮಾರ್, ರಸಿಕ್ ಸಲಾಂ, ಯಶ್ ದಯಾಳ್, ಸುಯಾಶ್ ಶರ್ಮಾ, ನುವಾನ್ ತುಷಾರ, ಲುಂಗಿ ಎನ್‌ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಾಠಿ.
ರಾಹುಲ್ ದ್ರಾವಿಡ್ (ಭಾರತ) - 2008-2008
ಕೆವಿನ್ ಪೀಟರ್ಸನ್ (ಇಂಗ್ಲೆಂಡ್) - 2009-2009
ಅನಿಲ್ ಕುಂಬ್ಳೆ (ಭಾರತ) - 2009-2010
ಡೇನಿಯಲ್ ವೆಟ್ಟೋರಿ (ನ್ಯೂಜಿಲೆಂಡ್) - 2011-2012
ವಿರಾಟ್ ಕೊಹ್ಲಿ (ವಿರಾಟ್ ಕೊಹ್ಲಿ) - 2011-2023
ಶೇನ್ ವ್ಯಾಟ್ಸನ್ (ಆಸ್ಟ್ರೇಲಿಯಾ) - 2017-2017
ಫಾಫ್ ಡು ಪ್ಲೆಸಿಸ್ (ದಕ್ಷಿಣ ಆಫ್ರಿಕಾ) - 2022-2024
ರಜತ್ ಪಾಟಿದಾರ್ (ಭಾರತ) 2025-